ಕಳಸ: ಹೊರನಾಡಿನಲ್ಲಿ ದಿ.ವೆಂಕಟಸುಬ್ಬಾ ಜೋಯಿಸ್ ಮತ್ತು ದಿ. ನರಸಮ್ಮ ವೆಂಕಟಸುಬ್ಬಾ ಜೋಯಿಸ್ ಅವರ ಕಂಚಿನ ಪುತ್ಥಳಿಯನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಗುರುವಾರ ಅನಾವರಣಗೊಳಿಸಿದರು.
ನಂತರ ಮಾತನಾಡಿದ ಅವರು, ಹೊರನಾಡು ಸರ್ವಧರ್ಮ ಸಮನ್ವಯದ ಪಾವನ ಭೂಮಿ. ದಿ.ವೆಂಕಟಸುಬ್ಬಾ ಜೋಯಿಸ್ ಅವರು ಕರ್ಮಯೋಗಿ, ಬಹುಮುಖ ಪ್ರತಿಭೆಯ ಸಮಾಜ ಸೇವಕ ಆಗಿದ್ದರು. ಅವರ ಕೊಡುಗೆಯಿಂದ ಹೊರನಾಡು ಶಕ್ತಿಕೇಂದ್ರವಾಗಿ ಬೆಳೆದಿದೆ. 50 ವರ್ಷಗಳ ಹಿಂದೆ ಅವರು ದೇವಸ್ಥಾನದ ಜೀರ್ಣೋದ್ಧಾರ ಮಾಡಿದ್ದರಿಂದ ಭಕ್ತರಿಗೆ ಅನುಕೂಲವಾಗಿದೆ. ಜಿ.ಭೀಮೇಶ್ವರ ಜೋಷಿ ಕೂಡ ಧಾರ್ಮಿಕ, ಸಾಂಸ್ಕ್ರತಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ಮುಂದೆ ಇರುವವರು ಎಂದರು.
ವೆಂಕಟಸುಬ್ಬಾ ಜೋಯಿಸ್ ಬದುಕು ಮತ್ತು ಸಾಧನೆ ಬಗೆಗಿನ ‘ಅನ್ನಪೂರ್ಣಾ ಪಾದಸೇವಾ ದುರಂಧರ’ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಲಾಯಿತು.
ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್, ವೆಂಕಟಸುಬ್ಬಾ ಜೋಯಿಸ್ ಅವರಿಗೆ ನುಡಿ ನಮನ ಸಲ್ಲಿಸಿದರು. ವೆಂಕಟಸುಬ್ಬಾ ಜೋಯಿಸ್ ವೇದ, ಖಗೋಳ, ವಾಸ್ತು ಶಾಸ್ತ್ರಗಳ ಪರಿಣತಿ ಹೊಂದಿದ್ದರು. ಸತತ ಏಳು ವರ್ಷಗಳ ಕಾಲ ಪರಿಶ್ರಮವಹಿಸಿ, ದೇಗುಲದ ಪುನರ್ ನಿರ್ಮಾಣ ಮಾಡಿದ್ದಾರೆ ಎಂದರು.
ಹರಿಹರಪುರ ಮಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಜಿ.ಭೀಮೇಶ್ವರ ಜೋಷಿ ಮಾತನಾಡಿ, ವೆಂಕಟಸುಬ್ಬಾ ಜೋಯಿಸ್ ಅವರಿಗೆ ಧಾರ್ಮಿಕ ಚಟುವಟಿಕೆ ಜೊತೆಗೆ ಅನ್ನ, ಅಕ್ಷರ ಮತ್ತು ಸೂರು ಕೊಡಬೇಕು ಎಂಬ ಕಲ್ಪನೆ 50 ವರ್ಷಗಳ ಹಿಂದೆಯೇ ಇತ್ತು ಎಂದರು.
ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಕೈಜೋಡಿಸಲು ಹೊರನಾಡು ಕ್ಷೇತ್ರದ ಪರವಾಗಿ ಭೀಮೇಶ್ವರ ಜೋಷಿ, ಕೇಂದ್ರದ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ₹10 ಲಕ್ಷ ಮೊತ್ತದ ಚೆಕ್ ಹಸ್ತಾಂತರಿಸಿದರು.
ಶಾಸಕಿ ನಯನಾ ಮೋಟಮ್ಮ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಪತ್ರಕರ್ತ ವಿಶೇಶ್ವರ ಭಟ್ ಹಾಜರಿದ್ದರು. ಗೃಹಲಕ್ಷ್ಮಿ ಯೋಜನೆಯಡಿ ಹೆಂಚು, ಆನಂದ ಜ್ಯೋತಿ ಯೋಜನೆಯಡಿ ವಿದ್ಯುಚ್ಛಕ್ತಿ ಸಂಪರ್ಕ ಪತ್ರ, ಕೃಷಿ ಸಮೃದ್ಧಿ ಯೋಜನೆಯಡಿ ಕೃಷಿ ಉಪಕರಣಗಳ ವಿತರಣೆ ಹಾಗೂ ಮಹಿಳಾ ಅಭಿವೃದ್ಧಿ ಯೋಜನೆಯಡಿ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.
ದೇವಸ್ಥಾನದ ಆಡಳಿತ ಮಂಡಳಿಯ ರಾಮನಾರಾಯಣ ಜೋಷಿ, ರಾಜಲಕ್ಷ್ಮಿ ಜೋಷಿ, ರಾಜಗೋಪಾಲ ಜೋಷಿ, ಗಿರಿಜಾಶಂಕರ ಜೋಷಿ, ವೆಂಕಟಸುಬ್ಬಾ ಜೋಷಿ ಭಾಗವಹಿಸಿದ್ದರು. ಮಂಟಪ ನಿರ್ಮಾಣ ಮಾಡಿದ ಶಿಲ್ಪಿ ಮಹೇಶ್ ಹಾಗೂ ಕಂಚಿನ ಪುತ್ಥಳಿ ನಿರ್ಮಾಣ ಮಾಡಿದ ಶಿಲ್ಪಿ ವೇಣುಗೋಪಾಲ್ ಅವರನ್ನು ಸನ್ಮಾನಿಸಲಾಯಿತು.
‘ಸೇವೆಗೆ ಹೊರನಾಡು ಮಾದರಿ’
ಉತ್ತರದ ಪುಣ್ಯಕ್ಷೇತ್ರಗಳ ಹಾಗೆ ಹೊರನಾಡು ಕ್ಷೇತ್ರವು ದಕ್ಷಿಣ ಭಾರತದ ಪ್ರಮುಖ ಪುಣ್ಯಕ್ಷೇತ್ರ. ಧಾರ್ಮಿಕ ಸೇವಾ ಕ್ಷೇತ್ರಗಳಲ್ಲಿ ಹೊರನಾಡು ಮಾದರಿಯಾಗಿದೆ. ವೆಂಕಟಸುಬ್ಬಾ ಜೋಷಿ ಕಾಲದಲ್ಲಿ ಹೊರನಾಡು ಶಕ್ತಿಯುತ ಕ್ಷೇತ್ರವಾಗಲು ಬುನಾದಿ ದೊರೆಯಿತು. ಆ ಕಾಲದಲ್ಲೇ ಅನ್ನದಾನದ ಜೊತೆಗೆ ಭಕ್ತರ ಅನುಕೂಲಕ್ಕೆ ಛತ್ರ ಕೂಡ ನಿರ್ಮಿಸಲಾಗಿತ್ತು. ಜನರ ಸರ್ವತೋಮುಖ ಏಳಿಗೆಯಲ್ಲಿ ಕ್ಷೇತ್ರವು ಗಮನಾರ್ಹ ಕೆಲಸ ಮಾಡುತ್ತಿದೆ ಎಂದು ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.