ಮೂಡಿಗೆರೆ: ಕಾಡುಕೋಣದ ದಾಳಿಗೆ ಕಾಫಿ ಬೆಳೆಗಾರ ಸಾವನ್ನಪ್ಪಿದ ಘಟನೆ ದುರ್ಗದಹಳ್ಳಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ವರ್ತೆಮನೆ ನಿವಾಸಿ, ಕೃಷಿಕ ಡಿ.ವಿ. ರಮೇಶ್ ಗೌಡ (52) ಮೃತಪಟ್ಟವರು.
ದುರ್ಗದಹಳ್ಳಿ ಸಮೀಪ ಹಲಗಡಕ ಎಂಬಲ್ಲಿರುವ ತಮ್ಮ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಕೋಣ ಹಿಂಬದಿಯಿಂದ ರಮೇಶ್ ಅವರ ಮೇಲೆ ದಾಳಿ ಮಾಡಿದೆ. ತೋಟದಲ್ಲಿ ರಮೇಶ್ ಒಬ್ಬರೇ ಇದ್ದುದರಿಂದ ಬಹಳ ಹೊತ್ತು ವಿಷಯ ಯಾರಿಗೂ ತಿಳಿದಿರಲಿಲ್ಲ. ಅವರು, ನೋವಿನಿಂದ ಜೋರಾಗಿ ಕಿರುಚುತ್ತಿದ್ದ ಶಬ್ದ ಕೇಳಿ ಪಕ್ಕದ ಹಲಗಡಕ ಎಸ್ಟೇಟ್ ರೈಟರ್ ಹಾಗೂ ಕಾರ್ಮಿಕರು ಸ್ಥಳಕ್ಕೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ತೀವ್ರ ಗಾಯಗೊಂಡಿದ್ದ ಅವರನ್ನು ಕಳಸ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರಿಗೆ ಪತ್ನಿ, ಪುತ್ರ ಇದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಕಳಸ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮೃತರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಇತ್ತೀಚೆಗೆ ಮೂಡಿಗೆರೆ-ಕಳಸ ಭಾಗದಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ಅನೇಕ ಮಂದಿ ಕಾಡುಕೋಣ ದಾಳಿಯಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ಕಾಡು ಪ್ರಾಣಿಗಳ ದಾಳಿಗೆ ಶಾಶ್ವತ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.