ADVERTISEMENT

ಎಮ್ಮೆದೊಡ್ಡಿಯಲ್ಲಿ ಚಿರತೆ ದಾಳಿ: ಇಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 6:33 IST
Last Updated 1 ಆಗಸ್ಟ್ 2025, 6:33 IST
ಎಮ್ಮೆದೊಡ್ಡಿ ಬಳಿ ಗುರುವಾರ ಗ್ರಾಮಸ್ಥರ ಮೇಲೆ ದಾಳಿ ಮಾಡಿದ ಚಿರತೆ
ಎಮ್ಮೆದೊಡ್ಡಿ ಬಳಿ ಗುರುವಾರ ಗ್ರಾಮಸ್ಥರ ಮೇಲೆ ದಾಳಿ ಮಾಡಿದ ಚಿರತೆ   

ಕಡೂರು: ತಾಲ್ಲೂಕಿನ ಎಮ್ಮೆದೊಡ್ಡಿ ಪಂಚಾಯಿತಿಯ ಸಿದ್ದರಹಳ್ಳಿ ಬಳಿ ಗುರುವಾರ ಚಿರತೆ ಇಬ್ಬರ ಮೇಲೆ ದಾಳಿ ನಡೆಸಿ, ಗಾಯಗೊಳಿಸಿದೆ.

ಗಾಯಗೊಂಡ ಇಬ್ಬರನ್ನು ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುರುವಾರ ಬೆಳಿಗ್ಗೆ ಮದಗದಕೆರೆ ಮೇಲ್ಭಾಗದ ಸಣ್ಣಸಿದ್ದರಹಳ್ಳಿಯ ಮಂಜುನಾಥ ಅವರು ತಮ್ಮ ಮೊಮ್ಮಗನ ಜತೆ ಬೈಕ್‌ನಲ್ಲಿ ಕಡೂರು ಕಡೆಗೆ ಹೊರಟಿದ್ದಾಗ ಗ್ರಾಮದ ರಸ್ತೆಯಲ್ಲಿ ಏಕಾಏಕಿ ದಾಳಿ ಮಾಡಿದ ಚಿರತೆ ಅವರ ಎಡ ಕಿಬ್ಬೊಟ್ಟೆಯನ್ನು ಕಿತ್ತು ಗಾಯಗೊಳಿಸಿದೆ. ಇದಾದ ಸ್ವಲ್ಪ ಹೊತ್ತಿನಲ್ಲೇ ದೊಡ್ಡಸಿದ್ದರಹಳ್ಳಿಯ ಮೂರ್ತಪ್ಪ ಅವರು ಜಮೀನಿನ ಕಡೆ ಹೊರಟಿದ್ದಾಗ ಅವರ ಮೇಲೂ ದಾಳಿ ಮಾಡಿದ ಚಿರತೆ ಅವರ ಎಡಗೈಯನ್ನು ಕಿತ್ತು ಗಾಯಗೊಳಿಸಿದೆ. ಇದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಕಲ್ಲು ಎಸೆದು ಕೂಗಾಡಿ ಚಿರತೆಯ ಬೆನ್ನಟ್ಟಿ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಮೇಲ್ಭಾಗದ ಕಾಡಿನ ಕಡೆಗೆ ಅಟ್ಟಿದ್ದರು.

ADVERTISEMENT

ಈ ಘಟನೆಯ ಬಳಿಕ ದೊಡ್ಡಸಿದ್ದರಹಳ್ಳಿ ಆದ ಮಂಜುನಾಥ ಎಂಬುವವರು ಬೈಕ್‌ನಲ್ಲಿ ಗ್ರಾಮಕ್ಕೆ ಬರುತ್ತಿದ್ದಾಗ ಅವರ ಮೇಲೂ ಚಿರತೆ ದಾಳಿ ಮಾಡಲು ಯತ್ನಿಸಿದೆ. ಸ್ಥಳದಲ್ಲಿದ್ದ ಗ್ರಾಮಸ್ಥರು ಚಿರತೆಯನ್ನು ಮತ್ತೆ ಕಾಡಿನತ್ತ ಓಡಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಬೇರೆಲ್ಲೋ ಹಿಡಿದ ಚಿರತೆಯನ್ನು ಇಲ್ಲಿ ತಂದು ಬಿಟ್ಟು ಜನರ ಪ್ರಾಣದ ಜತೆ ಚೆಲ್ಲಾಟವಾಡುತ್ತಿದ್ದೀರಿ ಎಂದು ಕೂಗಾಡಿದರು.

ಕಡೂರು ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.