ಕಡೂರು: ತಾಲ್ಲೂಕಿನ ಕುಪ್ಪಾಳು ವಲಯದ ಸ.ನಂ 90/2ರ ವಲಯದಲ್ಲಿ ಚಿರತೆಯೊಂದು ಸಾವಿಗೀಡಾಗಿದೆ.
ಸುಮಾರು 8ರಿಂದ 10ರ ವಯೋಮಾನದ ಚಿರತೆಯು ಮತ್ತೊಂದು ಚಿರತೆಯ ಜತೆ ಕಾದಾಟದ ವೇಳೆ ಗಾಯಗೊಂಡು ಸಾವಿಗೀಡಾಗಿದೆ. ಚಿರತೆಯ ಬೆನ್ನು, ಮುಖದ ಮೇಲೆ ಗಾಯ ಮತ್ತು ಹಲ್ಲಿನ ಗುರುತುಗಳು ಮೂಡಿದ್ದು ಸೋಂಕಿನಿಂದ ನಿತ್ರಾಣಗೊಂಡಿತ್ತು. ಗ್ರಾಮಸ್ಥರ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಸ್ಥಳಕ್ಕ ತೆರಳುವ ವೇಳೆಗೆ ಮೃತಪಟ್ಟಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಡೂರು ಜೆಎಂಎಫ್‌ಸಿ ನ್ಯಾಯಾಧೀಶರ ಅನುಮತಿ ಪಡೆದು ಚಿರತೆಯ ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಿ ಕಡೂರು ಅರಣ್ಯಾಧಿಕಾರಿ ಕಚೇರಿ ಆವರಣದಲ್ಲಿ ಸುಟ್ಟುಹಾಕಲಾಯಿತು ಎಂದು ಇಲಾಖೆ ಮೂಲಗಳು ತಿಳಿಸಿವೆ. ಈ ಸಂದರ್ಭದಲ್ಲಿ ಎಸಿಎಫ್ ಮೋಹನ್ ನಾಯ್ಕ, ಆರ್‌ಎಫ್‌ಒ ಹರೀಶ್, ತಂಗಲಿ ಉಪವಲಯ ಅರಣ್ಯಾಧಿಕಾರಿ ವೆಂಕಪ್ಪ ಗೋವಣ್ಣನವರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.