ADVERTISEMENT

ಚಿಕ್ಕಮಗಳೂರು: ನೀರೆತ್ತದ ಏತ ನೀರಾವರಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 6:19 IST
Last Updated 4 ಮಾರ್ಚ್ 2024, 6:19 IST
ನರಸಿಂಹರಾಜಪುರ ತಾಲ್ಲೂಕು ಹೊನ್ನೆಕೂಡಿಗೆ ಏತನೀರಾವರಿ ಯೋಜನೆಗೆ ನೀರು ಹಾಯಿಸಲು ಅಳವಡಿಸಬೇಕಾಗಿರುವ ಕೊಳವೆಗಳು ಸಂಗ್ರಹಿಸಿಟ್ಟು ಹಲವು ವರ್ಷಗಳಿಂದ ರಸ್ತೆ ಬದಿಯಲ್ಲಿ ಬಿದ್ದಿರುವುದು
ನರಸಿಂಹರಾಜಪುರ ತಾಲ್ಲೂಕು ಹೊನ್ನೆಕೂಡಿಗೆ ಏತನೀರಾವರಿ ಯೋಜನೆಗೆ ನೀರು ಹಾಯಿಸಲು ಅಳವಡಿಸಬೇಕಾಗಿರುವ ಕೊಳವೆಗಳು ಸಂಗ್ರಹಿಸಿಟ್ಟು ಹಲವು ವರ್ಷಗಳಿಂದ ರಸ್ತೆ ಬದಿಯಲ್ಲಿ ಬಿದ್ದಿರುವುದು   

ಚಿಕ್ಕಮಗಳೂರು: ಮಲೆನಾಡಿನ ಮಡಿಲು, ಹಲವು ನದಿಗಳ ಉಗಮ ಸ್ಥಾನವಾದರೂ ಜಿಲ್ಲೆಯ ಬಯಲ ಸೀಮೆಗೆ ನೀರಿನ ಬರ ನೀಗಿಲ್ಲ. ಬರಗಾಲದ ಈ ವರ್ಷ ಸಣ್ಣ ನೀರಾವರಿ ಇಲಾಖೆಯ ಚಿಕ್ಕಮಗಳೂರು ವಿಭಾಗದ ಯಾವುದೇ ಏತ ನೀರಾವರಿ ಯೋಜನೆ ಪಂಪ್‌ಗಳು ಆರಂಭವೇ ಆಗಲಿಲ್ಲ.

ಜಿಲ್ಲೆಯಲ್ಲಿ ಒಂಬತ್ತು ಏತ ನೀರಾವರಿ ಯೋಜನೆಗಳಿದ್ದು, ಅವುಗಳ ಪೈಕಿ ಆರು ಯೋಜನೆಗಳ ಕಾಮಗಾರಿ ಪೂರ್ಣಗೊಂಡಿವೆ. ಏರಡು ಏತ ನೀರಾವರಿ ಯೋಜನೆ ನಿಂತಲ್ಲೇ ನಿಂತಿದ್ದರೆ, ಒಂದು ಯೋಜನೆ ಆರಂಭವೇ ಆಗಿಲ್ಲ.

ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ಯೋಜನೆಗಳು ಪೂರ್ಣಗೊಂಡಿವೆ. ₹3.24 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡ ಕರಗಡ ಏತ ನೀರಾವರಿ ಯೋಜನೆ, ₹12.56 ಕೋಟಿ ವೆಚ್ಚದ ಹಿರೇಮಗಳೂರು ಕೆರೆಯಿಂದ ದಾಸರಹಳ್ಳಿ ಕೆರೆ ತುಂಬಿಸುವ ಯೋಜನೆ, ಬೈರಾಪುರ ಪಿಕಪ್‌ನಿಂದ ಮಾದರಸನಕೆರೆ ತುಂಬಿಸುವ ₹15.43 ಕೋಟಿ ವೆಚ್ಚದ ಯೋಜನೆ ಪೂರ್ಣಗೊಂಡಿವೆ. 

ADVERTISEMENT

ತರೀಕೆರೆ ತಾಲ್ಲೂಕಿನ ಪಿಳ್ಳಯ್ಯನಕೆರೆ ತುಂಬಿಸುವ ಯೋಜನೆ ಮತ್ತು ಗೋಪಾಲ ಏತ ನೀರಾವರಿ ಯೋಜನೆಗಳು ತಾಂತ್ರಿಕ ಸಮಸ್ಯೆ ಎದುರಿಸುತ್ತಿವೆ. ಎನ್.ಆರ್.ಪುರ ತಾಲ್ಲೂಕಿನ ಹೊನ್ನೆಕೂಡಿಗೆ ಏತ ನೀರಾವರಿ ಯೋಜನೆ ಹಲವು ದಶಕಗಳಿಂದ ನಿಂತಲ್ಲೇ ನಿಂತಿದ್ದು, ಕಡಹಿನಬೈಲು ಯೋಜನೆ ಚಾಲ್ತಿಯಲ್ಲಿದೆ.

ಮಳಲೂರು ಏತ ನೀರಾವರಿ ಯೋಜನೆ ಆರಂಭವಾಗಿ ಮೂರು ದಶಕಗಳೇ ಕಳೆದಿದೆ. ಆರಂಭದಲ್ಲಿ ₹2.56 ಕೋಟಿಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಎಸ್‌ಆರ್‌ ದರ ಹೆಚ್ಚಳದಿಂದ ಈಗ ಯೋಜನಾ ವೆಚ್ಚ ₹10 ಕೋಟಿಗೆ ಏರಿಕೆಯಾಗಿದೆ. 

ನೀರು ಮೇಲೆತ್ತುವ ಸ್ಥಳದಲ್ಲಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ, 13 ಎಕರೆ ಭೂಸ್ವಾಧೀನ ಬಾಕಿ ಇರುವುದರಿಂದ ತೊಡಕಾಗಿ ಪರಿಣಮಿಸಿದೆ. ರೈತರು ಸಮ್ಮತಿ ಇಲ್ಲದೆ ಹಗ್ಗ ಜಗ್ಗಾಟ ಮುಂದುವರಿದಿದೆ. ಜಾಕ್‌ವೆಲ್ ಸೇರಿದಂತೆ ಅಳವಡಿಕೆಯಾಗಿರುವ ಯಂತ್ರಗಳು ತುಕ್ಕು ಹಿಡಿಯುತ್ತಿವೆ.  

ಆರಂಭವೇ ಆಗದ ಬೆರಟಿಕೆರೆ ಯೋಜನೆ

ಅಯ್ಯನಕೆರೆ ಕೋಡಿಯಿಂದ ಹರಿಯುವ ನೀರನ್ನು ಹುಲಿಕೆರೆ ಗ್ರಾಮದ ಬೆರಟಿಕೆರೆಗೆ ತುಂಬಿಸುವ ₹9.90 ಕೋಟಿ ಮೊತ್ತದ ಏತ ನೀರಾವರಿ ಯೋಜನೆಗೆ ಸರ್ಕಾರ ಅನುಮೋದನೆ ದೊರೆತಿದೆ. ಸಣ್ಣ ನೀರಾವರಿ ಇಲಾಖೆ ಟೆಂಡರ್ ಪ್ರಕ್ರಿಯೆ ನಡೆಸಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿದೆ. ಆದರೆ ಹೊಸ ಕಾಮಗಾರಿಗಳನ್ನು ಆರಂಭಿಸದಂತೆ ಸರ್ಕಾರ ಆರಂಭದಲ್ಲಿ ನೀಡಿದ ಆದೇಶ ಹಿಂಪಡೆದಿಲ್ಲ. ಆದ್ದರಿಂದ ಈ ಯೋಜನೆ ಕಾರ್ಯಾರಂಭವಾಗಿಲ್ಲ. ಸರ್ಕಾರ ಅನುಮತಿ ನೀಡಿದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ನನೆಗುದಿಗೆ ಬಿದ್ದ ಹೊನ್ನೆಕೂಡಿಗೆ ಯೋಜನೆ

ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ 1978ರಿಂದ ಚಾಲನೆಗೊಂಡ ಹೊನ್ನೆಕೂಡಿಗೆ ಏತ ನೀರಾವರಿ ಯೋಜನೆ ಕಾಮಗಾರಿ ನನೆಗುದಿಗೆ ಬಿದ್ದಿದೆ. 1985ರಲ್ಲಿ ಈ ಯೋಜನೆಗೆ ಅನುಮೋದನೆ ದೊರೆಯಿತು. 1992ರಲ್ಲಿ ಟೆಂಡರ್ ಕರೆಯಲಾಯಿತು. 1998ರಲ್ಲಿ ವಿಶ್ವಬ್ಯಾಂಕ್ ಸಣ್ಣ ನೀರಾವರಿ ಯೋಜನೆಗೆ ಹಣ ನೀಡಿದ್ದರಿಂದ ಮತ್ತೆ ಚಾಲನೆ ದೊರೆಯಿತು. ಆದರೆ ಅರಣ್ಯ ಇಲಾಖೆ ಅನುಮತಿ ಸಿಗಲಿಲ್ಲ. 2008ರಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿತು.

ಈ ಯೋಜನೆ ₹3.75 ಕೋಟಿ ವೆಚ್ಚದ್ದಾಗಿದ್ದು ಹೊನ್ನೆಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸಾಲೂರು ಹಂದೂರು ಹೊನ್ನೆಕೂಡಿಗೆ ಹಂತುವಾನಿ ಬಸರಗಳಲೆ ಗ್ರಾಮಗಳ ವ್ಯಾಪ್ತಿಯ ಸುಮಾರು 850 ರಿಂದ 1 ಸಾವಿರ ಎಕರೆ ಕೃಷಿ ಜಮೀನಿಗೆ ಬೇಸಿಗೆ ಬೆಳೆಗೆ ನೀರೊದಗಿಸುವ ಉದ್ದೇಶ ಹೊಂದಿದೆ.

ಈಗಾಗಲೇ ಜಾಕ್‌ವೆಲ್ ನಿರ್ಮಿಸಿದ್ದು ಪಂಪ್‌ಹೌಸ್ ಕಾಮಗಾರಿ ಪೂರ್ಣಗೊಂಡಿದೆ. ಓವರ್ ಹೆಡ್ ಟ್ಯಾಂಕ್‌ನಿಂದ ನೀರು ಹರಿಸಲು ಕೊಳವೆ ಅಳವಡಿಸುವ ಕಾಮಗಾರಿ ಬಾಕಿ ಉಳಿದಿದೆ. ಹೊನ್ನೆಕೂಡಿಗೆ ಏತ ನೀರಾವರಿಯ ನೀರು ಹರಿಸುವ ಕೊಳವೆ ಅರಣ್ಯ ವ್ಯಾಪ್ತಿಯ 1.77 ಹೆಕ್ಟರ್ ಪ್ರದೇಶದಲ್ಲಿ ಹಾದುಹೋಗುತ್ತದೆ. ಅನುಮತಿಗಾಗಿ ಅರಣ್ಯ ಇಲಾಖೆಗೆ ಅರ್ಜಿಸಲ್ಲಿಸಲಾಗಿದ್ದು ಶೀಘ್ರದಲ್ಲೇ ಅನುಮತಿ ದೊರೆಯಲಿದೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಭರತ್ ತಿಳಿಸಿದರು.

ತಾಲ್ಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿಯಲ್ಲಿ ನಿರ್ಮಿಸಲಾಗಿರುವ ಬಕ್ರಿಹಳ್ಳ –ಕಡಹಿನಬೈಲು ಏತನೀರಾವರಿ ಈಗಾಗಲೇ ಚಾಲನೆಯಲ್ಲಿದ್ದು ಒಟ್ಟು 1300 ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುತ್ತಿದೆ.1990ರ ದಶಕದಲ್ಲಿ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಕಣಬೂರು ಗ್ರಾಮದಲ್ಲಿ ತುಂಗಾ ಮೇಲ್ದಂಡೆ ಏತನೀರಾವರಿ ಯೋಜನೆಯಿಂದ 1018 ಎಕರೆ ಜಮೀನಿಗೆ ನೀರು ಒದಗಿಸುವ ಗುರಿಹೊಂದಲಾಗಿತ್ತು. ಕಾರ್ಯನಿರ್ವಹಿಸಿದ ಕೆಲವೇ ವರ್ಷಗಳಲ್ಲಿ ವಿಫಲವಾಯಿತು.

ಪೂರಕ ಮಾಹಿತಿ: ಕೆ.ವಿ.ನಾಗರಾಜ್, ಕೆ.ನಾಗರಾಜ್

ತರೀಕೆರೆ ಸಮೀಪದ ದೋರನಾಳು ಬಳಿ ಏತ ನೀರಾವರಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿರುವುದು
ಮಳಲೂರು ಏತ ನೀರಾವರಿ ಯೋಜನೆ ಕಾಮಗಾರಿ ಅರ್ಧದಲ್ಲೇ ನಿಂತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.