ADVERTISEMENT

ಸರ್ಕಾರ ಮದ್ಯ ಮಾರಾಟ ನಿಷೇಧಿಸಲಿ: ಪ್ರಶಾಂತ್ ಚಿಪ್ರಗುತ್ತಿ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮದ್ಯ ವರ್ಜನ ಶಿಬಿರ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 5:27 IST
Last Updated 21 ಸೆಪ್ಟೆಂಬರ್ 2025, 5:27 IST
ಕಡೂರು ಪಟ್ಟಣದ ಶ್ರೀವೀರಭದ್ರೇಶ್ವರ ಸಮುದಾಯ ಭವನದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ ಮದ್ಯವರ್ಜನ ಶಿಬಿರದಲ್ಲಿ ಪ್ರಶಾಂತ್ ಚಿಪ್ರಗುತ್ತಿ  ಮಾತನಾಡಿದರು
ಕಡೂರು ಪಟ್ಟಣದ ಶ್ರೀವೀರಭದ್ರೇಶ್ವರ ಸಮುದಾಯ ಭವನದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ ಮದ್ಯವರ್ಜನ ಶಿಬಿರದಲ್ಲಿ ಪ್ರಶಾಂತ್ ಚಿಪ್ರಗುತ್ತಿ  ಮಾತನಾಡಿದರು   

ಕಡೂರು: ‘ಸರ್ಕಾರ ತಾತ್ಕಾಲಿಕ ಆದಾಯಕ್ಕಾಗಿ ಶಾಶ್ವತ ಸಂಪತ್ತು ಹಾಳಾಗಲು ಪ್ರೋತ್ಸಾಹಿಸಬಾರದು. ಸರ್ಕಾರಕ್ಕೆ ಯುವಸಮೂಹದ ಅಧಃಪತನ ತಡೆಯುವ ಕಾಳಜಿ ಇದ್ದರೆ, ರಾಜ್ಯದಲ್ಲಿ ಮದ್ಯಮಾರಾಟವನ್ನು ನಿಷೇಧಿಸಬೇಕು’ ಎಂದು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಪ್ರಶಾಂತ್ ಚಿಪ್ರಗುತ್ತಿ ತಿಳಿಸಿದರು.

ಪಟ್ಟಣದ ಶ್ರೀವೀರಭದ್ರೇಶ್ವರ ಸಮುದಾಯ ಭವನದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ 1980ನೇ ಮದ್ಯ ವರ್ಜನ ಶಿಬಿರದಲ್ಲಿ ಅವರು ಮಾತನಾಡಿದರು.

‘ದುಶ್ಚಟಗಳಿಂದ ಸಂಸಾರಗಳ ಭವಿಷ್ಯ ಬೀದಿ ಪಾಲಾಗುವುದನ್ನು ತಪ್ಪಿಸಲು ಸಮಾಜವು ಸ್ವಸ್ಥವಾಗಿರಬೇಕು. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ. ದೇಶದಾದ್ಯಂತ ಮಂದಿರ, ಮಸೀದಿ, ಚರ್ಚ್, ಗುರುದ್ವಾರಗಳ ಪ್ರಭಾವ ಹೆಚ್ಚಿದ್ದರೂ, ದೇಶ ಜ್ಞಾನದ ತವರು ಎನಿಸಿಕೊಂಡಿದ್ದರೂ ಮದ್ಯ, ಮಾದಕ ಪದಾರ್ಥಗಳು, ಜೂಜಾಟ, ಭ್ರಷ್ಟಾಚಾರ, ಲಂಚಗುಳಿತನ ಮಾನವ ಸಂಪನ್ಮೂಲವನ್ನು ನಾಶ ಮಾಡುತ್ತಿವೆ’ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಮದ್ಯ ವರ್ಜನ ಶಿಬಿರದಲ್ಲಿ ಯುವಕರೇ ಹೆಚ್ಚಿದ್ದಾರೆ. ನಾವು ಹಾದಿ ತಪ್ಪಲು ಮನಸ್ಸಿನ ದೌರ್ಬಲ್ಯವೇ ಕಾರಣ. ಕೆಟ್ಟದ್ದನ್ನು ತ್ಯಜಿಸುವ ಸುಧಾರಣಾ ಕ್ರಮವಾದ ಪೂಜೆ ಅಲ್ಲಿ ನಡೆಯಲಿ’ ಎಂದು ಹಾರೈಸಿದರು.

ಚಿತ್ರದುರ್ಗ ವಲಯ ಪ್ರಾದೇಶಿಕ ನಿರ್ದೇಶಕಿ ಗೀತಾ ಬಿ.ಮಾತನಾಡಿ, ನಮ್ಮ ಬದುಕು ಸುಂದರವಾಗಲು ಸರಿದಾರಿಯಲ್ಲಿ ಸಾಗಬೇಕು. ಮನಸ್ಥಿತಿ ಬದಲಿಸಿಕೊಂಡರೆ ಪರಿಸ್ಥಿತಿ ಬದಲಾಗುತ್ತದೆ ಎನ್ನುವ ಅರಿವಿನ ಮೂಲಕ ನಿಮ್ಮ ಬದುಕು ತಿದ್ದುವ ಶಿಕ್ಷಕನೂ, ಸ್ವಾನುಭವದಿಂದ ತಿದ್ದಿಕೊಳ್ಳುವ ಮೂಲಕ ಶಿಷ್ಯನೂ ನೀವೇ ಆಗಿ ನಿಮ್ಮ ಕುಟುಂಬದವರ ತ್ಯಾಗ, ಪರಿಶ್ರಮಕ್ಕೆ ಗೌರವ ನೀಡಿ ಎಂದು ಸಲಹೆ ನೀಡಿದರು.

ಪುರಸಭೆ ಸದಸ್ಯ ಮೋಹನ್‌ಕುಮಾರ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವಿಶಂಕರ್ ಮಾತನಾಡಿದರು. ಶಿಬಿರಾಧಿಕಾರಿ ದಿವಾಕರ್ ಪೂಜಾರಿ, ತಾಲ್ಲೂಕು ಯೋಜನಾಧಿಕಾರಿ ಕೆ.ಬೇಬಿ, ಚಿತ್ರದುರ್ಗದ ಯೋಜನಾಧಿಕಾರಿ ನಾಗರಾಜ್ ಕುಲಾಲ್, ಮೇಲ್ವಿಚಾರಕ ರುದ್ರಪ್ಪ, ಆಶಾ ತಮ್ಮಯ್ಯ, ನಾಗರಾಜ್, ವಡೇರಹಳ್ಳಿ ಅಶೋಕ್, ಸೋಮಶೇಖರ್, ಶಿಬಿರದ ಉಪಾಧ್ಯಕ್ಷ ದಿನೇಶ್, ಆರೋಗ್ಯ ಸಹಾಯಕಿ ರಂಜಿತಾ, ವಲಯ ಮೇಲ್ವಿಚಾರಕರಾದ ಅಮಿತಾ, ತಿಮ್ಮಯ್ಯ, ಕ್ಷೇತ್ರ ಪ್ರತಿನಿಧಿಗಳು, ಶಿಬಿರಾರ್ಥಿಗಳ ಕುಟುಂಬ ಸದಸ್ಯರು, ನವಜೀವನ ಸಮಿತಿಯ ಸದಸ್ಯರು ಹಾಜರಿದ್ದರು.

ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಮುಖ್ಯ. ಹಾದಿ ತಪ್ಪಿಸುವವರಿಗಿಂತ ಬದುಕಿನ ದಾರಿ ತೋರಿಸುವವರ ಒಳಿತಿನ ಸಂಗ ಮಾಡಬೇಕು
ಬಾಣೂರು ಗಿರೀಶ್ ಶಿಬಿರಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.