ADVERTISEMENT

ಕಳಪೆ ಗುಣಮಟ್ಟದ ರಾಷ್ಟ್ರಧ್ವಜ ವಿತರಣೆ

ನರಸಿಂಹರಾಜಪುರ: ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 4:53 IST
Last Updated 11 ಆಗಸ್ಟ್ 2022, 4:53 IST
ನರಸಿಂಹರಾಜಪುರದ ಪಟ್ಟಣ ಪಂಚಾಯಿತಿಗೆ ಜಿಲ್ಲಾಡಳಿತದಿಂದ ಪೂರೈಸಿರುವ ರಾಷ್ಟ್ರಧ್ವಜವನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಪ್ರದರ್ಶಿಸಿದರು
ನರಸಿಂಹರಾಜಪುರದ ಪಟ್ಟಣ ಪಂಚಾಯಿತಿಗೆ ಜಿಲ್ಲಾಡಳಿತದಿಂದ ಪೂರೈಸಿರುವ ರಾಷ್ಟ್ರಧ್ವಜವನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಪ್ರದರ್ಶಿಸಿದರು   

ನರಸಿಂಹರಾಜಪುರ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ‘ಹರ್ ಘರ್ ತಿರಂಗಾ’ ಕಾರ್ಯಕ್ರಮದಡಿ ಜಿಲ್ಲಾಡಳಿತ ನೀಡಿದ ರಾಷ್ಟ್ರಧ್ವಜದ ಬಟ್ಟೆಯ ಗುಣಮಟ್ಟ ಕಳಪೆಯಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಆರೋಪಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2 ಸಾವಿರ ಧ್ವಜಗಳನ್ನು ಬೀರೂರಿನ ಲಕ್ಷ್ಮೀ ಸ್ವಸಹಾಯ ಸಂಘದಿಂದ ಖರೀದಿಸಲು ಜಿಲ್ಲಾಡಳಿತ ಆದೇಶ ಮಾಡಿತ್ತು. ಒಂದು ರಾಷ್ಟ್ರಧ್ವಜಕ್ಕೆ ₹38 ದರ ನಿಗದಿಪಡಿಸಿತ್ತು. ಆಗಸ್ಟ್ 3ರಂದು ಜಿಲ್ಲಾಡಳಿತ ಹೊಸ ಆದೇಶ ಹೊರಡಿಸಿ, 2 ಸಾವಿರ ಧ್ವಜಗಳಲ್ಲಿ 1 ಸಾವಿರ ಧ್ವಜಗಳನ್ನು ₹22ರಂತೆ ಖರೀದಿಸುವಂತೆ ಸೂಚಿಸಿತು.ಅದರಂತೆ ಲಕ್ಷ್ಮೀಸ್ವಹಾಯ ಸಂಘದಿಂದ ಹಾಗೂ ಜಿಲ್ಲಾಡಳಿತದಿಂದ ತಲಾ 1 ಸಾವಿರ ರಾಷ್ಟ್ರಧ್ವಜ ಖರೀದಿಸಲಾಗಿದೆ. ಅದನ್ನು ಬುಧವಾರ ಸರಬರಾಜು ಮಾಡಿದ್ದಾರೆ’ ಎಂದರು.

ಜಿಲ್ಲಾಡಳಿತ ಸರಬರಾಜು ಮಾಡಿರುವ ರಾಷ್ಟ್ರಧ್ವಜ ಪಾಲಿಸ್ಟರ್ ಹಾಗೂ ಸಿಲ್ಕ್ ಬಟ್ಟೆಯಿಂದ ಕೊಡಿದೆ. ಅಳತೆ ಸಮರ್ಪಕವಾಗಿಲ್ಲ. ಕೆಲವು ಧ್ವಜಗಳಲ್ಲಿ ಅಶೋಕ ಚಕ್ರ ವಾರೆ ಆಗಿದೆ. ಕೆಲವು ಧ್ವಜಗಳು ಹರಿದು ಹೋಗಿವೆ ಎಂದು ಅವರು ದೂರಿದರು.

ADVERTISEMENT

ಕೆಲವು ಧ್ವಜಗಳಲ್ಲಿ ಹಸಿರು ಬಣ್ಣದ ಬದಲು ನೀಲಿ ಬಣ್ಣದ ಬಟ್ಟೆ ಹಾಕಲಾಗಿದೆ. ನೀರಿನಲ್ಲಿ ಸ್ವಲ್ಪ ಒದ್ದೆಯಾದರೂ ಬಣ್ಣ ಬಿಡುತ್ತಿದೆ. 500ಕ್ಕೂ ಹೆಚ್ಚು ಕಳಪೆ ಧ್ವಜ ಪೂರೈಸಿದ್ದಾರೆ. ಲೋಪದೋಷಗಳನ್ನು ಪಟ್ಟಣ ಪಂಚಾಯಿತಿ ಸಿಬ್ಬಂದಿ ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಪಟ್ಟಣದ ವ್ಯಾಪ್ತಿ 75 ಹಣ್ಣಿನ ಗಿಡ ನೆಡಲಾಗುವುದು. ಶಾಲಾ, ಕಾಲೇಜು ಮಕ್ಕಳಿಗೆ ಪ್ರಬಂಧ ಸ್ಪರ್ಧೆ, 30 ಜನ ಯೋಧರಿಗೆ ಗೌರವ ಸಮರ್ಪಣೆ , ಐತಿಹಾಸಿಕ ವೀರಮ್ಮಾಜಿ ಕೆರೆ ಅಂಗಳದಲ್ಲಿ ಸ್ವಚ್ಛತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಮುಖ ವೃತ್ತಗಳಿಗೆ ವಿದ್ಯುತ್ ದೀಪದ ಅಲಂಕಾರ ಮಾಡಲಾಗುವುದು ಎಂದರು.

ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಸದಸ್ಯರಾದ ಸುರಯ್ಯಾ ಬಾನು, ಮುಕುಂದ, ಶೋಜಾ, ಸೈಯದ್ ವಸೀಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.