ADVERTISEMENT

ಮೂಡಿಗೆರೆ: ಬಸ್ ತಂಗುದಾಣ ಉದ್ಘಾಟನೆ ಮಾಡಿದ ಎಂ.ಕೆ.ಪ್ರಾಣೇಶ್

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2023, 12:38 IST
Last Updated 20 ಆಗಸ್ಟ್ 2023, 12:38 IST
ಮೂಡಿಗೆರೆ ತಾಲ್ಲೂಕಿನ ಕೊಳಗೋಡು ಸಮೀಪದಲ್ಲಿ ಮೂರು ತಾಲ್ಲೂಕಿಗೆ ಆಶ್ರಯವಾಗುವ ನೂತನ ಬಸ್ ಕಟ್ಟಡವನ್ನು ಉಪಸಭಾಪತಿ ಎಂ.ಕೆ.ಪ್ರಾಣೇಶ್ ಉದ್ಘಾಟಿಸಿದರು
ಮೂಡಿಗೆರೆ ತಾಲ್ಲೂಕಿನ ಕೊಳಗೋಡು ಸಮೀಪದಲ್ಲಿ ಮೂರು ತಾಲ್ಲೂಕಿಗೆ ಆಶ್ರಯವಾಗುವ ನೂತನ ಬಸ್ ಕಟ್ಟಡವನ್ನು ಉಪಸಭಾಪತಿ ಎಂ.ಕೆ.ಪ್ರಾಣೇಶ್ ಉದ್ಘಾಟಿಸಿದರು   

ಮೂಡಿಗೆರೆ: ‘ಮೂಡಿಗೆರೆ, ಚಿಕ್ಕಮಗಳೂರು, ಬೇಲೂರು ಗಡಿ ಭಾಗದಲ್ಲಿದ್ದ ಸುಮಾರು 50 ವರ್ಷದ ಹಿಂದೆ ನಿರ್ಮಾಣಗೊಂಡಿದ್ದ ಬಸ್ ನಿಲ್ದಾಣ ತೆರವುಗೊಳಿಸಿದ್ದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಬೀದಿಯಲ್ಲಿ ನಿಲ್ಲುವಂತ ಪರಿಸ್ಥಿತಿಗೆ ಇಂದು ತೆರೆ ಬಿದ್ದಿದೆ’ ಎಂದು ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.

ಅವರು ಶನಿವಾರ ತಾಲ್ಲೂಕಿನ ನಂದಿಪುರ ಗ್ರಾ.ಪಂ ವ್ಯಾಪ್ತಿಯ ಕೋಳುಗೂಡು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿದ್ದ ಬಸ್ ತಂಗುದಾಣ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

‘ತಂಗುದಾಣ ಶಿಥಿಲಗೊಂಡಿದ್ದ ಕಾರಣ ಹೊಸ ಕಟ್ಟಡ ನಿರ್ಮಿಸಲು ತಾನು ₹5 ಲಕ್ಷ ಅನುದಾನ ಮೀಸಲಿರಿಸಿದ್ದೆ. ಈ ಹಿನ್ನೆಲೆಯಲ್ಲಿ ಹಳೆ ಕಟ್ಟಡ ನೆಲಸಮಗೊಳಿಸಿದ ಬಳಿಕ ವ್ಯಕ್ತಿಯೊಬ್ಬರು ಕಾಂಪೌಂಡ್ ನಿರ್ಮಿಸಿದ್ದರಿಂದ ಗೊಂದಲ ಸೃಷ್ಟಿಯಾಗಿತ್ತು. ಇದರಿಂದ ಅನೇಕ ಪ್ರತಿಭಟನೆ ಕೂಡ ನಡೆದಿತ್ತು. ಹಾಗಾಗಿ ಜಾಗ ಸರ್ವೇ ನಡೆಸುವ ಮೂಲಕ ಎಲ್ಲಾ ಗೊಂದಲ ನಿವಾರಿಸಿಕೊಂಡು ಇದೀಗ ನೂತನ ತಂಗುದಾಣ ಕಾಮಗಾರಿ ಪೂರ್ಣಗೊಳಿಸಿ, 3 ತಾಲ್ಲೂಕಿನ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗಿದೆ’ ಎಂದು ಹೇಳಿದರು.

ADVERTISEMENT

ಮಾಜಿ ಸಚಿವೆ ಬಿ.ಬಿ.ನಿಂಗಯ್ಯ ಮಾತನಾಡಿ, ‘ಈ ತಂಗುದಾಣ ಮೂಡಿಗೆರೆ ತಾಲ್ಲೂಕಿನ ಕೋಳುಗೂಡು, ಮಾಲಳ್ಳಿ, ನಂದಿಪುರಗುಡ್ಡೆ, ಇಂದ್ರವಳ್ಳಿ ಗ್ರಾಮ, ಚಿಕ್ಕಮಗಳೂರು ತಾಲ್ಲೂಕಿನ ಬಸ್ಕಲ್, ನರಡಿ, ಮಾಗೆಹಳ್ಳಿ, ಬೇಲೂರು ತಾಲ್ಲೂಕಿನ ಹಳೇಗೆಂಡೇಹಳ್ಳಿ, ವಾಟಗನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಪ್ರಯಾಣಿಕರು ಹಾಗೂ ಶಾಲೆ ಮಕ್ಕಳಿಗೆ ಆಶ್ರಯವಾಗಿದೆ. ಇದನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದು’ ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಂಗುದಾಣ ನಿರ್ಮಾಣಕ್ಕಾಗಿ ಜಾಗ ದಾನವಾಗಿ ನೀಡಿದ ಜಿ.ಎನ್.ಮಂಜುನಾಥ್ ಕುಟುಂಬಕ್ಕೆ ಗೌರವ ಸಮರ್ಪಿಸಿ ಅಭಿನಂದಿಸಲಾಯಿತು.

ನಂದೀಪುರ ಗ್ರಾ.ಪಂ. ಅಧ್ಯಕ್ಷ ಜಿ.ಎಂ.ಪ್ರಸನ್ನಕುಮಾರ್, ಉಪಾಧ್ಯಕ್ಷೆ ನಳಿನಿ ರಘುನಾಥ್, ಸದಸ್ಯರಾದ ಎಂ.ಎಸ್.ರಮೇಶ್, ರಘು ಭಾರತಿ, ಪಿ.ಎಸ್.ರಘು, ಲೀಲಾ, ಸುಂದ್ರೇಶ್, ಪಿಡಿಒ ಡಿ.ಎಸ್.ಪ್ರತಿಮಾ, ರಘುನಾಥ್, ಶಶಿಕಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.