ADVERTISEMENT

ಬೀರೂರು | ಮದಗದ ಕೆರೆ ಶೇ 90 ಭರ್ತಿ: ಸಂಭ್ರಮ

ಧಾರಾಕಾರ ಮಳೆ: ಕೆರೆಗೆ ಹರಿದುಬರುತ್ತಿರುವ ನೀರು; ಶಕ್ತಿದೇವತೆ ಕೆಂಚಮ್ಮನವರಿಗೆ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 7:18 IST
Last Updated 25 ಜುಲೈ 2024, 7:18 IST
ಬೀರೂರು ಹೋಬಳಿ ಮದಗದಕೆರೆಯು ಶೇ 90ರಷ್ಟು ತುಂಬಿದ್ದು, ಕೆಲವೇ ದಿನಗಳಲ್ಲಿ ಕೋಡಿ ಬೀಳುವ ಹಂತ ತಲುಪಿದೆ. ಅದಕ್ಕಾಗಿ ರೈತರು ಮಂಗಳವಾರ ಕೆರೆಯ ತೂಬಿಗೆ ಪೂಜೆ ಸಲ್ಲಿಸಿದರು
ಬೀರೂರು ಹೋಬಳಿ ಮದಗದಕೆರೆಯು ಶೇ 90ರಷ್ಟು ತುಂಬಿದ್ದು, ಕೆಲವೇ ದಿನಗಳಲ್ಲಿ ಕೋಡಿ ಬೀಳುವ ಹಂತ ತಲುಪಿದೆ. ಅದಕ್ಕಾಗಿ ರೈತರು ಮಂಗಳವಾರ ಕೆರೆಯ ತೂಬಿಗೆ ಪೂಜೆ ಸಲ್ಲಿಸಿದರು   

ಬೀರೂರು: ಕಡೂರು ತಾಲ್ಲೂಕಿನ ಜೀವನಾಡಿ ಮದಗದಕೆರೆಗೆ ಜೀವಕಳೆ ಬಂದಿದ್ದು, ಮಳೆ ಮುಂದುವರಿದರೆ ಕೆಲವೇ ದಿನಗಳಲ್ಲಿ ಭರ್ತಿಯಾಗಿ ಕೋಡಿ ಬೀಳುವ ಸಾಧ್ಯತೆಗಳಿವೆ. ಕಳೆದೊಂದು ವಾರದಿಂದ ಧಾರಾಕಾರವಾಗಿ ಸುರಿದ ಪುನರ್ವಸು ಮಳೆಗೆ ಈಗಾಗಲೇ ಕೆರೆ ಒಡಲು ಶೇ 90ರಷ್ಟು ತುಂಬಿದೆ.

ಮದಗದಕೆರೆ 65ಅಡಿ (0.35 ಟಿಎಂಸಿ) ಸಂಗ್ರಹ ಸಾಮರ್ಥ್ಯ ಹೊಂದಿದೆ. ದೇವನಕೆರೆ, ಬುಕ್ಕಸಾಗರ ಕೆರೆ, ಚಿಕ್ಕಂಗಳ ಕೆರೆ, ಹಳೇ ಮದಗದಕೆರೆ, ಹುಲಿಗೊಂದಿರಾಯನ ಕೆರೆ, ಬಾಕಿನಕೆರೆ ಸೇರಿದಂತೆ 32ಕ್ಕೂ ಹೆಚ್ಚು ಸರಣಿ ಕೆರೆಗಳನ್ನು ಹೊಂದಿರುವ ಮದಗದಕೆರೆ ಬೀರೂರು, ಕಡೂರು ಭಾಗದ ರೈತರ ಬದುಕಿಗೆ ಆಧಾರ ಸ್ತಂಭ.

ತರೀಕೆರೆ ತಾಲ್ಲೂಕಿನ ಸಂತವೇರಿ, ಹೊಸಪೇಟೆ ಭಾಗದಲ್ಲಿ ಸುರಿಯುವ ಮಳೆಯನ್ನು ಆಶ್ರಯಿಸಿರುವ ಈ ಕೆರೆಯ ನೀರನ್ನು ಬಳಸಿ ರೈತರು ಭತ್ತ, ಕಿತ್ತಳೆ, ಅಡಿಕೆ ಬೆಳೆಯುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಕಿತ್ತಳೆ ಮತ್ತು ಭತ್ತದ ಕೃಷಿ ಕಡಿಮೆಯಾಗಿದ್ದು, ವಾಣಿಜ್ಯ ಬೆಳೆ ಅಡಿಕೆ ತಲೆ ಎತ್ತಿ ನಿಂತಿದೆ.

ADVERTISEMENT

2019-20ನೇ ಸಾಲಿನಲ್ಲಿ ಭದ್ರಾ ಉಪಕಣಿವೆ ಯೋಜನೆಯಡಿ ಭದ್ರಾ ನದಿಯಿಂದ ಬೀರೂರು ಸಮೀಪದ ದೇವನಕೆರೆಗೆ ನೀರು ತುಂಬಿಸಿ, ಅಲ್ಲಿಂದ ಮದಗದಕೆರೆಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿವೆ. ಆದರೆ, ಮುಂದಿನ ಹಂತದ ಕೆಲಸಗಳು ವೇಗ ಕಳೆದುಕೊಂಡಿದ್ದು, ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಿ ಯೋಜನೆಗೆ ವೇಗ ದೊರಕಿಸಿಕೊಡಬೇಕು. ಕೆರೆಯಲ್ಲಿ ಹೂಳು ತುಂಬಿದ್ದು, ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ ಎನ್ನುತ್ತಾರೆ ಸ್ಥಳೀಯರ ರೈತರು.

‘ಕೆರೆಯ ತಳ ಭಾಗದಲ್ಲಿ ಸ್ವಲ್ಪಮಟ್ಟಿನ ಬಿರುಕು ಕಂಡು ಬಂದು ನೀರು ಪೋಲಾಗುತ್ತಿತ್ತು, ಜುಲೈ ತಿಂಗಳಿನಲ್ಲಿ ಅದನ್ನು ದುರಸ್ತಿ ಮಾಡಿಸಿ ನೀರು ಪೋಲಾಗುವುದನ್ನು ತಪ್ಪಿಸಲಾಗಿದೆ’ ಎಂದು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ ವಿಭಾಗದವರು ಹೇಳಿದರು.

ಇನ್ನು ನಾಲ್ಕು ಅಡಿ ನೀರು ಬಂದರೆ, ಕೆರೆ ತುಂಬಿ ಕೋಡಿ ಬೀಳುವ ಸ್ಥಿತಿ ಇದೆ. ಹರ್ಷಗೊಂಡಿರುವ ರೈತರು ಮಂಗಳವಾರ ಮದಗದಕೆರೆಗೆ ತೆರಳಿ ಕೆರೆಯ ಶಕ್ತಿದೇವತೆ ಕೆಂಚಮ್ಮನವರಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಮಳೆ ನಿರಂತರವಾಗಿ ಮುಂದುವರಿದರೆ, ಮದಗದ ಕೆರೆಯನ್ನು ಆಶ್ರಯಿಸಿರುವ ಸರಣಿ ಕೆರೆಗಳೂ ಭರ್ತಿಯಾಗಿ ಜಲಸಮೃದ್ಧಿ ಕಾಣಬಹುದು ಎನ್ನುವುದು ರೈತರ ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.