ಬೀರೂರು (ಕಡೂರು): ಕಡೂರು ತಾಲ್ಲೂಕಿನ ರೈತರಿಗೆ ಜೀವಸೆಲೆಯಾಗಿರುವ ಮದಗದ ಕೆರೆ ತುಂಬಿ ಕೋಡಿ ಬಿದ್ದಿರುವುದು ರೈತಾಪಿ ವರ್ಗವಲ್ಲದೇ ಜನಸಾಮಾನ್ಯರಿಗೂ ನೆಮ್ಮದಿ ಮೂಡಿಸಿದೆ ಎಂದು ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ್ ತಿಳಿಸಿದರು.
ಬೀರೂರು ಹೋಬಳಿಯ ಮದಗದ ಕೆರೆಗೆ ಪುರಸಭೆ ವತಿಯಿಂದ ಬಾಗಿನ ಸಮರ್ಪಿಸಿ ಮಾತನಾಡಿದರು.
ಹಲವಾರು ಬಾರಿ ತಾಲ್ಲೂಕಿಗೆ ಮಳೆಯಾಗದೆ ಬರ ಆವರಿಸಿದರೂ ಮದಗದ ಕೆರೆ ಮಾತ್ರ ಪ್ರತಿ ವರ್ಷ ತುಂಬಿ ಹರಿದು ರೈತರಲ್ಲಿ ಹೊಸ ಚೈತನ್ಯವನ್ನು ಮೂಡಿಸುತ್ತಿದೆ. ಈ ಕೆರೆ ತುಂಬಿ ರೈತರಿಗೆ ಹರ್ಷ ನೀಡುವುದಷ್ಟೆ ಅಲ್ಲದೇ ತಾಲೂಕಿನ 32ಕ್ಕೂ ಹೆಚ್ಚು ಕೆರೆಗಳಿಗೆ ನೀರು ನೀಡುವ ಮೂಲಕ ಜೀವನಾಡಿಯಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ಮಾತನಾಡಿ, ಕಡೂರು, ಬೀರೂರು ಭಾಗವು ಅಡಿಕೆ ಬೆಳೆಗೆ ಹೆಸರುವಾಸಿಯಾಗಿದ್ದು, ಕೃಷಿಕರು ಈ ಕೆರೆಯನ್ನು ಆರಾಧಿಸುತ್ತಾರೆ. ಈ ಕೆರೆಯ ಮೂಲಕ ಸರಣಿ ಕೆರೆಗಳು ತುಂಬಿದರೆ ತಾಲ್ಲೂಕಿನ ಅರ್ಧಕ್ಕೂ ಹೆಚ್ಚು ಭಾಗದಲ್ಲಿ ಅಂತರ್ಜಲವು ವೃದ್ಧಿಸುತ್ತದೆ. ಆದ್ದರಿಂದ ನಮ್ಮ ಜನರಿಗೆ ಮದಗದ ಕೆರೆ ಜೀವನಾಡಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ್, ಸದಸ್ಯರಾದ ಎಂ.ಪಿ.ಸುದರ್ಶನ್, ಶಾರದಾ ರುದ್ರಪ್ಪ, ಜ್ಯೋತಿ, ರವಿಕಾಂತ್ ರಾಥೋಡ್, ಬಿ.ಆರ್.ಮೋಹನ್ ಕುಮಾರ್ ಮುಖಂಡರಾದ ರುದ್ರಪ್ಪ, ವೆಂಕಟೇಶ್, ಕೃಷ್ಣಮೂರ್ತಿ, ಬಸವರಾಜ್, ಶಿವಮೂರ್ತಿ ಹಾಗೂ ಎಂಜಿನಿಯರ್‌ಗಳಾದ ನೂರುದ್ದೀನ್, ವೀಣಾ, ಆರೋಗ್ಯ ನಿರೀಕ್ಷಕ ಲಕ್ಷ್ಮಣ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.