ADVERTISEMENT

ಮಹಾಶಿವರಾತ್ರಿ: ಧರ್ಮಸ್ಥಳಕ್ಕೆ ಭಕ್ತರ ಪಾದಯಾತ್ರೆ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 6:43 IST
Last Updated 8 ಫೆಬ್ರುವರಿ 2026, 6:43 IST
ಮಹಾ ಶಿವರಾತ್ರಿ ಪ್ರಯುಕ್ತ ಶನಿವಾರ ಮೂಡಿಗೆರೆಯಿಂದ ಪ್ರಾರಂಭವಾದ ಪಾದಯಾತ್ರೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು
ಮಹಾ ಶಿವರಾತ್ರಿ ಪ್ರಯುಕ್ತ ಶನಿವಾರ ಮೂಡಿಗೆರೆಯಿಂದ ಪ್ರಾರಂಭವಾದ ಪಾದಯಾತ್ರೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು   

ಮೂಡಿಗೆರೆ: ಮಹಾಶಿವರಾತ್ರಿ ಪ್ರಯುಕ್ತ ತಾಲ್ಲೂಕಿನಿಂದ ಧರ್ಮಸ್ಥಳದತ್ತ ಭಕ್ತಿಭಾವದ ಪಾದಯಾತ್ರೆ ಶನಿವಾರ ನಸುಕಿನಿಂದ ಪ್ರಾರಂಭವಾಗಿದೆ.

ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಪಾದಯಾತ್ರೆ ಧಾರ್ಮಿಕ ನಂಬಿಕೆ, ಏಕತೆಯ ಪ್ರತೀಕವಾಗಿ ಗುರುತಿಸಿಕೊಂಡಿದೆ. ಈ ವರ್ಷವೂ ಹೆಚ್ಚಿನ ಸಂಖ್ಯೆಯ ಭಕ್ತರು ಶಿವನ ಅನುಗ್ರಹಕ್ಕಾಗಿ ಧರ್ಮಸ್ಥಳದತ್ತ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ತಾಲ್ಲೂಕಿನ ನೀರುಗಂಡಿ ಗ್ರಾಮದ ಬಳಿ ಮೂಡಿಗೆರೆ ಸಾಮಾಜಿಕ ಸೇವಾ ಸಮಿತಿಯಿಂದ ಪಾದಯಾತ್ರಿಗಳಿಗೆ ಉಚಿತ ಊಟೋಪಚಾರ‌, ಶೌಚಾಲಯ, ಸ್ನಾನಗೃಹ ಸಹಿತ ವಿವಿಧ ಸವಲತ್ತು ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಗ್ರಾಮ ಪಂಚಾಯಿತಿಯಿಂದ ಕುಡಿಯುವ ನೀರು, ಶೌಚಾಲಯ, ಕಸದ ನಿರ್ವಹಣೆಗಾಗಿ ಪೂರ್ವ ಸಿದ್ಧತೆ ಕೈಗೊಳ್ಳಲಾಗಿದ್ದು, ಸೋಮವಾರದಿಂದ ಕಾರ್ಯಾಚರಣೆ ಪ್ರಾರಂಭವಾಗಲಿದೆ.

ಶನಿವಾರ ಬೆಳಿಗ್ಗೆ ಮೂಡಿಗೆರೆಯಿಂದ ಪಂದಳಕಂದ ಅಯ್ಯಪ್ಪ ಬಳಗದ ವತಿಯಿಂದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪಾದಯಾತ್ರೆಗೆ ಚಾಲನೆ ನೀಡಲಾಯಿತು. ರಾಜ್ಯದ ವಿವಿಧ ಭಾಗಗಳಿಂದಲೂ ಪಾದಯಾತ್ರಿಗಳು ಬರುತ್ತಿದ್ದು, ಅವರಿಗೆ ಕೊಟ್ಟಿಗೆಹಾರದ ವೇಣುಗೋಪಾಲ್ ಅವರ ಮನೆಯಲ್ಲಿ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಮಾರ್ಗಮಧ್ಯೆ ಶಿವನ ನಾಮಸ್ಮರಣೆ, ಭಜನೆ ಹಾಗೂ ಭಕ್ತಿಗೀತೆಗಳೊಂದಿಗೆ ಪಾದಯಾತ್ರಿಗಳು ಸಾಗುತ್ತಿದ್ದಾರೆ.

ADVERTISEMENT

ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಚಿಕ್ಕಳ್ಳ ಶಂಕರ್ ಮಾತನಾಡಿ, ‘ಮಹಾಶಿವರಾತ್ರಿಯ ಪಾದಯಾತ್ರೆಯು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಇದು ಶಾಂತಿ, ಸಹನೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಪವಿತ್ರ ಪರಂಪರೆಯಾಗಿದೆ. ದೇವರ ಆಶೀರ್ವಾದದಿಂದ ಈ ಯಾತ್ರೆ ಇನ್ನೂ ಹಲವು ವರ್ಷಗಳ ಕಾಲ ನಿರಂತರವಾಗಿ ನಡೆಯಬೇಕಿದೆ’ ಎಂದು ಹೇಳಿದರು.

ಮಹಾ ಶಿವರಾತ್ರಿ ಪ್ರಯುಕ್ತ ಶನಿವಾರ ಮೂಡಿಗೆರೆಯಿಂದ ಪ್ರಾರಂಭವಾದ ಪಾದಯಾತ್ರೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.