ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಲ್ಲಿನ ವಸತಿ ಗೃಹಗಳ ಅಭಿವೃದ್ಧಿಗೆ ಅರಣ್ಯ ಇಲಾಖೆ ಯೋಜನೆ ರೂಪಿಸಿದೆ. ಅದರಲ್ಲೂ ಮಲಯ ಮಾರುತ ಮತ್ತು ಮತ್ತಾವರ ವಸತಿ ಗೃಹಗಳ ನವೀಕರಣಕ್ಕೆ ಕಾಲ ಕೂಡಿ ಬಂದಿದೆ.
ಕೊಟ್ಟಿಗೆಹಾರದಿಂದ ಮುಂದೆ ಸಾಗಿದರೆ ಚಾರ್ಮಾಡಿ ಘಾಟಿ ಪ್ರವೇಶ ದ್ವಾರದಲ್ಲಿ ಸಿಗುವ ಮಲಯ ಮಾರುತ ಅತಿಥಿ ಗೃಹ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಘಾಟಿಯಲ್ಲೇ ಉಳಿದು ಸೌಂದರ್ಯ ಸವಿಯಲು ‘ಮಲಯ ಮಾರುತ’ ವಸತಿ ಗೃಹ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣ. ಮೂರು ದಶಕದ ಹಿಂದೆ ಉಪಅರಣ್ಯ ಸಂರಕ್ಷಣಾಧಿಕಾರಿ ಆಗಿದ್ದ ಜಿ.ಎನ್.ಶ್ರೀಕಂಠಯ್ಯ ಅವರ ಪರಿಕಲ್ಪನೆಯಲ್ಲಿ ಈ ಅತಿಥಿಗೃಹ ನಿರ್ಮಾಣಗೊಂಡಿದೆ. ಹಸಿರ ಮಡಿಲಿನಲ್ಲಿ ಕಲಾಕೃತಿಯ ರೂಪದಲ್ಲಿ ಈ ಅತಿಥಿ ಗೃಹ ತಲೆ ಎತ್ತಿದೆ. ಎಂತಹ ಬೇಸಿಗೆಯಲ್ಲೂ ತಂಪು ಮನೆಯಾಗಿ ಆಕರ್ಷಣೆಯ ಕೇಂದ್ರವಾಗಿದೆ.
ಈ ತಂಪು ಮನೆಯ ಮೇಲೇರಿ ನಿಂತರೆ ಚಾರ್ಮಾಡಿ ಘಾಟಿಯ ವಿಹಂಗಮ ನೋಟ, ಕಣಿವೆಯ ದೃಶ್ಯ ಸಂಪೂರ್ಣ ವೀಕ್ಷಿಸಲು ಸಾಧ್ಯವಾಗುತ್ತದೆ. ಈ ಕಟ್ಟಡವೀಗ ಪಾಚಿಕಟ್ಟಿ ನಲುಗುತ್ತಿದೆ. ಚಾವಣಿ ಶಿಥಿಲಗೊಂಡು ಕೋಣೆಯೊಳಗೆ ನೀರು ಸೋರುತ್ತಿದೆ. ಪ್ರಾಂಗಣದಲ್ಲಿ ಸುತ್ತುವರಿದ ಮರದ ಪಕಾಸುಗಳು ಕೂಡ ಶಿಥಿಲಗೊಂಡಿವೆ.
ಈ ಅತಿಥಿ ಗೃಹ ನವೀಕರಣಕ್ಕೆ ಅರಣ್ಯ ಇಲಾಖೆ ಮೊದಲ ಆದ್ಯತೆ ನೀಡಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಸಾಮಾಜಿಕ ಹೊಣೆಗಾರಿಕೆ ಅನುದಾನ(ಸಿಎಸ್‌ಆರ್) ₹95 ಲಕ್ಷವನ್ನು ಅರಣ್ಯ ಇಲಾಖೆ ಪಡೆದುಕೊಂಡಿದೆ. ₹20 ಲಕ್ಷ ವೆಚ್ಚದಲ್ಲಿ ಮಲಯ ಮಾರುತ ಅತಿಥಿಗೃಹ ನವೀಕರಣಕ್ಕೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ.
ಚಿಕ್ಕಮಗಳೂರು ನಗರ ಸಮೀಪದ ಮತ್ತಾವರ ಅರಣ್ಯ ವಸತಿ ಗೃಹ ನವೀಕರಣ ಮತ್ತು ಸುಧಾರಣೆಗೂ ಯೋಜನೆ ಸಿದ್ಧವಾಗಿದೆ. ಮತ್ತಾವರದಲ್ಲಿರುವ ಮಾಹಿತಿ ಕೇಂದ್ರದ ನವೀಕರಣ ಮತ್ತು ಸುಧಾರಣೆಗೂ ಕ್ರಿಯಾ ಯೋಜನೆ ರೂಪಿಸಲಾಗಿದೆ. ನಗರದ ಸಮೀಪವೇ ಇರುವುದರಿಂದ ಪ್ರವಾಸಿಗರಿಗೆ ಹೆಚ್ಚು ಅನುಕೂಲ ಆಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಚಿಕ್ಕಮಗಳೂರು ವಿಭಾಗ ವ್ಯಾಪ್ತಿಯಲ್ಲಿ ಭದ್ರತಾ ಗಸ್ತು ಮತ್ತು ಪ್ಲಾಸ್ಟಿಕ್ ತಪಾಸಣೆಗೆ 3 ಬೊಲೆರೊ ಕ್ಯಾಂಪರ್ ವಾಹನಗಳ ಖರೀದಿಗೂ ಕ್ರಿಯಾ ಯೋಜನೆಯಲ್ಲಿ ಅವಕಾಶ ಮಾಡಿಕೊಳ್ಳಲಾಗಿದೆ. ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದರಿಂದ ಸಿಎಸ್‌ಆರ್ ಅನುದಾನ ಹೆಚ್ಚಿನದಾಗಿ ಜಿಲ್ಲೆಗೆ ದೊರಕುತ್ತಿದೆ ಎಂದು ಅವರು ವಿವರಿಸುತ್ತಾರೆ.
ಎತ್ತಿನಭುಜ ಚಾರಣ ಪ್ರದೇಶ ಅಭಿವೃದ್ಧಿ
ಮೂಡಿಗೆರೆ ತಾಲ್ಲೂಕಿನ ಎತ್ತಿನಭುಜ ಚಾರಣ ಪ್ರದೇಶ ಅಭಿವೃದ್ಧಿಗೂ ಅರಣ್ಯ ಇಲಾಖೆ ₹10 ಲಕ್ಷ ಮೊತ್ತದ ಯೋಜನೆ ತಯಾರಿಸಿದೆ. ಚಾರಣ ಬರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಪ್ರವಾಸಿಗರಿಗೆ ಶೌಚಾಲಯ ಕುಡಿಯುವ ನೀರಿನ ವ್ಯವಸ್ಥೆ ಸುರಕ್ಷತೆ ಸೇರಿ ಮೂಲ ಸೌಕರ್ಯ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
₹95 ಲಕ್ಷದಲ್ಲಿ ಆರು ಕಾಮಗಾರಿ
ಕಾಮಗಾರಿ; ಮೊತ್ತ
ಮಲಯ ಮಾರುತ ವಸತಿ ಗೃಹ ನವೀಕರಣ; ₹ 20 ಲಕ್ಷ
ಎತ್ತಿನಭುಜ ಚಾರಣ ಪ್ರದೇಶ ಅಭಿವೃದ್ಧಿ; ₹ 10 ಲಕ್ಷ
ಮತ್ತಾವರ ವಿಶ್ರಾಂತಿ ಗೃಹದ ನವೀಕರಣ; ₹ 10 ಲಕ್ಷ
ಮತ್ತಾವರ ವಿಶ್ರಾಂತಿ ಗೃಹದ ಸುಧಾರಣೆ; ₹ 15 ಲಕ್ಷ
ಮತ್ತಾವರ ಮಾಹಿತಿ ಕೇಂದ್ರದ ನವೀಕರಣ ಮತ್ತು ಸುಧಾರಣೆ; ₹ 10 ಲಕ್ಷ
ಭದ್ರಾತಾ ಗಸ್ತು ಮತ್ತು ಪ್ಲಾಸ್ಟಿಕ್ ತಪಾಸಣೆಗೆ 3 ವಾಹನ ಖರೀದಿ; ₹ 30 ಲಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.