ತರೀಕೆರೆ: ಮ್ಯಾಮ್ಕೋಸ್ ಪ್ರಸಕ್ತ ಸಾಲಿನ ವಹಿವಾಟಿನಲ್ಲಿ ₹5.52 ಕೋಟಿ ಲಾಭಾಂಶ ಗಳಿಸಿ, ಅಗ್ರಸ್ಥಾನ ಉಳಿಸಿಕೊಂಡಿದೆ ಎಂದು ಮ್ಯಾಮ್ಕೋಸ್‌ನ ಉಪಾಧ್ಯಕ್ಷ ಎಚ್.ಎಸ್. ಮಹೇಶ್ ಹುಲ್ಕುಳಿ ತಿಳಿಸಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಷೇರುದಾರರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
1939ರಲ್ಲಿ ಪ್ರಾರಂಭವಾದ ಈ ಸಂಸ್ಥೆಯನ್ನು 2006ರಲ್ಲಿ ಸಹಕಾರ ಭಾರತಿ ನೇತೃತ್ವದಲ್ಲಿ ಸಂಸ್ಥೆಯ ಆಡಳಿತ ಚುಕ್ಕಾಣಿ ಹಿಡಿದು, ಅಂದು 16,778 ಸದಸ್ಯರಿದ್ದರೆ ಈಗ 30,634 ಸದಸ್ಯರೊಂದಿಗೆ 3ಲಕ್ಷ ಕ್ವಿಂಟಲ್‌ಗೂ ಹೆಚ್ಚು ಅಡಿಕೆ ವ್ಯವಹಾರ ನಡೆಸುತ್ತಿದೆ. ಇದಕ್ಕೆ ಷೇರುದಾರರ ಅಚಲ ವಿಶ್ವಾಸ ಹಾಗೂ ಉತ್ತಮ ವ್ಯವಹಾರವೇ ಕಾರಣ ಎಂದರು.
2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗದಲ್ಲಿ ಸಂಸ್ಥೆಯ ನೂತನ ಕಟ್ಟಡವನ್ನು ಉದ್ಘಾಟಿಸಿದ್ದರು. ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ ಎಲ್ಲಾ ಕೇಂದ್ರ ಮತ್ತು ಶಾಖಾ ಕಚೇರಿಗಳು ಸ್ವಂತ ಕಟ್ಟಡಗಳನ್ನು ಹೊಂದಿವೆ. ಎಲ್ಲಿಯೂ ಬಾಡಿಗೆ ಕಟ್ಟಡಗಳಿಲ್ಲ ಎಂದು ಹೆಮ್ಮೆಪಟ್ಟರು.
ಕೊರೊನಾ ಸಮಯದಲ್ಲೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ, ಉಳಿದೆಲ್ಲ ದಿನಗಳಲ್ಲಿ ಕಚೇರಿ ತೆರೆದಿದ್ದು ಷೇರುದಾರರಿಂದ ಅಡಿಕೆ ಖರೀದಿಸುವ ಮೂಲಕ ಷೇರುದಾರರ ಸಂಕಷ್ಟಗಳಿಗೆ ಸ್ಪಂದಿಸಿದೆ. ಅದೇ ರೀತಿ ಷೇರುದಾರರು ಸಹ ಗುಣಮಟ್ಟದ ಅಡಿಕೆಯನ್ನೇ ನೀಡುವುದರ ಮೂಲಕ ಸಂಸ್ಥೆಯ ಗೌರವವನ್ನು ಕಾಪಾಡಿಕೊಳ್ಳಬೇಕು. ನಮ್ಮ ಸಂಸ್ಥೆಯ ಅಡಿಕೆಗೆ ದೇಶದಾದ್ಯಂತ ಉತ್ತಮ ಬೇಡಿಕೆ ಇದೆ. ಅದೇ ರೀತಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು, ಅಡಿಕೆ ಬೆಲೆ ಕುಸಿಯದಂತೆ ಬೆಳೆಗಾರರ ಹಿತ ಕಾಯುತ್ತಿದೆ ಎಂದರು.
ನೇಮಕಾತಿ ಪ್ರಕ್ರಿಯೆಯನ್ನು ನಿಷ್ಠೆ ಮತ್ತು ಪಾರದರ್ಶಕವಾಗಿ ನಡೆಸಲಾಗಿದೆ. ಷೇರುದಾರರಿಗೆ ಆರೋಗ್ಯ ವಿಮೆ, ಕುಟುಂಬ ಹಾಗೂ ತೋಟಗಳಲ್ಲಿ ಸಂಭವಿಸಬಹುದಾದ ಅವಘಡಗಳಿಗೆ ವಿಮಾ ಸೌಲಭ್ಯ ಕಲ್ಪಿಸಲಾಗಿದೆ. ಸಾಲ ಪಡೆದವರು ಸರಿಯಾಗಿ ಮರುಪಾವತಿ ಮಾಡಬೇಕು. ಸದಸ್ಯರ ಎಲ್ಲಾ ವ್ಯವಹಾರಗಳ ಮಾಹಿತಿ ಅವರ ಮೊಬೈಲ್‌ಗೆ ಕಳುಹಿಸಲಾಗುತ್ತಿದೆ ಎಂದು ಮಹೇಶ್ ಹುಲ್ಕುಳಿ ತಿಳಿಸಿದರು.
ಸಹಕಾರ ಭಾರತಿ ಸಂಸ್ಥೆಯ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಬಿ.ಸಿ. ನರೇಂದ್ರ, ಸುರೇಶ್ಚಂದ್ರ, ಸಹನಾ ಸುಭಾಶ್, ಜಯಶ್ರೀ, ರತ್ನಾಕರ, ಕೆ.ವಿ. ಕೃಷ್ಣಮೂರ್ತಿ, ವಿರೂಪಾಕ್ಷ, ಸತೀಶ್, ಧರ್ಮೇಂದ್ರ, ಕೀರ್ತಿರಾಜ್, ವಿರೇಶ್, ಕುಬೇಂಧ್ರಪ್ಪ ಇದ್ದರು. ಅಗಲಿದ ಷೇರುದಾರರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಮಾಲೋಚನೆಯಲ್ಲಿ ಸ್ಥಳೀಯ ಮುಖಂಡರಾದ ಟಿ.ವಿ. ಶಿವಶಂಕರಪ್ಪ, ಲೋಕೇಶ್, ಶಿವಮೂರ್ತಿ, ತಮ್ಮಯ್ಯ, ಪಾಂಡರಂಗ ಪಾಲ್ಗೊಂಡಿದ್ದರು. ಟಿ.ಜಿ. ಸದಾನಂದ ಪ್ರಾರ್ಥಿಸಿದರು. ಮ್ಯಾಮ್ಕೋಸ್ ನಿರ್ದೇಶಕ ಟಿ.ಎಲ್. ರಮೇಶ್ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.