ADVERTISEMENT

ಮೂಡಿಗೆರೆ | ಮುತ್ತಿಗೆಪುರದಲ್ಲಿ ಕಾಡಾನೆ ದಾಳಿ: ವ್ಯಕ್ತಿಗೆ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 6:26 IST
Last Updated 7 ಆಗಸ್ಟ್ 2025, 6:26 IST
ಮೂಡಿಗೆರೆ ತಾಲ್ಲೂಕಿನ ಮುತ್ತಿಗೆಪುರದಲ್ಲಿ ಕಾಡಾನೆ ದಾಳಿಯಿಂದ ಗಾಯಗೊಂಡ ಫಿಲಪ್ ಕ್ರಿಸ್ಟೋಲಿನಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ವಲಯ ಅರಣ್ಯಾಧಿಕಾರಿ ಕಾವ್ಯ ಭೇಟಿ ನೀಡಿ ಮಾಹಿತಿ ಪಡೆದರು
ಮೂಡಿಗೆರೆ ತಾಲ್ಲೂಕಿನ ಮುತ್ತಿಗೆಪುರದಲ್ಲಿ ಕಾಡಾನೆ ದಾಳಿಯಿಂದ ಗಾಯಗೊಂಡ ಫಿಲಪ್ ಕ್ರಿಸ್ಟೋಲಿನಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ವಲಯ ಅರಣ್ಯಾಧಿಕಾರಿ ಕಾವ್ಯ ಭೇಟಿ ನೀಡಿ ಮಾಹಿತಿ ಪಡೆದರು   

ಮೂಡಿಗೆರೆ: ತಾಲ್ಲೂಕಿನ ಮುತ್ತಿಗೆಪುರ ಗ್ರಾಮದಲ್ಲಿ ಮಂಗಳವಾರ ಮಧ್ಯರಾತ್ರಿ ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಫಿಲಿಪ್ ಕ್ರಿಸ್ಟೋಲಿನಾ (63) ಗಾಯಗೊಂಡವರು. ಇವರು, ಮಧ್ಯರಾತ್ರಿ 2ರ ಸುಮಾರಿಗೆ ನಾಯಿ ಬೊಗಳಿದ ಶಬ್ದ ಕೇಳಿ ಮನೆಯಿಂದ ಹೊರಬಂದಾಗ, ಮನೆಯ ಸಮೀಪದಲ್ಲಿಯೇ ಬಂದಿದ್ದ ಕಾಡಾನೆ ಏಕಾಏಕಿ ಫಿಲಿಪ್ ಅವರ ದಾಳಿ ನಡೆಸಿದೆ.

ಕಾಡಾನೆ ತನ್ನ ಸೊಂಡಿಲಿನಿಂದ ಫಿಲಿಪ್ ಅವರನ್ನು ಎಸೆದಿದ್ದು, ಅವರಿಗೆ ಕಾಲು, ಎದೆ ಮತ್ತು ಕೈ ಭಾಗಕ್ಕೆ ತೀವ್ರ ಗಾಯಗಳಾಗಿವೆ. ಕೂಡಲೇ ಅವರನ್ನು ಮೂಡಿಗೆರೆ ಎಂಜಿಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ, ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಫಿಲಿಪ್ ಕ್ಯಾಸ್ಟೋಲಿನಾ ಅವರು ಟ್ರ್ಯಾಕ್ಟರ್ ಮೂಲಕ ಬದುಕು ಸಾಗಿಸುತ್ತಿದ್ದು, ಕುಟುಂಬದ ಆಧಾರವಾಗಿದ್ದ ಅವರಿಗೆ ಗಂಭೀರ ಗಾಯವಾದ ಹಿನ್ನೆಲೆ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಗ್ರಾಮದ ಕಾಫಿ ತೋಟಗಳಲ್ಲಿ ಕಳೆದ ಕೆಲವು ವಾರಗಳಿಂದ 35 ಕಾಡಾನೆಗಳು ವಾಸ್ತವ್ಯ ಹೂಡಿದ್ದು, ಮುತ್ತಿಗೆಪುರ ಸೇರಿದಂತೆ ಮಾಕೋನಹಳ್ಳಿ, ಕಾರಬೈಲ್, ದುಂಡುಗ, ಹಳಸೆ ಗ್ರಾಮಗಳಲ್ಲಿ ಸಂಚರಿಸುತ್ತಾ ತೀವ್ರ ಉಪಟಳ ನೀಡುತ್ತಿವೆ. ಜನರ ನೋವು ಕೇಳುವವರು ಇಲ್ಲದಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಮೂಡಿಗೆರೆ ವಲಯ ಅರಣ್ಯ ಅಧಿಕಾರಿ ಕಾವ್ಯ ಅವರ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.