ADVERTISEMENT

ಚಿಕ್ಕಮಗಳೂರು | ಹೆರಿಗೆ: ಗ್ರಾಮೀಣದಲ್ಲಿ ಸೌಲಭ್ಯ ಕೊರತೆ

ಖಾಸಗಿ ಆಸ್ಪತ್ರೆಗಳ ಮೇಲೆ ಹೆಚ್ಚು ಅವಲಂಬನೆ

ವಿಜಯಕುಮಾರ್ ಎಸ್.ಕೆ.
Published 11 ಆಗಸ್ಟ್ 2025, 6:36 IST
Last Updated 11 ಆಗಸ್ಟ್ 2025, 6:36 IST
ಚಿಕ್ಕಮಗಳೂರಿನ ಹೆರಿಗೆ ಆಸ್ಪತ್ರೆ
ಚಿಕ್ಕಮಗಳೂರಿನ ಹೆರಿಗೆ ಆಸ್ಪತ್ರೆ   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಿದ್ದರೂ ಖಾಸಗಿ ಆಸ್ಪತ್ರೆಗಳನ್ನೇ ಹೆಚ್ಚು ಅವಲಂಬಿಸಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ಮಾತ್ರ ಪ್ರತ್ಯೇಕ ಹೆರಿಗೆ ಆಸ್ಪತ್ರೆ ಇರುವುದರಿಂದ ಸರ್ಕಾರಿ ಆಸ್ಪತ್ರೆಯನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. 

ಗ್ರಾಮೀಣ ಭಾಗದಲ್ಲಿ ಭಾಗದಲ್ಲಿ ಅದರಲ್ಲೂ ಕಡೂರು ಮತ್ತು ತರೀಕೆರೆ ಭಾಗದಲ್ಲಿ ಖಾಸಗಿ ಆಸ್ಪತ್ರೆ ಅವಲಂಬನೆ ಹೆಚ್ಚಾಗಿದ್ದರೆ, ಮಲೆನಾಡು ಭಾಗದಲ್ಲಿ ಪಕ್ಕದ ಜಿಲ್ಲೆಗಳ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ.

ಸುಸಜ್ಜಿತ ಹೆರಿಗೆ ಆಸ್ಪತ್ರೆ ಇದ್ದರೆ ಜನ ಸರ್ಕಾರಿ ಆಸ್ಪತ್ರೆಗಳಲ್ಲೆ ಚಿಕಿತ್ಸೆ ಪಡೆಯಲು ಬಯಸುತ್ತಾರೆ. ತಿಂಗಳಿಗೆ ಸರಾಸರಿ 500 ಹೆರಿಗೆ ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲೇ ನಡೆಯುತ್ತಿದೆ. ಜಿಲ್ಲೆಯಲ್ಲಿ ಪ್ರತ್ಯೇಕ ಹೆರಿಗೆ ಆಸ್ಪತ್ರೆ ಇರುವುದು ಜಿಲ್ಲಾ ಕೇಂದ್ರದಲ್ಲಿ ಮಾತ್ರ. ಉಳಿದೆಡೆ ಗರ್ಭಿಣಿ ಮತ್ತು ಪ್ರಸೂತಿ ತಜ್ಞರು ಇರುವ ತಾಲ್ಲೂಕು ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಲಾಗುತ್ತಿದೆ.

ADVERTISEMENT

ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳಲ್ಲಿರುವ ತಾಯಿ ಮಗು ಆಸ್ಪತ್ರೆಗಳಲ್ಲಿ ಒಂದಷ್ಟು ಸೌಲಭ್ಯಗಳಿದ್ದರೂ, ಗ್ರಾಮೀಣ ಭಾಗಗಳಲ್ಲಿ ಆಸ್ಪತ್ರೆ, ಪ್ರಸೂತಿ ತಜ್ಞರು ಹಾಗೂ ಶುಶ್ರೂಷಕ ಸಿಬ್ಬಂದಿಯ ಕೊರತೆ ಇದೆ. ಇದರಿಂದ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಹೆರಿಗೆಗಳು ನಡೆಯುವುದಿಲ್ಲ. ಆ ಭಾಗದ ಜನರು ಹೆರಿಗೆಗಾಗಿ ತಾಲ್ಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳಿಗೆ ಬರಬೇಕಾಗಿದೆ.

ಕಡೂರು ಮತ್ತು ತರೀಕೆರೆ ತಾಲ್ಲೂಕಿನ ಜನ ಖಾಸಗಿ ಆಸ್ಪತ್ರೆಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ಭಾಗದ ಜನ ಬಹುತೇಕ ನೆರೆ ಜಿಲ್ಲೆಯತ್ತ ಮುಖ ಮಾಡುತ್ತಾರೆ. ತರೀಕೆರೆ ಮತ್ತು ಎಂ.ಸಿ.ಹಳ್ಳಿ ಭಾಗದ ಜನ ಶಿವಮೊಗ್ಗ ಆಸ್ಪತ್ರೆಗಳನ್ನು ಅವಲಂಬಿಸುತ್ತಾರೆ.

ಪೂರಕ ಮಾಹಿತಿ: ಕೆ.ವಿ.ನಾಗರಾಜ್, ಎನ್.ಸೋಮಶೇಖರ್, ಕೆ.ನಾಗರಾಜ್, ರವಿ ಕೆಳಂಗಡಿ, ರವಿಕುಮಾರ್ ಶೆಟ್ಟಿಹಡ್ಲು, ಕೆ.ಎನ್.ರಾಘವೇಂದ್ರ, ಜೆ.ಒ.ಉಮೇಶ್‌ಕುಮಾರ್.

ಮೇಲ್ದರ್ಜೆಗೇರದ ಆಸ್ಪತ್ರೆ ಅಜ್ಜಂಪುರ: ತಾಲ್ಲೂಕು ಕೇಂದ್ರವಾಗಿ ಏಳು ವರ್ಷ ಕಳೆದರೂ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ತಾಲ್ಲೂಕು ಸಾರ್ವಜನಿಕ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಲ್ಲ. ಆರೋಗ್ಯ ಕೇಂದ್ರದಲ್ಲಿ ಆಪರೇಷನ್ ಕೊಠಡಿ ಇದೆ. ಅಗತ್ಯ ಉಪಕರಣಗಳೂ ಇವೆ. ಆದರೆ ತಜ್ಞ ವೈದ್ಯರ ಕೊರತೆಯಿಂದ ಅವು ದೂಳು ಹಿಡಿಯುತ್ತಿವೆ. ಲಕ್ಷಾಂತರ ಮೌಲ್ಯದ ಉಪಕರಣಗಳು ಬಳಕೆಯಾಗದೆ ಸಾರ್ವಜನಿಕರ ಹಣ ಪೋಲಾಗುತ್ತಿದೆ. ಸಿಸೇರಿಯನ್ ಅಗತ್ಯ ಇರುವ ಗರ್ಭಿಣಿಯರನ್ನು ತರೀಕೆರೆ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಬಹುತೇಕರು ತರೀಕೆರೆ ಕಡೂರು ಚಿಕ್ಕಮಗಳೂರು ಅಥವಾ ಶಿವಮೊಗ್ಗದ ಆಸ್ಪತ್ರೆಗಳ ಕಡೆಗೆ ಮುಖ ಮಾಡುತ್ತಿದ್ದಾರೆ.

ಸಮುದಾಯಕ್ಕೆ ದಕ್ಕದ ಕಳಸ ಸರ್ಕಾರಿ ಆಸ್ಪತ್ರೆ ಕಳಸ: ಹೆಸರಿಗೆ ಕಳಸ ಸಮುದಾಯ ಆರೋಗ್ಯ ಕೇಂದ್ರ. ಆದರೆ ತಾಲ್ಲೂಕಿನ 35 ಸಾವಿರ ಜನರಿಗೆ ಈಆಸ್ಪತ್ರೆಯಿಂದ ಹೆಚ್ಚಿನ ಅನುಕೂಲ ಆಗುತ್ತಿಲ್ಲ.   ಈ ಆಸ್ಪತ್ರೆಯ ಕಟ್ಟಡ ಸುಸಜ್ಜಿತವಾಗಿದೆ. ಆಸ್ಪತ್ರೆಯಲ್ಲಿನ ಪ್ರಯೋಗಾಲಯ ವಾರ್ಡ್‌ ಸೌಲಭ್ಯಗಳು ಚೆನ್ನಾಗಿವೆ. ಶುಚಿತ್ವದಲ್ಲೂ ಬೊಟ್ಟು ಮಾಡುವಂತಿಲ್ಲ. ಆದರೆ ಆಸ್ಪತ್ರೆಯಲ್ಲಿ ಹಲವಾರು ವರ್ಷಗಳಿಂದ ಖಾಯಂ ವೈದ್ಯರೆ ಇಲ್ಲದೆ ಜನರಿಗೆ ಆರೋಗ್ಯ ಸೇವೆ ಮರೀಚಿಕೆಯಾಗಿದೆ. ಕಳೆದ ಹಲವು ವರ್ಷಗಳಿಂದ ಕಡ್ಡಾಯ ಗ್ರಾಮೀಣ ಸೇವೆಯ ವೈದ್ಯರನ್ನೇ ಆಸ್ಪತ್ರೆ ನೆಚ್ಚಿಕೊಂಡಿದೆ. ಈ ಯುವ ವೈದ್ಯರ ಸೇವಾವಧಿ ಮುಗಿದ ಕೂಡಲೇ ಮತ್ತೆ ಆಸ್ಪತ್ರೆಗೆ ವೈದ್ಯರಿಲ್ಲ ಎಂಬ ಕೊರಗು ಶುರುವಾಗುತ್ತದೆ. ಮತ್ತೆ ಯಾವುದಾದರೂ ಆಸ್ಪತ್ರೆಯಿಂದ ಇಲ್ಲಿಗೆ ತಾತ್ಕಾಲಿಕವಾಗಿ ನಿಯೋಜಿಸಲಾಗುತ್ತದೆ. ಅವರು ಕೂಡ ಕೆಲ ತಿಂಗಳಲ್ಲೇ ಬದಲಾಗುತ್ತಾರೆ. ಹೀಗಾಗಿ ಜನ ಸಮುದಾಯದ ಆರೋಗ್ಯ ರಕ್ಷೆ ಮಾಡಬೇಕಿದ್ದ ಆಸ್ಪತ್ರೆ ತನ್ನ ಮೂಲ ಆಶಯಕ್ಕೆವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಿನದ 24 ಗಂಟೆಯೂ ವೈದ್ಯಕೀಯ ಚಿಕಿತ್ಸೆ ಸಿಗಬೇಕು ಎಂಬ ನಿಯಮ ಇದೆ. ಆದರೆ ಇಲ್ಲಿ ಮರಣೋತ್ತರ ಪರೀಕ್ಷೆಗೂ ವೈದ್ಯರೇ ಸಿಗದೆ ಬೇರೆ ಊರಿನಿಂದ ವೈದ್ಯರು ಬಂದು ನೆರವೇರಿಸುವಂತಾಗಿದೆ. ಆಸ್ಪತ್ರೆಯಲ್ಲಿ ಸಾಕಷ್ಟು ಸಂಖ್ಯೆಯ ಸಿಬ್ಬಂದಿ ಇದ್ದು ಖಾಯಂ ವೈದ್ಯರು ನೇಮಕವಾದರೆ ಎಲ್ಲ ಸಮಸ್ಯೆ ಬಗೆಹರಿಯುತ್ತದೆ. ಆದರೆ ಇಲ್ಲಿಗೆ ಖಾಯಂ ವೈದ್ಯರು ಬರಲು ಹಿಂದೇಟು ಹಾಕುವುದರಿಂದ ಅನೇಕ ವರ್ಷಗಳಿಂದ ಆಸ್ಪತ್ರೆಯ ಬಗ್ಗೆ ಜನರಿಗೆ ನಂಬಿಕೆಯೇ ಇಲ್ಲವಾಗಿದೆ.  ತಾಲ್ಲೂಕಿನಲ್ಲಿ ದೊಡ್ಡ ಸಂಖ್ಯೆಯ ಕಾರ್ಮಿಕರು ಹೆರಿಗೆಗೆ ಈ ಆಸ್ಪತ್ರೆಗೆ ಕರೆತಂದರೆ ಕೊಪ್ಪ ಅಥವಾ ಮೂಡಿಗೆರೆಗೆ ಕಳುಹಿಸಲಾಗುತ್ತದೆ. ತುರ್ತು ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ಈ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞೆ ಸೇರಿದಂತೆ ನಾಲ್ಕು ವೈದ್ಯರ ಹುದ್ದೆ ಖಾಲಿ ಇದೆ. ಚಿಕ್ಕಮಗಳೂರಿನ ವೈದ್ಯರಿಗೆ ಇಲ್ಲಿನ ಆಸ್ಪತ್ರೆಯ ಆಡಳಿತದ ಉಸ್ತುವಾರಿ ನೀಡಲಾಗಿದೆ. ಇದರಿಂದ ಸುಗಮ ಆಡಳಿತಕ್ಕೂ ತೊಡಕಂಟಾಗಿದೆ. ಈ ಆಸ್ಪತ್ರೆಗೆ ಖಾಯಂ ವೈದ್ಯರನ್ನು ನೇಮಿಸಿ ಅವರಿಗೆ ಆಸ್ಪತ್ರೆಯ ಆಡಳಿತ ವಹಿಸಿದರೆ ಎಲ್ಲ ಸಮಸ್ಯೆ ಬಗೆಹರಿಯುತ್ತದೆ ಎಂಬುದು ಸ್ಥಳೀಯರ ಸಲಹೆ ಆಗಿದೆ.

ಸುಸಜ್ಜಿತವಾದ ಹೆರಿಗೆ ವಿಭಾಗ ಮೂಡಿಗೆರೆ: ಪಟ್ಟಣದ ಮಹಾತ್ಮಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯು ಸುಸಜ್ಜಿತವಾದ ಹೆರಿಗೆ‌ ವಿಭಾಗವನ್ನು ಹೊಂದಿದ್ದು ತಾಲ್ಲೂಕು ಮಾತ್ರವಲ್ಲದೆ ಜಿಲ್ಲೆಯ ವಿವಿಧೆಡೆಯಿಂದ ಗರ್ಭಿಣಿಯರು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆಸ್ಪತ್ರೆಯಲ್ಲಿ ಹನ್ನೆರಡು ವರ್ಷಗಳಿಂದ ಪ್ರಸೂತಿ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ವಿಜಯಲಕ್ಷ್ಮಿ ಪೈ ವರ್ಗಾವಣೆಯಾಗಿದ್ದು ಅವರ ಸ್ಥಾನಕ್ಕೆ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಪ್ರಸೂತಿ ತಜ್ಞರಾಗಿದ್ದ ಡಾ.ಲೋಹಿತ್ ಬಂದಿದ್ದಾರೆ. ಹೆರಿಗೆ ವಿಭಾಗವು ಹಿಂದಿನಂತೆಯೇ ಸುಸೂತ್ರವಾಗಿ ಸಾಗಿದೆ. ಹೆರಿಗೆ ವಿಭಾಗದಲ್ಲಿ ಸಿಸೇರಿಯನ್‌ಗಿಂತಲೂ ಸಹಜ ಹೆರಿಗೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅನಿವಾರ್ಯ ಅಗತ್ಯ ಸ್ಥಿತಿಯಲ್ಲಿ ಮಾತ್ರ ಸಿಸೇರಿಯನ್ ನಡೆಸಲಾಗುತ್ತಿದೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ತಿಳಿಸಿದ್ದಾರೆ.

ಹಳೇ ಕಟ್ಟಡದಲ್ಲೇ ಶಸ್ತ್ರಚಿಕಿತ್ಸೆ ಕೊಪ್ಪ: ಪಟ್ಟಣದಲ್ಲಿರುವ ಎಂ.ಎಸ್.ದ್ಯಾವೇಗೌಡ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ತಿಂಗಳಿಗೆ ಸರಾಸರಿ 100 ರಿಂದ 120 ಹೆರಿಗೆಗಳಾಗುತ್ತಿವೆ. ಆಸ್ಪತ್ರೆಯಲ್ಲಿ ಇಬ್ಬರು ಸ್ತ್ರೀರೋಗ ತಜ್ಞರು ಒಬ್ಬರು ಮಕ್ಕಳ ತಜ್ಞರು ಒಬ್ಬರು ಅರಿವಳಿಕೆ ತಜ್ಞರು ಇದ್ದಾರೆ. ಇದೇ ಆಸ್ಪತ್ರೆ ಪಕ್ಕದಲ್ಲಿ ₹12 ಕೋಟಿ ವೆಚ್ಚದಲ್ಲಿ ನೂತನವಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಲಾಗಿದ್ದು ಈ ಕಟ್ಟಡದಲ್ಲಿ ಸದ್ಯಕ್ಕೆ ಹೊರ ರೋಗಿಗಳಿಗೆ ಚಿಕಿತ್ಸೆ ನಡೆಯುತ್ತಿದೆ. ಹೊಸ ಕಟ್ಟಡದ ಗೋಡೆ ಮಳೆಗಾಲದಲ್ಲಿ ತೇವಾಂಶದಿಂದ ಸೋರುತ್ತಿದ್ದು ಚಾವಣಿಗೆ ಶೀಟ್ ಅಳವಡಿಸಬೇಕಾಗಿದೆ. ಇಲ್ಲಿ ಶಸ್ತ್ರಚಿಕೆತ್ಸೆ ಕೊಠಡಿ ಕಟ್ಟಲಾಗಿದ್ದರೂ ಅಗತ್ಯ ಸಲಕರಣೆ ಅಳವಡಿಸಬೇಕಿದೆ. ಲಿಫ್ಟ್ ವ್ಯವಸ್ಥೆ ಆಕ್ಸಿಜನ್ ಪೂರೈಕೆ ಸಂಪರ್ಕ ಕಲ್ಪಿಸಬೇಕಿದೆ. ಈ ‌ಕಾರಣದಿಂದ ಸದ್ಯಕ್ಕೆ ಹಳೆ ಕಟ್ಟಡದಲ್ಲಿ ಹೆರಿಗೆ ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ತೀರ್ಥಹಳ್ಳಿ ಶೃಂಗೇರಿ ಎನ್.ಆರ್.ಪುರ ಬಾಳೆಹೊನ್ನೂರು ಕಳಸ ಭಾಗದಿಂದ ಹೆಚ್ಚಿನ ಜನ ಕೊಪ್ಪ ತಾಲ್ಲೂಕು ಆಸ್ಪತ್ರೆಗೆ ಹೆರಿಗೆಗೆ ದಾಖಲಾಗುತ್ತಾರೆ. ಈ ಕಾರಣದಿಂದಲೇ ಸಾರ್ವಜನಿಕರಿಗೆ ಅನುಕೂಲ ದೃಷ್ಟಿಯಿಂದ ಸರ್ಕಾರ ಇಲ್ಲಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರು ಮಾಡಿದೆ. ‘ಹೆರಿಗೆಗೆ ಸಂಬಂಧಿಸಿದಂತೆ ವೈದ್ಯರು ಸಿಬ್ಬಂದಿ ಕೊರತೆಯಾಗಿಲ್ಲ. ಹೊಸ ಕಟ್ಟಡದಲ್ಲಿ ಸಣ್ಣಪುಟ್ಟ ಕೊರತೆಗಳು ನಿಧಾನವಾಗಿ ಬಗೆಹರಿಯುತ್ತಿವೆ’ ಎಂದು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಂದೀಪ್ ತಿಳಿಸಿದರು.

ಮೂರು ವರ್ಷಗಳಿಂದ ಪ್ರಸೂತಿ ತಜ್ಞರಿಲ್ಲ ಶೃಂಗೇರಿ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರು ಹೊರತು ಪಡಿಸಿ ಬೇರೆ ಚಿಕಿತ್ಸೆಗೆ ವೈದ್ಯರೆ ಇಲ್ಲದೆ ಜನ ಪರದಾಡುವಂತಾಗಿದೆ. ಅದರಲ್ಲೂ ಕಳೆದ 3 ವರ್ಷದಿಂದ ಪ್ರಸೂತಿ ತಜ್ಞರ ಹುದ್ದೆ ಖಾಲಿ ಇದೆ. ಈ ರೀತಿಯ ಪ್ರಸೂತಿ ವೈದ್ಯರ ಕೊರತೆಯಿಂದ ಜನ ಉಡುಪಿ ಮಣಿಪಾಲ್ ಮಂಗಳೂರು ಶಿವಮೊಗ್ಗ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಿಗೆ ದುಬಾರಿ ಹಣ ನೀಡಿ ಹೆರಿಗೆ ಮಾಡಿಸಿಕೊಳ್ಳುವ ಸ್ಥಿತಿ ಇದೆ. ಶೃಂಗೇರಿಯಲ್ಲಿ ಹೆರಿಗೆ ಮಾಡಿಸಿಕೊಳ್ಳುವ ಯಾವುದೇ ಉಪಕರಣ ಇಲ್ಲ. ಶೃಂಗೇರಿ ಆಸ್ಪತ್ರೆಯಲ್ಲಿ ಯಾವುದೇ ಮೂಲಭೂತ ಸೌಕರ್ಯಗಲು ಇಲ್ಲದೆ ಆಸ್ಪತ್ರೆ ಸೊರುಗುತ್ತಿದೆ.

ತಜ್ಞ ವೈದ್ಯರ ಕೊರತೆ ಕಡೂರು: ತಾಲೂಕಿನಲ್ಲಿ ಸಾರ್ವಜನಿಕ ಆಸ್ಪತ್ರೆ ಬೀರೂರು ಸಾರ್ವಜನಿಕ ಆಸ್ಪತ್ರೆ ಮತ್ತು ಪಂಚನಹಳ್ಳಿಯಲ್ಲಿ ಒಬ್ಬರು ಪ್ರಸೂತಿ ತಜ್ಞರಿದ್ದಾರೆ. ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಇರುವ ತಜ್ಞ ವೈದ್ಯರು ಸಾಮಾನ್ಯವಾಗಿ ತಮ್ಮ ಬಳಿ ಬರುವ ಎಲ್ಲಾ ಹೆರಿಗೆ ಪ್ರಕರಣಗಳನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ನಿರ್ವಹಿಸುತ್ತಿದ್ದಾರೆ. ಜನವರಿಯಿಂದ ಆಗಸ್ಟ್‌ ವರೆಗೆ 220ರಿಂದ 240 ಹೆರಿಗೆ ಪ್ರಕರಣಗಳು ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿವೆ. ಬೀರೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರಿದ್ದರೂ ಅವರು ಗರ್ಭಿಣಿಯರನ್ನು ತಿಂಗಳಿಗೊಮ್ಮೆ ಪರೀಕ್ಷೆ ನಡೆಸಿ ಹೆರಿಗೆ ಸಂದರ್ಭದಲ್ಲಿ ಬೇರೆಡೆಗೆ ಕಳಿಸುವುದು ಸಾಮಾನ್ಯವಾಗಿದೆ. ಕಳೆದ ಏಪ್ರಿಲ್ ತಿಂಗಳಿನಿಂದ ಅವರು ಕೂಡ ಹೆರಿಗೆ ರಜೆಯಲ್ಲಿದ್ದಾರೆ.‌2025ರಲ್ಲಿ ಈವರೆಗೆ 3 ರಿಂದ 4 ಹೆರಿಗೆ ಪ್ರಕರಣಗಳು ನಡೆದಿದ್ದರೆ ಹೆಚ್ಚು ಪ್ರಗತಿ ಸಾಧಿಸದ ವೈದ್ಯರ ವಿರುದ್ಧ ಕ್ರಮ ಅಥವಾ ಪ್ರಸೂತಿ ತಜ್ಞರ ಹುದ್ದೆಯನ್ನೇ ಬೀರೂರು ಆಸ್ಪತ್ರೆಯಿಂದ ಕೈಬಿಡುವ ಚಿಂತನೆಗಳು ನಡೆದಿವೆ ಎಂದು ಮೂಲಗಳು ತಿಳಿಸಿದೆ. ಪಂಚನಹಳ್ಳಿಯಲ್ಲಿ ಪ್ರಸೂತಿ ತಜ್ಞ ವೈದ್ಯರಿದ್ದು ಅವರು ವರ್ಗಾವಣೆ ವಿಷಯವಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲಿಯೇ ಮುಂದುವರಿಯುವಂತೆ ನ್ಯಾಯಾಲಯ ನಿರ್ದೇಶನ ನೀಡಿದ್ದರೂ ಕಾರ್ಯನಿರ್ವಹಿಸುತ್ತಿಲ್ಲ. ಬೀರೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರು ರಜೆಯಲ್ಲಿದ್ದಾರೆ. ಜತೆಗೆ ಅರಿವಳಿಕೆ ತಜ್ಞರು ಇಲ್ಲದಿರುವುದು ಹೆರಿಗೆ ಅಥವಾ ಇನ್ನಿತರ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಕೊರತೆಯಾಗಿದೆ ಕಾಡುತ್ತಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ(2025–2026 ಈವರೆಗೆ) ತಾಲ್ಲೂಕು; ಒಟ್ಟು ಹೆರಿಗೆ; ಸಹಜ ಹೆರಿಗೆ; ಸಿಸೇರಿಯನ್ ಹೆರಿಗೆ ಚಿಕ್ಕಮಗಳೂರು; 817; 417; 400 ಕಡೂರು; 90; 30; 60 ಕೊಪ್ಪ; 306; 121; 185 ಮೂಡಿಗೆರೆ; 162; 125; 37 ಎನ್.ಆರ್.ಪುರ; 46; 23; 23 ಶೃಂಗೇರಿ; 0; 0; 0 ತರೀಕೆರೆ; 157; 101; 56 ಒಟ್ಟು; 1578; 817; 761 –– ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ(2025–2026 ಈವರೆಗೆ) ತಾಲ್ಲೂಕು; ಒಟ್ಟು ಹೆರಿಗೆ; ಸಹಜ ಹೆರಿಗೆ; ಸಿಸೇರಿಯನ್ ಹೆರಿಗೆ ಚಿಕ್ಕಮಗಳೂರು; 250; 62; 188 ಕಡೂರು; 279; 51; 228 ಕೊಪ್ಪ; 66; 24; 42 ಮೂಡಿಗೆರೆ; 35; 14; 21 ಎನ್.ಆರ್.ಪುರ; 5; 1; 4 ಶೃಂಗೇರಿ; 22; 04; 18 ತರೀಕೆರೆ; 673; 126; 547 ಒಟ್ಟು; 1330; 282; 1048 ––

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.