ADVERTISEMENT

ವಾಹನಗಳ ಒತ್ತಡ ಹೆಚ್ಚಳ: ಅಪಾಯದಂಚಿನಲ್ಲಿ ಶೃಂಗೇರಿಯ ಮೆಣಸೆ ಸೇತುವೆ

ಪಿಲ್ಲರ್‌ಗಳಲ್ಲಿ ಬಿರುಕು

ರಾಘವೇಂದ್ರ ಕೆ.ಎನ್
Published 2 ಜುಲೈ 2025, 6:40 IST
Last Updated 2 ಜುಲೈ 2025, 6:40 IST
ಶೃಂಗೇರಿಯಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಮೆಣಸೆ ಸೇತುವೆ ಶಿಥಿಲಗೊಂಡಿದೆ
ಶೃಂಗೇರಿಯಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಮೆಣಸೆ ಸೇತುವೆ ಶಿಥಿಲಗೊಂಡಿದೆ   

ಶೃಂಗೇರಿ: ಶೃಂಗೇರಿಯಿಂದ-ಚಿಕ್ಕಮಗಳೂರು-ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಸೇತುವೆಯಲ್ಲಿ ನಿರ್ವಹಣೆ ಕೊರತೆಯಿಂದ ಹೊಂಡ ಬಿದ್ದಿದ್ದು, ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಆದರೂ ಸಂಬಂಧಿಸಿದ ಇಲಾಖೆ, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಸೇತುವೆ ಕೈಪಿಡಿಗಳಿಗೆ ಬಳ್ಳಿ, ಗಿಡಗಳು ಹಬ್ಬಿದ್ದು, ನಿರ್ವಹಣೆ ಕೊರತೆಯಿಂದ ಶಿಥಿಲಾವಸ್ಥೆಗೆ ತಲುಪಿವೆ. ಕೆಲವು ಕೈಪಿಡಿಗಳು ಮುರಿದು ತುಂಗಾ ನದಿಗೆ ಬೀಳುತ್ತಿವೆ.

ಸೇತುವೆ ನಿರ್ಮಾಣವಾಗಿ ದಶಕಗಳು ಕಳೆದರೂ ಈ ಸೇತುವೆಯನ್ನು ದುರಸ್ತಿ ಮಾಡಿಲ್ಲ. ಶೃಂಗೇರಿಯಿಂದ ಜಯಪುರ ಬಾಳೆಹೊನ್ನೂರು, ಕಳಸ, ಹೊರನಾಡು, ಮೂಡಿಗೆರೆ, ಚಿಕ್ಕಮಗಳೂರು, ಬೇಲೂರು, ಹಾಸನ, ಬೆಂಗಳೂರು, ಮೈಸೂರು ಸೇರಿದಂತೆ ನಗರ, ಮಹಾನಗರ, ಗ್ರಾಮೀಣ ಪ್ರದೇಶಗಳಿಗೂ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿ ಈ ಸೇತುವೆ ಇದೆ.

ADVERTISEMENT

1956ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಮುಖ್ಯಮಂತ್ರಿಯಾಗಿದ್ದ ಕಡಿದಾಳ್ ಮಂಜಪ್ಪ ಅವರು ಶಂಕುಸ್ಥಾಪನೆ ಮಾಡಿದ್ದರು. 1960ರಲ್ಲಿ ಲೋಕೋಪಯೋಗಿ ಸಚಿವ ಚೆನ್ನಬಸಪ್ಪ ಉದ್ಘಾಟಿಸಿದ್ದರು. ಪ್ರತಿದಿನ ಸಾವಿರಾರು ವಾಹನಗಳು ಈ ಸೇತುವೆಯ ಮೇಲೆ ಓಡಾಡುತ್ತವೆ.

ಈ ಸೇತುವೆ ಮೇಲೆ ಇತ್ತೀಚಿನ ದಿನಗಳಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಒತ್ತಡದಿಂದಾಗಿ ಸೇತುವೆ ಶಿಥಿಲಗೊಳ್ಳುತ್ತಿದೆ. ಪಿಲ್ಲರ್‌ಗಳು ದುರ್ಬಲಗೊಂಡಿವೆ. ಮರದ ಬೇರುಗಳು, ಬಿದಿರಿನ ಬೇರು ಹರಡಿ ಪಿಲ್ಲರ್‌ಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಮಳೆಗಾಲದಲ್ಲಿ ತುಂಗಾ ನದಿ ಪ್ರವಾಹದಲ್ಲಿ ಬೃಹತ್ ಮರಗಳು ಬಂದು ಸೇತುವೆ ಪಿಲ್ಲರ್‌ಗಳಿಗೆ ಅಪ್ಪಳಿಸುವುದರಿಂದಲೂ ಹಾನಿಯಾಗುತ್ತಿದೆ.

ಸೇತುವೆಯ ಬಳಿ ಬೀದಿ ದೀಪದ ವ್ಯವಸ್ಥೆಯೂ ಇಲ್ಲ. ಶಿಥಿಲಗೊಂಡು ಕುಸಿಯುವ ಹಂತ ತಲುಪುತ್ತಿರುವ ಸೇತುವೆಗೆ ರಾಜ್ಯ ಹೆದ್ದಾರಿ ಪ್ರಾಧಿಕಾರ ಮತ್ತು ಸರ್ಕಾರ ಎಚ್ಚರ ವಹಿಸಬೇಕು. ಅಪಾಯ ಅರಿತು ಅನಾಹುತ ಸಂಭವಿಸುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳಾದ ಪ್ರಶಾಂತ, ಗಣೇಶ್, ದೀಕ್ಷಿತ್ ಆಗ್ರಹಿಸಿದರು.

ಹೊಸ ಸೇತುವೆ ಮಂಜೂರು ಮಾಡಿ

ಈ ಸೇತುವೆ ಹಳೆಯದಾಗಿದ್ದು ಇತ್ತೀಚಿನ ವರ್ಷಗಳಲ್ಲಿ ಈ ಸೇತುವೆ ಮೇಲೆ ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸೇತುವೆ ಮೇಲೆ ಒತ್ತಡವೂ ಜಾಸ್ತಿಯಾಗುತ್ತಿದೆ. ಇಲ್ಲಿಗೆ ಹೊಸ ಸೇತುವೆ ನಿರ್ಮಾಣ ಅಗತ್ಯವಾಗಿದೆ. ಸರ್ಕಾರ ಕೂಡಲೇ ಹೂಸ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಬೇಕು ಎಂದು ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ಹೇಳಿದರು.

ಅಗತ್ಯ ಕ್ರಮ ಕೈಗೊಳ್ಳಿ

ಈ ಸೇತುವೆ ರಾಜ್ಯ ಹೆದ್ದಾರಿಯಲ್ಲಿ ಇರುವುದರಿಂದ ಶೃಂಗೇರಿಯಿಂದ ರಾಜ್ಯ ಮತ್ತು ಹೊರರಾಜ್ಯಗಳ ಪ್ರಮುಖ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಕೊಂಡಿಯಾಗಿದೆ. ಸಂಪರ್ಕ ಕಡಿತಗೊಳ್ಳುವ ಮೊದಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಲೆನಾಡು ಮತ್ತು ಕರಾವಳಿ ಜನಪರ ಒಕ್ಕೂಟದ ರಾಜ್ಯ ಸಂಚಾಲಕ ಅನಿಲ್ ಹೊಸಕೊಪ್ಪ ಹೇಳಿದರು.

ಸೇತುವೆ ಮಧ್ಯ ಭಾಗದ ಒಂದು ಹಂತ 20 ವರ್ಷದ ಹಿಂದೆಯೇ ಕುಸಿದಿದೆ. ಸೇತುವೆ ನಿರ್ಮಾಣ ಸಂಬಂಧ ಲೋಕೋಪಯೋಗಿ ಸಚಿವರ ಗಮನಕ್ಕೆ ತರಲಾಗಿದೆ.
-ಟಿ.ಡಿ.ರಾಜೇಗೌಡ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.