ADVERTISEMENT

ಇಂಧನ ಇಲಾಖೆ ಜನಸ್ನೇಹಿಯಾಗಲು ಒತ್ತು: ಸುನಿಲ್‌

ಚಿಕ್ಕಮಗಳೂರಿನಲ್ಲಿ ಏರ್ಪಡಿಸಿದ್ದ ಮೆಸ್ಕಾಂ ಕಚೇರಿ ಸಂಕೀರ್ಣ ಉದ್ಘಾಟನೆ ಹಾಗೂ ಅದಾಲತ್‌

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 17:13 IST
Last Updated 4 ಅಕ್ಟೋಬರ್ 2021, 17:13 IST
ಚಿಕ್ಕಮಗಳೂರಿನಲ್ಲಿ ಏರ್ಪಡಿಸಿದ್ದ ಮೆಸ್ಕಾಂ ಕಚೇರಿಗಳ ಸಂಕೀರ್ಣ ಉದ್ಘಾಟನೆ ಹಾಗೂ ಅದಾಲತ್ ಕಾರ್ಯಕ್ರಮದಲ್ಲಿ ಸಚಿವ ವಿ.ಸುನಿಲ್‌ ಕುಮಾರ್ ಮಾತನಾಡಿದರು. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌ ಕುಮಾರ್‌ ಮಿಶ್ರಾ, ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಶಾಸಕ ಸಿ.ಟಿ.ರವಿ, ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಇದ್ದರು.
ಚಿಕ್ಕಮಗಳೂರಿನಲ್ಲಿ ಏರ್ಪಡಿಸಿದ್ದ ಮೆಸ್ಕಾಂ ಕಚೇರಿಗಳ ಸಂಕೀರ್ಣ ಉದ್ಘಾಟನೆ ಹಾಗೂ ಅದಾಲತ್ ಕಾರ್ಯಕ್ರಮದಲ್ಲಿ ಸಚಿವ ವಿ.ಸುನಿಲ್‌ ಕುಮಾರ್ ಮಾತನಾಡಿದರು. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌ ಕುಮಾರ್‌ ಮಿಶ್ರಾ, ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಶಾಸಕ ಸಿ.ಟಿ.ರವಿ, ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಇದ್ದರು.   

ಚಿಕ್ಕಮಗಳೂರು: ಇಂಧನ ಇಲಾಖೆ ಯನ್ನು ಭ್ರಷ್ಟಾಚಾರ ಮುಕ್ತವಾಗಿಸಿ, ಜನಸ್ನೇಹಿಯಾಗಿಸಲು ಒತ್ತು ನೀಡಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್ ಹೇಳಿದರು.

ನಗರದ ರತ್ನಗಿರಿ ರಸ್ತೆಯಲ್ಲಿ ನಿರ್ಮಿಸಿರುವ ಮೆಸ್ಕಾಂ ಕಚೇರಿಗಳ ಸಂಕೀರ್ಣ ಉದ್ಘಾಟನೆ ಹಾಗೂ ಅದಾಲತ್‌ನಲ್ಲಿ ಮಾತನಾಡಿದರು.

‘ಸಚಿವನಾಗಿ ಅಧಿಕಾರ ವಹಿಸಿ ಕೊಂಡು ನವೆಂಬರ್‌ಗೆ 100 ದಿನಗಳಾ ಗಲಿವೆ. ಅದರ ಅಂಗವಾಗಿ ಇಲಾಖೆಯಲ್ಲಿ ಮಹತ್ತರ ಕಾರ್ಯ ಯೋಜನೆಗಳನ್ನು ರೂಪಿಸಲಾಗಿದೆ. ಅರಣ್ಯ ಹೊರತುಪಡಿಸಿ, ಸರ್ಕಾರಿ ಜಾಗದಲ್ಲಿ ವಸತಿ ನಿರ್ಮಿಸಿಕೊಂಡಿರುವವರಿಗೆ ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ನೀಡಲಾಗುವುದು. ಅದಕ್ಕೆ ಗ್ರಾಮ ಪಂಚಾಯಿತಿ ನಿರಾಕ್ಷೇಪಣಾ ಪತ್ರದ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಅಂತಹ 3,500 ಅರ್ಜಿಗಳು ಸಲ್ಲಿಕೆಯಾಗಿದ್ದು, ಬೆಳಕು ಯೋಜನೆಯಡಿ ಅವರ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗುವುದು’ ಎಂದು ಹೇಳಿದರು.

ADVERTISEMENT

‘2021ರ ನವೆಂಬರ್‌ನಿಂದ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಪರಿವರ್ತಕಗಳು ಹಾಳಾದಲ್ಲಿ 24 ಗಂಟೆಯೊಳಗೆ ಅವುಗಳನ್ನು ಬದಲಿಸಬೇಕು. ಅಧಿಕಾರಿಗಳು ಇದನ್ನೆ ಆದೇಶವಾಗಿ ಪರಿಗಣಿಸಬೇಕು. ವಿದ್ಯುತ್ ಪರಿವರ್ತಕ ಬದಲಿಸಲು ಹಣಕ್ಕೆ ಬೇಡಿಕೆ ಇಟ್ಟರೆ, ಅಂಥ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ವಿದ್ಯುತ್ ಪರಿವರ್ತಕ ಗಳನ್ನು 24 ಗಂಟೆಯೊಳಗೆ ಬದಲಿಸಲು ಅನುಕೂಲವಾಗುವಂತೆ ಮೂರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಚಿಕ್ಕಮಗಳೂರು, ತರೀಕೆರೆ, ಕಡೂರಿನಲ್ಲಿ ವಿದ್ಯುತ್ ಪರಿವರ್ತಕಗಳ ದುರಸ್ತಿ ಕೇಂದ್ರಗಳಿವೆ. ಬೀರೂರು ಮತ್ತು ಕೊಪ್ಪದಲ್ಲಿ ಹೆಚ್ಚುವರಿಯಾಗಿ ದುರಸ್ತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಪರಿವರ್ತಕಗಳನ್ನು ಉಚಿತವಾಗಿ ಸಾಗಿಸಲು ವಾಹನಗಳ ಪೂರೈಕೆಗೆ ಶೀಘ್ರ ಟೆಂಡರ್ ಕರೆಯಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಗುಣಮಟ್ಟದ ವಿದ್ಯುತ್ ಒದಗಿಸಲು ಅನುಕೂಲವಾಗುವಂತೆ 23 ವಿದ್ಯುತ್ ಪ್ರಸರಣ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ. ಗಾಣಧಾಳು ಗ್ರಾಮದಲ್ಲಿ ವಿದ್ಯುತ್ ಪ್ರಸರಣ ಕೇಂದ್ರ ನಿರ್ಮಾಣಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ ಎಂದರು.

‘ಅದಾಲತ್‌ನಲ್ಲಿ ಸಲ್ಲಿಕೆಯಾದ ಅರ್ಜಿಗಳು, ಸಮಸ್ಯೆಗಳನ್ನು ತಿಂಗಳೊಳಗೆ ಪರಿಹರಿಸಬೇಕು. ಸಮಸ್ಯೆ ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಶಾಸಕ ಸಿ.ಟಿ.ರವಿ ಅವರಿಗೆ ಹಾಗೂ ನನಗೆ ಅನುಪಾಲನ ವರದಿ ನೀಡಬೇಕು’ ಎಂದು ಸೂಚಿಸಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ‘ಮಲ್ಲೇನಹಳ್ಳಿಯಲ್ಲಿ ₹ 9.50 ಕೋಟಿ ವೆಚ್ಚದಲ್ಲಿ ವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ. ಚಿಕ್ಕಮಗಳೂರಿನಲ್ಲಿ ₹ 8 ಕೋಟಿ ವೆಚ್ಚದಲ್ಲಿ ಮೆಸ್ಕಾಂ ಕಚೇರಿ ಸಂಕೀರ್ಣ ನಿರ್ಮಿಸಲಾಗಿದ್ದು, ಸಚಿವರು ಲೋಕಾರ್ಪಣೆ ಮಾಡಿದ್ದಾರೆ. 2016ರಲ್ಲಿ ಒಮ್ಮೆ ವಿದ್ಯುತ್ ಅದಾಲತ್ ನೆಡಸಲಾಗಿತ್ತು. ಅದಾಲತ್‌ನಲ್ಲಿ ಸಲ್ಲಿಕೆಯಾದ ಶೇ 60 ಸಮಸ್ಯೆಗಳು ಇತ್ಯರ್ಥವಾಗಿದ್ದವು. ಅದರ ಅನುಭವದ ಆಧಾರದಲ್ಲಿ ಮತ್ತೊಮ್ಮೆ ಅದಾಲತ್ ಹಮ್ಮಿಕೊಳ್ಳಲಾಗಿದೆ. ಅದಾಲತ್‌ನಲ್ಲಿ 62 ಮಂದಿ ಸಮಸ್ಯೆ ಹೇಳಿಕೊಂಡಿದ್ದಾರೆ’ ಎಂದರು.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಬೇಸಿಗೆಯಲ್ಲಿ ಲೋಡ್‌ ಶೆಡ್ಡಿಂಗ್, ಮಳೆಗಾಲದಲ್ಲಿ ವಿದ್ಯುತ್ ಕಂಬಗಳ ಹಾನಿಯಿಂದಾಗಿ ವಿದ್ಯುತ್‌ ಪೂರೈಕೆಯಲ್ಲಿ ಸಮಸ್ಯೆ ಉಂಟಾಗುತ್ತದೆ. ಮಲೆನಾಡಿನ ಜನರು ಶಾಪಗ್ರಸ್ತರಂತೆ ಬದುಕು ಸಾಗಿಸುವ ಪರಿಸ್ಥಿತಿ ಇದೆ. ಅವರು ನೆಮ್ಮದಿ ಬದುಕು ಕಟ್ಟಿಕೊಳ್ಳುವಂತಾಗಬೇಕು ಎಂದರು.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್, ಮೆಸ್ಕಾಂ ತಾಂತ್ರಿಕ ವಿಭಾಗದ ನಿರ್ದೇಶಕಿ ಡಿ.ಪದ್ಮಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.