ಕೊಪ್ಪ: ‘ಜನಸಂದಣಿ ಇರುವ ಕಡೆ ವಿದ್ಯುತ್ ಪರಿವರ್ತಕದ ಸುತ್ತ ಆದ್ಯತೆ ಮೇಲೆ ಬೇಲಿ ಹಾಕಿ, ಅನಾಹುತಗಳನ್ನು ತಡೆಗಟ್ಟಲು ಕ್ರಮ ವಹಿಸಬೇಕು’ ಎಂದು ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ಸಂದೇಶ್ ಒತ್ತಾಯಿಸಿದರು.
ಬಾಳಗಡಿಯಲ್ಲಿರುವ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಗುರುವಾರ ಚಿಕ್ಕಮಗಳೂರು ಅಧೀಕ್ಷಕ ಎಂಜಿನಿಯರ್ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಅವರು, ಜನರ ಅಹವಾಲುಗಳನ್ನು ಸಭೆಯಲ್ಲಿದ್ದ ಅಧಿಕಾರಿಗಳ ಗಮನಕ್ಕೆ ತಂದರು.
ಜೆಡಿಎಸ್ ಶೃಂಗೇರಿ ಕ್ಷೇತ್ರ ಘಟಕದ ಅಧ್ಯಕ್ಷ ದಿವಾಕರ ಭಟ್ ಬಂಡಿಗಡಿ ಮಾತನಾಡಿ, ‘ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ನಿವಾರಿಸಲು ಲೈನ್‌ಮ್ಯಾನ್‌ಗಳು ಸಾಕಷ್ಟು ಸ್ಪಂದಿಸುತ್ತಿದ್ದಾರೆ. ಮೆಗುಂದ ಹೋಬಳಿಯ ಯಡಗುಂದದಲ್ಲಿ 15 ದಿನದಿಂದ ವಿದ್ಯುತ್ ಇಲ್ಲ ಎಂದು ಜನರು ದೂರಿದ್ದಾರೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಿ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಯಪುರ ಶಾಖಾಧಿಕಾರಿ ಪ್ರಶಾಂತ್ ಕುಮಾರ್, ಕಳೆದ 2 ದಿನಗಳಿಂದ ಕರೆಂಟ್ ಇಲ್ಲ. ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಕೆಡಿಪಿ ಸದಸ್ಯ ಬಿ.ಪಿ.ಚಿಂತನ್, ಪ.ಪಂ. ಸದಸ್ಯ ಸಂದೇಶ್ ಮಾತನಾಡಿ, ‘ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ನಾಗಲಾಪುರ ಪಂಪ್‌ಹೌಸ್‌ಗೆ ಎಕ್ಸ್‌ಪ್ರೆಸ್ ಲೈನ್ ಅಳವಡಿಸಿದೆ. ಆದರೆ, ಕೆಲವೊಮ್ಮೆ ವಿದ್ಯುತ್ ಸಮಸ್ಯೆಯಾದಾಗ ಜನರು ನಮಗೆ ಪ್ರಶ್ನೆ ಮಾಡುತ್ತಾರೆ’ ಎಂದರು.
ಪ್ರಭಾರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುಧೀರ್ ಪಟೇಲ್ ಮಾತನಾಡಿ, ‘ಅದು ಎಕ್ಸ್‌ಪ್ರೆಸ್ ಲೈನ್ ಅಲ್ಲ. ಎಕ್ಸ್‌ಪ್ರೆಸ್ ಲೈನ್ ಎಂದರೆ ವಿದ್ಯುತ್ ಸ್ಟೇಷನ್‌ನಿಂದ ನೇರ ಸಂಪರ್ಕ ಹೊಂದಿರುತ್ತದೆ ಮತ್ತು ಬೇರೆ ಕಡೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡರೆ ಈ ಲೈನ್ ಸಂಪರ್ಕ ಕಡಿತಗೊಳ್ಳುವುದಿಲ್ಲ. ಆದರೆ ಇದೀಗ ಇರುವ ಲೈನ್ ಪಟ್ಟಣದಿಂದಲೇ ಕೊಟ್ಟಿರುವ ಸಂಪರ್ಕ’ ಎಂದರು.
ಚಾವಲ್ಮನೆ ಗ್ರಾ.ಪಂ. ಮಾಜಿ ಅಧ್ಯಕ್ಷ ಯು.ಎಸ್.ಶಿವಪ್ಪ ಮಾತನಾಡಿ, ಕಮ್ಮರಡಿ ಹಾಲ್ಮತ್ತೂರ್ ಭಾಗದಲ್ಲಿ ಕಾಡಿನೊಳಗೆ ವಿದ್ಯುತ್ ಲೈನ್ ಹಾದುಹೋಗಿದೆ. ಶೃಂಗೇರಿ ಬೇಗಾರ್ ಲಿಂಕ್ ಲೈನ್‌ನಿಂದ ಸಂಪರ್ಕ ಕಲ್ಪಿಸಿಕೊಡಬೇಕು. ಈ ಬಗ್ಗೆ ಎರಡು ವರ್ಷಗಳ ಹಿಂದೆ ಶಾಸಕರು ಕೂಡ ಪತ್ರ ಕೊಟ್ಟಿದ್ದರು. ಅದು ಏನಾಯ್ತು, ಯಾವ ಹಂತದಲ್ಲಿದೆ ಎಂದು ಗೊತ್ತಿಲ್ಲ ಎಂದರು.
ಮೆಸ್ಕಾಂ ಕೊಪ್ಪ ವಿಭಾಗ ಕಾರ್ಯನಿರ್ವಾಹಕ ಎಂಜಿನಿಯರ್ ಸಿದ್ದೇಶ್ ಪ್ರತಿಕ್ರಿಯಿಸಿ, ಸ್ಥಳ ಬದಲಾವಣೆಗೆ ಅವಕಾಶ ಇಲ್ಲ. ಯಾವ ಕಾರಣಕ್ಕೆ ಸಂಪರ್ಕ ಕಲ್ಪಿಸಿಲ್ಲ ಎಂಬುದರ ಬಗ್ಗೆ ಪತ್ರದ ಮೂಲಕ ಉತ್ತರ ಕೊಟ್ಟಿರುತ್ತಾರೆ ಎಂದರು. ಆಗ ಶಿವಪ್ಪ ಅವರು, ಆ ಉತ್ತರ ನಮಗೆ ಈವರೆಗೂ ಸಿಕ್ಕಿಲ್ಲ ಎಂದರು.
ಇದಕ್ಕೆ ಅಧೀಕ್ಷಕ ಎಂಜಿನಿಯರ್ ಮಂಜುನಾಥ್ ಪ್ರತಿಕ್ರಿಯಿಸಿ, ಕೆ.ಆರ್.ಸಿ ನಿಯಮಾವಳಿ ನಾವು ಪಾಲಿಸಲೇಬೇಕು. ಖಾಸಗಿಯಾಗಿ ಲೈನ್ ಬದಲಾವಣೆಗೆ ನಿಗದಿಪಡಿಸಿದ ಮೊತ್ತ ಕಟ್ಟಬೇಕಿದೆ ಎಂದರು.
ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ರಾಘವೇಂದ್ರ ಆರ್.ಜಿ. ಮಾತನಾಡಿ, ಕೊಪ್ಪದಿಂದ ಎನ್.ಆರ್.ಪುರದವರೆಗೆ ರಸ್ತೆ ದಾಟಿಸಿರುವ ಲೆವೆನ್ ಕೆ.ವಿ ವಿದ್ಯುತ್ ಲೈನ್‌ಗೆ ಗಾರ್ಡ್ ಅಳವಡಿಸಿಲ್ಲ. ಅನಾಹುತ ಸಂಭವಿಸಿದರೆ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದರು. ಇದನ್ನು ಪರಿಶೀಲಿಸುವುದಾಗಿ ಅಧಿಕಾರಿಗಳು ಉತ್ತರಿಸಿದರು.
ಬಗರ್ ಹುಕುಂ ಸಮಿತಿ ಸದಸ್ಯ ಶಂಕರಪ್ಪ ಕಾರ್ಬೈಲ್ ಮಾತನಾಡಿ, ಪಂಚಾಯಿತಿ ಮಂಜೂರು ಮಾಡಿದ ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡವರಿಗೆ ₹14 ಸಾವಿರ ಕಟ್ಟಿಸಿಕೊಂಡು ತಾತ್ಕಾಲಿಕ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟಿದ್ದರು. ಇದೀಗ ಪರ್ಮನೆಂಟ್ ಸಂಪರ್ಕ ಕಲ್ಪಿಸಿಕೊಡಬೇಕಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಎಇ ಸಿದ್ದೇಶ್, ಮನೆ ವಾಸಕ್ಕೆ ಯೋಗ್ಯವಾಗಿದೆ ಎಂದು ಸ್ಥಳೀಯ ಪಂಚಾಯಿತಿ ಅಥವಾ ಪಟ್ಟಣ ಪ್ರದೇಶವಾದರೆ ಮುಖ್ಯಾಧಿಕಾರಿ ಅವರಿಂದ ಒಪ್ಪಿಗೆ ಪತ್ರ ಕೊಡಬೇಕು ಎಂದರು.
ಈ ಕುರಿತು ಫಲಾನುಭವಿ ಮಹಿಳೆ ಮಾತನಾಡಿ, ತಾತ್ಕಾಲಿಕ ಸಂಪರ್ಕ ತೆಗೆಸಲು ಅರ್ಜಿ ಕೊಟ್ಟು ಮೂರು ತಿಂಗಳಾಯಿತು. ಹಳೆಯ ಅಷ್ಟೂ ಬಿಲ್ ಕಟ್ಟುವಂತೆ ಹೇಳಿದ್ದಾರೆ. ಈ ಹಿಂದೆ ಬಿಲ್ ಕಟ್ಟಿದ್ದೇವೆ, ಉಳಿಕೆ ಎಷ್ಟು ಕಟ್ಟಬೇಕು ಎಂದು ಕೇಳಿದರೆ ಹೇಳುತ್ತಿಲ್ಲ ಎಂದರು.
ಹರಿಹರಪುರ ಗ್ರಾ.ಪಂ. ಸದಸ್ಯ ಎ.ಒ.ವೆಂಕಟೇಶ್ ಮಾತನಾಡಿ, ಕೊಪ್ಪಕ್ಕೆ ಕುಡಿಯುವ ನೀರು ಪೂರೈಸುತ್ತಿರುವ ನಾಗಲಾಪುರ ಪಂಪ್‌ಹೌಸ್ ಸಂಪರ್ಕಕ್ಕೆ ಎಕ್ಸ್‌ಪ್ರೆಸ್ ವಿದ್ಯುತ್ ಲೈನ್ ಇದೆ. ಕೆಲವು ಕಂಬಗಳನ್ನು ಅಳವಡಿಸಿದರೆ ಹರಿಹರಪುರ ಪಂಚಾಯಿತಿ ವ್ಯಾಪ್ತಿಗೂ ಅನುಕೂಲವಾಗುತ್ತಿತ್ತು. ಹರಿಹರಪುರ ಸ್ವಾಮೀಜಿಯವರು, ಈ ಹಿಂದೆ ಮೆಸ್ಕಾಂ ನಿರ್ವಾಹಕ ನಿರ್ದೇಶಕರು ಹರಿಹರಪುರಕ್ಕೆ ಭೇಟಿ ಕೊಟ್ಟಿದ್ದಾಗ ಅವರ ಗಮನಕ್ಕೆ ತಂದಿದ್ದರು ಎಂದು ಪ್ರಸ್ತಾಪಿಸಿದರು.
ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಶಶಿಕುಮಾರ್, ಮೆಸ್ಕಾಂ ಎಒ ರವಿ, ಮೆಸ್ಕಾಂ ಕೊಪ್ಪ ಶಾಖಾಧಿಕಾರಿ ಶಶಿಕಾಂತ್ ರಾಥೋಡ್, ಹರಿಹರಪುರ ಶಾಖಾಧಿಕಾರಿ ಸೋಮಶೇಖರ್ ಇದ್ದರು.
‘ಲೈನ್ ಸ್ಥಳ ಬದಲಾವಣೆಗೆ ವಿಶೇಷ ಪ್ಯಾಕೇಜ್ ನೀಡಿ’
ಅರಣ್ಯ ಇಲಾಖೆಯ ಅಧಿಕಾರಿಗಳು ಇತರೆ ಎಲ್ಲಾ ಇಲಾಖೆಗಳ ಕೆಲಸದಲ್ಲಿಯೂ ಹಸ್ತಕ್ಷೇಪ ಮಾಡುತ್ತಿದ್ದಾರೆ ಅದನ್ನು ನಾವು ಖಂಡಿಸುತ್ತೇವೆ. ವಿದ್ಯುತ್ ಲೈನ್ ಬಳಿ ಇರುವ ಮರದ ಕೊಂಬೆ ತೆರವುಗೊಳಿಸಲು ಅಡ್ಡಿಪಡಿಸುತ್ತಾರೆ. ಮಲೆನಾಡಿನಲ್ಲಿ ಲೈನ್ ಸ್ಥಳ ಬದಲಾವಣೆಗೆ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕು. ಬಯಲು ಸೀಮೆಗೆ ಅನ್ವಯ ಆಗುವ ನಿಯಮ ಇಲ್ಲಿ ಅನ್ವಯಿಸಲು ಸಾಧ್ಯವಾಗುವುದಿಲ್ಲ. ರೈತರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ರೈತ ಮುಖಂಡ ನವೀನ್ ಕರುವಾನೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.