ADVERTISEMENT

ಮೆಸ್ಕಾಂ- ಸರ್ವರ್‌ ಸಮಸ್ಯೆ; ಗ್ರಾಹಕರಿಗೆ ಬವಣೆ

ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ

ಬಿ.ಜೆ.ಧನ್ಯಪ್ರಸಾದ್
Published 18 ಆಗಸ್ಟ್ 2022, 6:32 IST
Last Updated 18 ಆಗಸ್ಟ್ 2022, 6:32 IST
ಚಿಕ್ಕಮಗಳೂರಿನ ರತ್ನಗಿರಿ ರಸ್ತೆಯ ಮೆಸ್ಕಾಂ ಕಚೇರಿಯ ಕಂಪ್ಯೂಟರ್‌ನಲ್ಲಿ ‘ಪೋರ್ಟಲ್‌ ಎರರ್‌’ ತೋರಿಸುತ್ತಿರುವುದು.
ಚಿಕ್ಕಮಗಳೂರಿನ ರತ್ನಗಿರಿ ರಸ್ತೆಯ ಮೆಸ್ಕಾಂ ಕಚೇರಿಯ ಕಂಪ್ಯೂಟರ್‌ನಲ್ಲಿ ‘ಪೋರ್ಟಲ್‌ ಎರರ್‌’ ತೋರಿಸುತ್ತಿರುವುದು.   

ಚಿಕ್ಕಮಗಳೂರು: ಸರ್ವರ್‌ ಸಮಸ್ಯೆಯಿಂದಾಗಿ ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತದ (ಮೆಸ್ಕಾಂ) ಕಚೇರಿಗಳಲ್ಲಿ ಆನ್‌ಲೈನ್‌ ಪ್ರಕ್ರಿಯೆಗಳಿಗೆ ತೊಡಕಾಗಿದೆ. ಖಾತೆ ಬದಲಾವಣೆ, ಶುಲ್ಕ ಪಾವತಿ ಮೊದಲಾದವು ಆಮೆವೇಗದಲ್ಲಿ ಸಾಗಿವೆ.
ತಾಂತ್ರಿಕ ಮತ್ತು ಕಂದಾಯ ಎರಡೂ ವಿಭಾಗಗಳಲ್ಲೂ ಸಮಸ್ಯೆ ಇದೆ. ಗ್ರಾಹಕರಿಗೆ ಸಕಾಲದಲ್ಲಿ ಸೇವೆಗಳು ಲಭ್ಯವಾಗುತ್ತಿಲ್ಲ. ಖಾತೆಯ ಹೆಸರು ಬದಲಾವಣೆ; ಬಿಲ್‌ ಪಾವತಿ, ಆನ್‌ಲೈನ್‌ ಸ್ವೀಕೃತಿ ಇತ್ಯಾದಿ ನಿಟ್ಟಿನಲ್ಲಿ ಗ್ರಾಹಕರು ಕಚೇರಿಗೆ ಅಲೆಯುವಂತಾಗಿದೆ.
ಬಹಳಷ್ಟು ಸಲ ಸರ್ವರ್‌ ಗಂಟೆಗಟ್ಟಲೇ, ದಿನವಿಡೀ ಕೈಕೊಡುತ್ತದೆ. ‘ಎರರ್‌–500’, ‘ಎಚ್‌ಟಿಟಿಪಿ ಎರರ್‌’ ಎಂದು ತೋರಿಸುತ್ತದೆ.
ಸರ್ವರ್‌ ಸಮಸ್ಯೆಯಿಂದಾಗಿ ಸಿಬ್ಬಂದಿ ಕಡತಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಗ್ರಾಹಕರಿಗೆ ನಿತ್ಯ ಸಬೂಬು ಹೇಳಿ ಕಳಿಸುವಂತಾಗಿದೆ.
‘ಹೊಸ ಸಾಫ್ಟವೇರ್‌ ಅಳವಡಿಸಿ ಒಂದೂವರೆ ತಿಂಗಳಾಗಿದೆ. ಅಳವಡಿಸಿದಾಗಿನಿಂದಲೂ ಸರ್ವರ್‌ ಸಮಸ್ಯೆ ಮಾಮೂಲಿಯಾಗಿದೆ. ಈ ಮೊದಲು ದಿನಕ್ಕೆ 50 ಫೈಲು ವಿಲೇವಾರಿ ಮಾಡುತ್ತಿದ್ದೆವು. ಈಗ ಐದು ಫೈಲು ವಿಲೇವಾರಿ ಮಾಡುವುದೂ ಕಷ್ಟವಾಗಿದೆ. ಇದೊಂದೇ ಕಚೇರಿಯಲ್ಲ ರಾಜ್ಯದ ಎಸ್ಕಾಂಗಳ ಹಲವು ಕಚೇರಿಗಳಲ್ಲಿ ಸರ್ವರ್‌ ಸಮಸ್ಯೆ ಇದೆ’ ಎಂದು ನಗರದ ರತ್ನಗಿರಿ ರಸ್ತೆಯ ಮೆಸ್ಕಾಂ ಕಚೇರಿ ಸಿಬ್ಬಂದಿ ತಿಳಿಸಿದರು.
ನಗರದ ವಿವಿಧೆಡೆಗಳಿಂದ ಕಾರ್ಯ ನಿಮಿತ್ತ ಮೆಸ್ಕಾಂ ಕಚೇರಿಗೆ ಜನರು ಬರುತ್ತಾರೆ. ಸರ್ವರ್‌ ಸಮಸ್ಯೆಯಿಂದ ಕೆಲಸಗಳು ಆಗುತ್ತಿಲ್ಲ.
‘ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸಿ ಎಂಟು ದಿನಗಳಾಗಿವೆ. ಈವರೆಗೆ ಕಾರ್ಯ ಆಗಿಲ್ಲ. ₹ 118 ಶುಲ್ಕ ಪಾವತಿಸಬೇಕಿದೆ, ಈವರೆಗೆ ಇಂಟಿಮೇಷನ್‌ ಪ್ರತಿ ಕೊಟ್ಟಿಲ್ಲ. ಸಂಬಂಧಪಟ್ಟವರನ್ನು ಪ್ರಶ್ನಿಸಿದರೆ, ಸರ್ವರ್‌ ಸಮಸ್ಯೆ ಇದೆ, ನಾಳೆ ಬನ್ನಿ ಎಂದು ಹೇಳುತ್ತಾರೆ’ ಎಂದು ಗ್ರಾಹಕ ಎಸ್‌.ಮೋಹನಕುಮಾರ್‌ ದೂರಿದರು.

‘ಸಮಸ್ಯೆ ಶೀಘ್ರ ಪರಿಹಾರ’

‘ಕಡೂರು, ಚಿಕ್ಕಮಗಳೂರಿನಲ್ಲಿ ಸರ್ವರ್‌ ಸಮಸ್ಯೆಯಾಗಿದೆ ಎಂದು ದೂರು ಬಂದಿತ್ತು. ಈ ಬಗ್ಗೆ ಕ್ರಮ ವಹಿಸುವಂತೆ ಸೂಚನೆ ನೀಡಿದ್ದೇನೆ, ಶೀಘ್ರದಲ್ಲಿ ಸಮಸ್ಯೆ ಪರಿಹಾರವಾಗಲಿದೆ’ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌ ಮಿಶ್ರಾ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಈ ಹಿಂದೆ ನಗರಗಳಲ್ಲಿ ‘ಆರ್‌ಎಪಿಡಿಆರ್‌ಪಿ ಪೋರ್ಟಲ್‌’ ಅನ್ನು ಇನ್ಫೋಸಿಸ್‌ ಸಂಸ್ಥೆ ನಿರ್ವಹಿಸುತ್ತಿತ್ತು. ಆ ಸಂಸ್ಥೆಯ ಅವಧಿ ಮುಗಿದಿದ್ದು. ಈಗ ಬೇರೆ ಏಜೆನ್ಸಿಗೆ ನಿರ್ವಹಣೆ ವಹಿಸಲಾಗಿದೆ. ಕೆಲವೆಡೆ ಸರ್ವರ್‌ ಸಮಸ್ಯೆಯಾಗಿದೆ. ಪರಿಹಾರ ನಿಟ್ಟಿನಲ್ಲಿ ಕ್ರಮವಹಿಸಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.