
ಚಿಕ್ಕಮಗಳೂರು: ಕಾಲಕಾಲಕ್ಕೆ ರಾಜ್ಯ ಸರ್ಕಾರ ಬಿಸಿಯೂಟ ಅಡುಗೆ ಸಿಬ್ಬಂದಿಯ ಗೌರವಧನ ಹೆಚ್ಚಿಸುತ್ತಲೇ ಬಂದಿದೆ. ಆದರೆ, ಕೇಂದ್ರ ಸರ್ಕಾರ ತನ್ನ ಪಾಲನ್ನು ಆರಂಭದಿಂದಲೂ ಹೆಚ್ಚಿಸಿಲ್ಲ. ಸಂಘಟನಾತ್ಮಕ ಹೋರಾಟದಿಂದ ಸಮಪಾಲು ಪಡೆಯಲು ಸಾಧ್ಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆ ಅಡಿ ನಗರದ ಎಂಇಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಡುಗೆ ಸಿಬ್ಬಂದಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಅಕ್ಷರ ದಾಸೋಹ ಬಿಸಿಯೂಟ ಕಾರ್ಯಕ್ರಮ ಜಾರಿ ಮಾಡಲಾಗಿತ್ತು. ಆರಂಭದಲ್ಲಿ ಈಶಾನ್ಯ ಕರ್ನಾಟಕದಲ್ಲಿ ಜಾರಿಯಾಗಿ ನಂತರ ರಾಜ್ಯದಾದ್ಯಂತ ವಿಸ್ತರಣೆಯಾಗಿದೆ ಎಂದರು.
ಬಿಸಿಯೂಟ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರದಿಂದ ಶೇ 60ರಷ್ಟು ಹಣ, ರಾಜ್ಯದಿಂದ ಶೇ 40ರಷ್ಟು ಅನುದಾನದ ಒಪ್ಪಂದದಲ್ಲಿ ಈ ಯೋಜನೆ ಆರಂಭವಾಯಿತು. ಆರಂಭದಲ್ಲಿ ರಾಜ್ಯ ಸರ್ಕಾರ ₹400, ಕೇಂದ್ರ ಸರ್ಕಾರ ₹600 ಸೇರಿ ₹1 ಸಾವಿರ ನೀಡಲಾಗುತ್ತಿತ್ತು. ಯೋಜನೆ ಆಂಭವಾಗಿ 23 ವರ್ಷ ಕಳೆದಿದೆ. ಆದರೆ, ಇಂದಿಗೂ ಕೇಂದ್ರ ಸರ್ಕಾರ ತನ್ನ ಪಾಲಿನ ₹600 ಮಾತ್ರ ನೀಡುತ್ತಿದೆ. ಆದರೆ, ರಾಜ್ಯ ಸರ್ಕಾರ ₹400ರಿಂದ ₹4 ಸಾವಿರ ಗೌರವಧನ ಹೆಚ್ಚಿಸಿದೆ. ಕೇಂದ್ರ ಸರ್ಕಾರವೂ ₹6 ಸಾವಿರ ನೀಡಿದ್ದರೆ ₹10 ಸಾವಿರ ಗೌರವಧನ ಪಡೆಯಬಹುದಿತ್ತು ಎಂದು ಹೇಳಿದರು.
ಅಕ್ಷರ ದಾಸೋಹ ಫೆಡರೇಷನ್ ಕಾರ್ಯದರ್ಶಿ ವಿಜಯಕುಮಾರ್ ಮಾತನಾಡಿ, ‘23 ವರ್ಷಗಳ ಹೋರಾಟದ ಫಲದಿಂದ ಗೌರವಧನ ₹4700ಕ್ಕೆ ಏರಿಕೆಯಾಗಿದೆ’ ಎಂದರು.
ಪಿ.ಎಂ ಪೋಷಣ್ ಶಿಕ್ಷಣಾಧಿಕಾರಿ ಎಸ್.ಪಿ.ನಟರಾಜ್ ಮಾತನಾಡಿ, ‘ರಾಜ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಾಲಾ ಮಕ್ಕಳಿಗಾಗಿ ಅತ್ಯುತ್ತಮ ಯೋಜನೆ ಜಾರಿಗೆ ತರುತ್ತಿವೆ. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಕೊಡುವ ಮೂಲಕ ಶಿಕ್ಷಣಕ್ಕೆ ಪೂರಕವಾದ ವಾತಾವರಣ ಕಲ್ಪಿಸಲು ಮುಂದಾಗಿವೆ’ ಎಂದು ಹೇಳಿದರು.
ಶಿಕ್ಷಣ ಅಧಿಕಾರಿ ನೀಲಕಂಠ, ಅಕ್ಷರ ದಾಸೋಹ ಫೆಡರೇಶನ್ ಅಧ್ಯಕ್ಷ ಜಿ.ರಘು, ಬಿಇಒ ರುದ್ರಪ್ಪ, ನಟರಾಜ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್, ಇಂಧುಮತಿ, ಸಮೀಮಾ ಬಾನು, ಕಾಂತರಾಜು, ಅಂಜನಪ್ಪ, ಪೂರ್ಣೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.