ADVERTISEMENT

ವಲಸೆ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ದೂರ

ಕಾಫಿ ಕೊಯ್ಲಿನ ವೇಳೆ ತೋಟಕ್ಕೆ ಬಂದಿರುವ ಹೊರ ರಾಜ್ಯದ ಕಾರ್ಮಿಕರು

ವಿಜಯಕುಮಾರ್ ಎಸ್.ಕೆ.
Published 11 ಡಿಸೆಂಬರ್ 2025, 3:17 IST
Last Updated 11 ಡಿಸೆಂಬರ್ 2025, 3:17 IST
ಚಿಕ್ಕಮಗಳೂರು–ಮಲ್ಲಂದೂರು ರಸ್ತೆಯಲ್ಲಿರುವ ಜಕ್ಕನಹಳ್ಳಿ ಬಳಿಯ ಲೈನ್ ಮನೆಯಲ್ಲಿ ನೆಲೆಸಿರುವ ವಲಸೆ ಕಾರ್ಮಿಕರು ಮತ್ತು ಮಕ್ಕಳು
ಚಿಕ್ಕಮಗಳೂರು–ಮಲ್ಲಂದೂರು ರಸ್ತೆಯಲ್ಲಿರುವ ಜಕ್ಕನಹಳ್ಳಿ ಬಳಿಯ ಲೈನ್ ಮನೆಯಲ್ಲಿ ನೆಲೆಸಿರುವ ವಲಸೆ ಕಾರ್ಮಿಕರು ಮತ್ತು ಮಕ್ಕಳು   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಫಿ ಕೊಯ್ಲು ಮೊತ್ತೆ ಆರಂಭವಾಗಿದೆ. ವಲಸೆ ಬರುವ ಕಾರ್ಮಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದು, ಅವರ ಮಕ್ಕಳು ಶಿಕ್ಷಣದಿಂದ ಹೊರಗುಳಿಯುತ್ತಿದ್ದಾರೆ.

ಕಾಫಿ ಕೊಯ್ಲು ಸಂದರ್ಭದಲ್ಲಿ ವಲಸೆ ಕಾರ್ಮಿಕರು ಜಿಲ್ಲೆಗೆ ಬರುವುದು ಸಾಮಾನ್ಯ. ಮೊದಲಿಗೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಕಾರ್ಮಿಕರು ಬರುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ರಾಜ್ಯದ ಕಾರ್ಮಿಕರ ಸಂಖ್ಯೆ ಕಡಿಮೆಯಾಗುತ್ತಿದ್ದು, ಹೊರ ರಾಜ್ಯದ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ಅದರಲ್ಲೂ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತೋಟಗಳ ಲೈನ್ ಮನೆಗಳಲ್ಲಿ ಆಶ್ರಯ ಪಡೆದು ಕೂಲಿ ಕೆಲಸ ಮಾಡುತ್ತಿದ್ದಾರೆ. ಬಹುತೇಕರು ಮಕ್ಕಳೊಂದಿಗೆ ತೋಟಗಳಿಗೆ ಬಂದಿದ್ದು, ಆ ಮಕ್ಕಳು ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ.

ADVERTISEMENT

ಶಿಕ್ಷಣ ಇಲಾಖೆ ಕೆಲವೆಡೆ ವಿಶೇಷ ಆಂದೋಲನ ನಡೆಸಿ ಗೂಳೆ ಬಂದ ಮಕ್ಕಳನ್ನು ಶಾಲೆಗೆ ಕರೆ ತರುವ ಕೆಲಸಕ್ಕೆ ಮುಂದಾಗಿದೆ. ದೊಡ್ಡ ದೊಡ್ಡ ಕಾಫಿ ಎಸ್ಟೇಟ್‌ಗಳಲ್ಲಿ ಕಾರ್ಮಿಕರನ್ನು ಹುಡುಕುವುದೇ ಸವಾಲಾಗುತ್ತದೆ. ಮಕ್ಕಳನ್ನು ಹುಡುಕಿ ಅವರನ್ನು ಶಾಲೆಗೆ ಕಳುಹಿಸುವ ವೇಳೆಗಾಗಲೇ ಕಾಫಿ ಕೊಯ್ಲು ಮುಗಿಸಿ ಕಾರ್ಮಿಕರು ವಾಪಸ್ ಹೋಗುತ್ತಾರೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಕಾಫಿ ತೋಟಕ್ಕೆ ಬರುವ ಕಾರ್ಮಿಕರ ಮನೆಯಲ್ಲೇ ಮಕ್ಕಳನ್ನು ಬಿಟ್ಟು ಹೋಗುತ್ತಾರೆ. ಕಾರ್ಮಿಕರ ಗುಂಪಿನಲ್ಲೇ ಒಂದಿಬ್ಬರಿಗೆ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಲಾಗುತ್ತದೆ. ಅವರಿಗೆ ಎಲ್ಲರೂ ಸೇರಿ ಕೂಲಿ ನಿಗದಿ ಮಾಡುತ್ತಾರೆ. 

‘ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಉಳಿದವರು ಕಾಫಿ ಹಣ್ಣು ಕೊಯ್ಲಿನ ಕೆಲಸಕ್ಕೆ ತೆರಳಿದ್ದಾರೆ. ಅವರು ಗಳಿಸಿದ ಕೂಲಿಯಲ್ಲಿ ನಮಗೂ ದಿನದ ಸಂಬಳ ನೀಡುತ್ತಾರೆ’ ಎಂದು ಮಲ್ಲಂದೂರು ರಸ್ತೆಯ ಜಕ್ಕನಹಳ್ಳಿ ಬಳಿ ರಸ್ತೆ ಬದಿಯ ಲೈನ್ ಮನೆಯಲ್ಲಿ ವಾಸವಿದ್ದ ಕಾರ್ಮಿಕ ಮಹಿಳೆಯರು ಹೇಳಿದರು.

‘ಶಾಲೆಗೆ ಹೋಗುವ ಮಕ್ಕಳು ಇಲ್ಲಿದ್ದಾರೆ. ಸದ್ಯಕ್ಕೆ ಅವರೀಗ ಶಾಲೆಗೆ ಹೋಗುತ್ತಿಲ್ಲ. ವಾಪಸ್ ಊರಿಗೆ ಹೋದ ನಂತರ ಶಾಲೆಗೆ ಹೋಗುತ್ತಾರೆ’ ಎಂದು ಅವರು ‘‍ಪ್ರಜಾವಾಣಿ’ಗೆ ತಿಳಿಸಿದರು.

ಕಲಿಸಲು ಭಾಷೆಯೇ ಸಾವಾಲು

ಮಧ್ಯವರ್ತಿಗಳ ಸಹಾಯದಿಂದ ಅಸ್ಸಾಂ ಮತ್ತು ಪಶ್ಚಿಮ ಬಂಗಳಾದಿಂದ ಕಾರ್ಮಿಕರು ಬಂದಿದ್ದಾರೆ. ಮಕ್ಕಳಿಗೆ ಅಸ್ಸಾಮಿ ಮತ್ತು ಬಂಗಾಳಿ ಭಾಷೆ ಮಾತ್ರ ಗೊತ್ತಿದೆ. ಅದೇ ಭಾಷಯಲ್ಲಿ ಶಿಕ್ಷಣ ನೀಡುವುದು ಸ್ಥಳೀಯ ಶಿಕ್ಷಕರಿಗೆ ಸವಾಲಿನ ಕೆಲಸವಾಗಿದೆ. ವಲಸೆ ಕಾರ್ಮಿಕರ ಮಕ್ಕಳನ್ನು ಸುತ್ತಮುತ್ತಲ ಶಾಲೆಗಳಿಗೆ ಕಳುಹಿಸಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆ ಶಾಲೆಯಲ್ಲಿನ ಶಿಕ್ಷಕರಿಗೆ ಕನ್ನಡ ಹಿಂದಿ ಇಂಗ್ಲಿಷ್ ಭಾಷೆಯ ಅರಿವಿದೆ. ಈ ಮೂರು ಭಾಷೆ ಆ ಮಕ್ಕಳಿಗೆ ತಲುಪುವುದಿಲ್ಲ. ಇದು ಹೊರ ರಾಜ್ಯದ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಕೊಡಿಸಲು ಕಷ್ಟವಾಗಿದೆ ಎನ್ನುತ್ತಾರೆ ಅಧಿಕಾರಿಗಳು. ಕಾರ್ಮಿಕರಿಗೆ ಮಕ್ಕಳ ಶಿಕ್ಷಣದ ಬಗ್ಗೆ ಆಲೋಚನೆ ನಡೆಸಲು ಸಾಧ್ಯತೆಗಳಿಲ್ಲ. ತುತ್ತಿನ ಚೀಲ ತುಂಬಿದರೆ ಸಾಕು ಶಿಕ್ಷಣ ನಂತರ ಎನ್ನುವ ಸ್ಥಿತಿ ಇದೆ. ಇದು ಕೂಡ ಮಕ್ಕಳು ಶಿಕ್ಷಣದಿಂದ ದೂರ ಉಳಿಯುವಂತಾಗಿದೆ ಎನ್ನುತ್ತಾರೆ ಸ್ಥಳೀಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.