ADVERTISEMENT

ಚಿಕ್ಕಮಗಳೂರು: ಕರ್ತವ್ಯಲೋಪ, ಅಧಿಕಾರ ದುರುಪಯೋಗ:ಪಿಎಸ್‌ಐ ಸಹಿತ 11 ಪೊಲೀಸರ ಅಮಾನತು

ಮೇಲ್ನೋಟಕ್ಕೆ ಸಾಬೀತು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 2:25 IST
Last Updated 29 ನವೆಂಬರ್ 2020, 2:25 IST

ಚಿಕ್ಕಮಗಳೂರು: ಅಧಿಕಾರ ದುರುಪಯೋಗ, ಕರ್ತವ್ಯಲೋಪ ಪ್ರಕರಣದಲ್ಲಿ ಒಬ್ಬರು ಪಿಎಸ್‌ಐ ಸಹಿತ 11 ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ನಗರದ ಬಸನವಹಳ್ಳಿ ಠಾಣೆಯ ಪಿಎಸ್‌ಐ ಸುತೇಶ್‌, ಕಾನ್‌ಸ್ಟೆಬಲ್‌ ಯುವರಾಜ್‌, ಲಕ್ಷ್ಮಣ್‌, ಪ್ರದೀಪ್‌, ಸಂಚಾರ ಠಾಣೆಯ ಕಾನ್‌ಸ್ಟೆಬಲ್‌ ಮಂಗಲ್‌ ದಾಸ್‌, ಗ್ರಾಮಾಂತರ ಠಾಣೆಯ ರಾಜಾನಾಯಕ್‌, ತಾಲ್ಲೂಕಿನ ಆಲ್ದೂರು ಠಾಣೆಯ ಕಾನ್‌ಸ್ಟೆಬಲ್‌ಗಳಾದ ಶಶಿಕುಮಾರ್‌, ಸ್ವಾಮಿ, ಅರುಣ್‌ಕುಮಾರ್‌, ನವೀನ್‌, ಶೃಂಗೇರಿ ಠಾಣೆಯ ಕಾನ್‌ಸ್ಟೆಬಲ್‌ ನಾಗಪ್ಪ ತುಕ್ಕಣವರ್‌ ಅವರನ್ನು ಅಮಾನತು ಮಾಡಲಾಗಿದೆ.

‘ಕರ್ತವ್ಯಲೋಪ, ಅಧಿಕಾರ ದುರುಪಯೋಗ ಮೇಲ್ನೋಟಕ್ಕೆ ಕಂಡು ಬಂದಿದ್ದು ಅಮಾನತುಗೊಳಿಸಲಾಗಿದೆ. ವಿಚಾರಣೆ ನಡೆಯುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಗಾಂಜಾ ಪ್ರಕರಣದಲ್ಲಿ ಹೋಂ ಸ್ಟೇನಲ್ಲಿ ವಶಕ್ಕೆ ಪಡೆದಿದ್ದ ವ್ಯಕ್ತಿಯನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಹಣ ವಸೂಲಿ ಮಾಡಿದ್ದಾರೆ ಎಂದು ಆಲ್ದೂರು ಠಾಣೆಯ ನಾಲ್ವರನ್ನು, ವ್ಯಕ್ತಿಯೊಬ್ಬರನ್ನು ಠಾಣೆಗೆ ಕರೆದೊಯ್ದು ಸಂಜೆವರೆಗೆ ಕಾಯಿಸಿದ್ದಾರೆ ಮತ್ತು ಇಬ್ಬರನ್ನು ಹೋಂ ಸ್ಟೇಗೆ ಕರೆದೊಯ್ದು ಹಣ ವಸೂಲಿ ಮಾಡಿದ್ದಾರೆ ಎಂದು ಬಸವನಹಳ್ಳಿ ಠಾಣೆಯ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಅಲ್ಲದೇ, ಕರ್ತವ್ಯಕ್ಕೆ ನಿಯೋಜಿಸಿದ ಸ್ಥಳದಲ್ಲಿ ಇರಲಿಲ್ಲ ಎಂದು ಗ್ರಾಮಾಂತರ ಠಾಣೆ ಪೊಲೀಸ್‌ ಮತ್ತು ಸಂಚಾರ ಠಾಣೆ ಕಾನ್‌ಸ್ಟೆಬಲ್‌ ಮತ್ತು ಮತ್ತೊಬ್ಬರ ಸ್ಪರ್ಧಾ ಪರೀಕ್ಷೆ ಬರೆದ ಪ್ರಕರಣದಲ್ಲಿ ಶೃಂಗೇರಿಯ ಠಾಣೆಯ ಕಾನ್‌ಸ್ಟೆಬಲ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.