
ಮೂಡಿಗೆರೆ: ಪೊಲೀಸರ ವರ್ಗಾವಣೆಯಲ್ಲಿ ಹಸ್ತಕ್ಷೇಪ ನಡೆಸುತ್ತಿರುವ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರ ನಿಲುವನ್ನು ಕಾಂಗ್ರೆಸ್ ಬ್ಲಾಕ್ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಎಂ.ಎಸ್. ಅನಂತ್ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಮಲ್ಲಂದೂರು ಪಿಎಸ್‍ಐ ವರ್ಗಾವಣೆ ವಿಚಾರವಾಗಿ ಅಪಹಾಸ್ಯಕ್ಕೀಡಾಗಿದ್ದರು. ಈಗ ಮೂಡಿಗೆರೆ ಪಟ್ಟಣದ ಪಿಎಸ್‍ಐ ವರ್ಗಾವಣೆ ವಿಚಾರವಾಗಿ ಪುನಃ ಹಸ್ತಕ್ಷೇಪ ನಡೆಸಿದ್ದಾರೆ. ಶಾಸಕರು ಪಶ್ಚಿಮ ವಲಯದ ಐಜಿ ಅವರಿಗೆ ಜೂ. 6 ರಂದು ಪತ್ರ ಬರೆದು, ಮೂಡಿಗೆರೆ ಠಾಣೆಯ ಪಿಎಸ್‍ಐ ರವಿ ಅವರನ್ನು ಹಾಗೂ ಮಲ್ಲಂದೂರು ಠಾಣೆಯ ಪಿಎಸ್‍ಐ ಯನ್ನು ಬೇರೆಡೆಗೆ ಸ್ಥಳ ನಿಯುಕ್ತಿ ಮಾಡಿ ಆದೇಶ ಹೊರಡಿಸಿದ್ದೀರಿ. ಈ ಆದೇಶವನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ತಮ್ಮ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಐಜಿ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರ ಐಜಿಗೆ ಬೆದರಿಕೆ ಹಾಕುವಂತಿದೆ. ಇದು ಸರಿಯಲ್ಲ. ಶಾಸಕರು ತಮ್ಮ ತಪ್ಪನ್ನು ತಿದ್ದಿಕೊಳ್ಳದಿದ್ದರೆ ಶಾಸಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದರು
‘ಇಲಾಖೆ ಮಟ್ಟದಲ್ಲಿ ನಡೆಯುವ ವರ್ಗಾವಣೆ ಪ್ರಕ್ರಿಯೆಯಲ್ಲಿ ಜನಪ್ರತಿನಿಧಿಗಳು ಮೂಗು ತೂರಿಸಬಾರದು. ಶಾಸಕರ ಪತ್ರಕ್ಕೆ ತನ್ನದೇ ಆದ ಗೌರವ, ಬೆಲೆ ಇದೆ. ಅದಕ್ಕೆ ಧಕ್ಕೆಯಾಗದಂತೆ ಕಾಪಾಡಿಕೊಳ್ಳಬೇಕು. ಪೊಲೀಸರ ವಸತಿ ಗೃಹ ಸೇರಿದಂತೆ ತಾಲ್ಲೂಕಿನಲ್ಲಿ ಅನೇಕ ಜ್ವಲಂತ ಸಮಸ್ಯೆಗಳು ಇವೆ. ಅವುಗಳನ್ನು ಪರಿಹರಿಸುವುದನ್ನು ಬಿಟ್ಟು ಪೊಲೀಸರ ವರ್ಗಾವಣೆ ವಿಚಾರದಲ್ಲಿ ಹಸ್ತಕ್ಷೇಪ ನಡೆಸುವುದು ಶಾಸಕರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಆದ್ದರಿಂದ ಶಾಸಕರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪದಾಧಿಕಾರಿಗಳಾದ ಸಂಪತ್ ಬಿಳಗುಳ, ಪ್ರಸನ್ನಮರಗುಂದ, ಟಿ. ಕಮಲಾಕ್ಷಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.