ADVERTISEMENT

ಕೊಪ್ಪ | ದಾಖಲೆ ಸಮೇತ ಉತ್ತರಿಸುವುದು ಶಾಸಕರ ಕರ್ತವ್ಯ: ಎಸ್.ಎನ್.ರಾಮಸ್ವಾಮಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 7:03 IST
Last Updated 22 ನವೆಂಬರ್ 2022, 7:03 IST
ಎಸ್.ಎನ್.ರಾಮಸ್ವಾಮಿ
ಎಸ್.ಎನ್.ರಾಮಸ್ವಾಮಿ   

ಕೊಪ್ಪ: ‘ಲೋಕಾಯುಕ್ತ ಪ್ರಕರಣಕ್ಕೆ ಸಂಬಂಧಿಸಿದ ಆರೋಪಕ್ಕೆ ದಾಖಲೆ ಸಮೇತ ಉತ್ತರಿಸಬೇಕಾದದ್ದು ಶಾಸಕ ರಾಜೇಗೌಡ ಅವರ ಕರ್ತವ್ಯ’ ಎಂದು ಬಿಜೆಪಿ ಪಂಚಾಯತ್ ಪ್ರಕೋಷ್ಟದ ರಾಜ್ಯ ಸಹ ಸಂಚಾಲಕ ಎಸ್.ಎನ್.ರಾಮಸ್ವಾಮಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಜೀವರಾಜ್ ಅವರು, ರಾಜೇಗೌಡ ಅವರ ವಿರುದ್ಧ ಲೋಕಾಯುಕ್ತದಲ್ಲಿ ದಾಖಲಾದ ದೂರಿನ ಬಗ್ಗೆ ಮಾತನಾಡಿದ್ದಾರೆಯೇ ಹೊರತು ವೈಯಕ್ತಿಕವಾಗಿ ಮಾತನಾಡಿಲ್ಲ. 266 ಎಕರೆ ತೋಟದ ಖರೀದಿಗೆ ವರ್ಗಾವಣೆಯಾದ ₹ 123 ಕೋಟಿ ಬಗ್ಗೆ ಚುನಾವಣಾ ಆಯೋಗ, ಲೋಕಾಯುಕ್ತಕ್ಕೆ ಅಫಿಡವಿಟ್ ಸಲ್ಲಿಸುವಾಗ ಏಕೆ ತಿಳಿಸಿಲ್ಲ ಎಂದಷ್ಟೇ ಅವರು ಪ್ರಶ್ನಿಸಿದ್ದಾರೆ’ ಎಂದು ಪ್ರತ್ಯಾರೋಪ ಮಾಡಿದರು.

‘ಜೀವರಾಜ್ ಅವರು ದೂರಿನ ಬಗ್ಗೆ ಮಾತನಾಡಿರುವುದಕ್ಕೆ ಕಾಂಗ್ರೆಸಿಗರು ‘ಜೀವರಾಜ್ ಅವರಿಗೇ ಹೇಗೆ ಮೊದಲು ಗೊತ್ತಾಯಿತು, ಇದು ಪೂರ್ವ ನಿಯೋಜಿತವಾಗಿದೆ’ ಎಂದು ಆರೋಪಿಸಿದ್ದಾರೆ. ಆದರೆ, 2013ರಲ್ಲಿ ಜೀವರಾಜ್ ಅವರ ವಿರುದ್ಧ ಬೆಳಿಗ್ಗೆ 11 ಗಂಟೆಗೆ ಪ್ರಕರಣ ದಾಖಲಾಗಿದ್ದರೆ, ಬೆಂಗಳೂರಿನಲ್ಲಿ ಕಾಂಗ್ರೆಸ್ ನವರು 10.30ಕ್ಕೆ ಪ್ರತಿಭಟನೆ ನಡೆಸಿದ್ದರು’ ಎಂದು ಟೀಕಿಸಿದರು.

ADVERTISEMENT

ಅಕ್ರಮ ಸಕ್ರಮ ಸಮಿತಿ ಸದಸ್ಯ ಎಚ್.ಕೆ.ದಿನೇಶ್ ಹೊಸೂರು ಮಾತನಾಡಿ, ‘ಕ್ಷೇತ್ರದಲ್ಲಿ ಶಾಸಕರು ಅಭಿವೃದ್ಧಿ ಕೆಲಸ ಮಾಡಿಲ್ಲ. ಕಳಪೆ ಕಾಮಗಾರಿ ಮಾಡಿದ್ದಾರೆ. ₹ 123 ಕೋಟಿ ಹಣ ಎಲ್ಲಿಂದ ಬಂತು ಎಂದು ಜನರಿಗೆ ಉತ್ತರಿಸುವ ಬದಲು ಏಕೆ ಮೌನ ವಹಿಸಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ ಅವರು ಜೀವರಾಜ್ ಅವರ ವೈಯಕ್ತಿಕ ತೇಜೋವಧೆ ಮಾಡಿದ್ದಾರೆ’ ಎಂದು ಆರೋಪಿಸಿದರು.

ಹರಿಹರಪುರ ಹೋಬಳಿ ಬಿಜೆಪಿ ಘಟಕದ ಅಧ್ಯಕ್ಷ ಅಜಿತ್ ಬಿಕ್ಳಿ, ಕಸಬಾ ಹೋಬಳಿ ಘಟಕದ ಅಧ್ಯಕ್ಷ ರೇವಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.