ADVERTISEMENT

ಗೋಡೆಗಳಲ್ಲಿ ಕಾನೂನು ವಿವರ: ಮಲ್ಲಂದೂರಲ್ಲಿ ಮಾದರಿ ಠಾಣೆ

​ಪ್ರಜಾವಾಣಿ ವಾರ್ತೆ
ವಿಜಯಕುಮಾರ್ ಎಸ್.ಕೆ.
Published 14 ಜನವರಿ 2024, 7:37 IST
Last Updated 14 ಜನವರಿ 2024, 7:37 IST
ಮಲ್ಲಂದೂರು ಠಾಣೆಯ ಹೊರಾಂಗಣದ ಚಿತ್ರಣ
ಮಲ್ಲಂದೂರು ಠಾಣೆಯ ಹೊರಾಂಗಣದ ಚಿತ್ರಣ   

ಚಿಕ್ಕಮಗಳೂರು: ಪೊಲೀಸ್ ಠಾಣೆ ಎಂದರೆ ಜನ ಭಯಪಟ್ಟು ದೂರ ಇರುವವರೇ ಹೆಚ್ಚು. ಕಾಫಿನಾಡಿನ ಮಲ್ಲಂದೂರು ಪೊಲೀಸ್‌ ಠಾಣೆ ಇದಕ್ಕೆ ಹೊರತಾಗಿದೆ. ಜನಸ್ನೇಹಿ ಜತೆಗೆ ಯಾವ ಐ.ಟಿ ಕಂಪನಿಗಳಿಗೆ ಕಡಿಮೆ ಇಲ್ಲದಂತೆ ಹೈಟೆಕ್‌ ಆಗಿದೆ.

ಮಲ್ಲಂದೂರು ವೃತ್ತದಿಂದಲೇ ಬಿಳಿ ಬಣ್ಣದ ಕಟ್ಟಡ, ಅದಕ್ಕೆ ಅಳವಡಿಸಿರುವ ಕೆಂಪು ಬಣ್ಣದ ನಾಮಫಲಕಗಳು ಕಾಣಿಸುತ್ತವೆ.

ಕಾಂಪೌಂಡ್‌ ಮತ್ತು ಗೋಡೆಗಳು ಕಾನೂನು ಅರಿವು ಮೂಡಿಸುವ ಭಂಡಾರವಾಗಿ ಮಾರ್ಪಟ್ಟಿವೆ. ಇಲಾಖೆಯ ನಿಯಮಗಳು, ಪೋಕ್ಸೊ ಕಾಯ್ದೆ, ಸಂಚಾರ ನಿಯಮ, ಅಪ್ರಾಪ್ತರಿಗೆ ವಾಹನ ಚಾಲನೆಗೆ ಕೊಡಬೇಡಿ, ಮಕ್ಕಳನ್ನ ಕೆಲಸಕ್ಕೆ ಬಳಸಬಾರದು, ಬಾಲಾಪಾರಾಧ ಶಿಕ್ಷಾರ್ಹ ಅಪರಾಧ ಸೇರಿ ಹಲವು ಮಾಹಿತಿಯನ್ನು ಚಿತ್ರಗಳ ಮೂಲಕ ಬಿಂಬಿಸಲಾಗಿದೆ.

ADVERTISEMENT

ಕಾಡುಪ್ರಾಣಿಗಳ ಬೇಟೆ, ಮರ ಕಡಿಯುವುದು, ಕಾಡುಪ್ರಾಣಿಗಳ ರಕ್ಷಣೆ ಮಾಡಬೇಕು ಎಂಬ ಮಾಹಿತಿ ನೀಡುವ ಮೂಲಕ ಪರಿಸರ ರಕ್ಷಣೆಯ ಕಾಳಜಿಯನ್ನೂ ಮೆರೆಯಲಾಗಿದೆ.

ಕಾಂಪೌಂಡ್ ದಾಟಿ ಒಳ ಹೋದರೆ ಕಟ್ಟಡದ ಎರಡು ಬದಿಯಲ್ಲಿ ಹುಲ್ಲುಹಾಸಿನ ಉದ್ಯಾನ ಎದುರಾಗುತ್ತದೆ. ಅಲ್ಲಿ ತರಹೇವಾರಿ ಗಿಡಗಳನ್ನು ಬೆಳೆಸಲಾಗಿದ್ದು, ಸಿಬ್ಬಂದಿಯೇ ನಿರ್ವಹಣೆ ಮಾಡುತ್ತಿದ್ದಾರೆ. ಠಾಣೆಯ ಒಳ ಹೋಗುವ ಮುನ್ನವೇ ಮೇಜು ಅಳವಡಿಸಲಾಗಿದೆ. ದೂರು ನೀಡಲು ಬಂದವರು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಒಳ ಹೋದರೆ ಚಿಕ್ಕಮಗಳೂರು ಜಿಲ್ಲೆ ಮತ್ತು ರಾಜ್ಯದ ಹಲವು ಪ್ರಮುಖ ತಾಣಗಳ ಚಿತ್ರಗಳಿವೆ. ಇನ್ನೊಂದೆಡೆ ಠಾಣೆ ವ್ಯಾಪ್ತಿಯ ನಕ್ಷೆಗಳಿವೆ. 

ಠಾಣೆಯ ರೆಕಾರ್ಡ್‌ ರೂಂ, ಕಂಪ್ಯೂಟರ್ ಕೊಠಡಿ ಎಲ್ಲವೂ ಹೈಟೆಕ್‌ ಆಗಿವೆ. ಅದರಲ್ಲೂ ಸಬ್‌ಇನ್‌ಸ್ಪೆಕ್ಟರ್ ಕೊಠಡಿ ಯಾವ ಎಸ್ಪಿ ಕೊಠಡಿಗೂ ಕಡಿಮೆ ಇಲ್ಲ ಎಂಬಂತಿದೆ. ಮಲೆನಾಡಿನಲ್ಲಿ ತಣ್ಣನೆಯ ವಾತಾವರಣದಲ್ಲಿರುವ ಈ ಠಾಣೆಗೆ ಬರುವ ದೂರುಗಳ ಸಂಖ್ಯೆಯೂ ಕಡಿಮೆಯಿದ್ದು, ಠಾಣೆಯ ವಾತಾವರಣ ಕೂಡ ತಣ್ಣಗಿದೆ.

ಠಾಣೆಗೆ ಒಮ್ಮೆ ಬಂದವರು ನಿರ್ವಹಣೆ ಕಂಡು ಅಚ್ಚರಿ ಪಡೆದೆ ಹೋಗುವುದಿಲ್ಲ. ಜನಸ್ನೇಹಿಯಾಗಿಯೂ ಠಾಣೆಯನ್ನು ನಿರ್ವಹಿಸಲಾಗುತ್ತಿದೆ ಎಂದು ಸಿಬ್ಬಂದಿ ಹೇಳುತ್ತಾರೆ.

ಠಾಣೆಯ ಕಾಂಪೌಂಡ್ ಒಳಗೆ ನಿರ್ಮಾಣವಾಗಿರುವ ಹುಲ್ಲುಹಾಸಿನ ಉದ್ಯಾನ
ಜನಸ್ನೇಹಿಯೂ ಹೌದು
ಠಾಣೆಯು ಪರಿಸರ ಜನಸ್ನೇಹಿ ಆಗಿರುವ ಜತೆಗೆ ಸಿಬ್ಬಂದಿಯೂ ಜನಸ್ನೇಹಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ. ಠಾಣೆಗೆ ಬರುವ ಜನರನ್ನು ಕೂರಿಸಿ ಯೋಗಕ್ಷೇಮ ವಿಚಾರಿಸಿ ಸಮಸ್ಯೆ ಆಲಿಸುತ್ತಿದ್ದಾರೆ. ಸಬ್‌ಇನ್‌ಸ್ಪೆಕ್ಟರ್ ಸೇರಿ ಎಲ್ಲಾ ಸಿಬ್ಬಂದಿಯೂ ಇದೇ ರೀತಿ ನಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಠಾಣೆಗೆ ಹೋಗಲು ಜನ ಈಗ ಭಯಪಡುವುದಿಲ್ಲ ಎಂದು ಕಾಫಿ ಬೆಳೆಗಾರರ ಹಿತ ರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಹೊಲದಗದ್ದೆ ಗಿರೀಶ್ ಹೇಳುತ್ತಾರೆ. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಮತ್ತು ಸ್ಥಳೀಯರು ಸಹಕಾರ ನೀಡಿದ್ದಾರೆ. ಎಲ್ಲರ ಸಹಕಾರದಿಂದ ಠಾಣೆ ರಾಜ್ಯದಲ್ಲೇ ಮಾದರಿಯಾಗಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.