ಚಿಕ್ಕಮಗಳೂರು: ಮಳೆಯ ನಡುವೆ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳ ಸೌಂದರ್ಯ ಹೆಚ್ಚಾಗಿದ್ದು, ವಾರಾಂತ್ಯದಲ್ಲಿ ಪ್ರವಾಸಿಗರು ಜಿಲ್ಲೆಗೆ ಲಗ್ಗೆ ಇಟ್ಟಿದ್ದರು. ಎಲ್ಲೆಡೆ ಪ್ರವಾಸಿಗರು ತುಂಬಿ ತುಳುಕಿದರು.
ಚಂದ್ರದ್ರೋಣ ಪರ್ವತ, ಕುದುರೆಮುಖ, ಚಾರ್ಮಾಡಿ ಪರ್ವತ ಸಾಲುಗಳು ಹರಿಸು ಹೊದ್ದು ಕಂಗೊಳಿಸುತ್ತಿವೆ. ಝರಿ–ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿವೆ. ಇದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಬಾಬಾಬುಡನ್‌ಗಿರಿ, ಮಾಣಿಕ್ಯಧಾರ, ಕೆಮ್ಮಣ್ಣುಗುಂಡಿ, ಹಿರೆಕೊಳಲೆ ಕೆರೆ, ಎತ್ತಿನಭುಜ, ದೇವರಮನೆ, ರಾಣಿಝರಿ, ಬಲ್ಲಾಳರಾಯನ ದುರ್ಗ, ಬಂಡಾಜೆ ಜಲಪಾತ, ಕೂಡಿಗೆ ಜಲಪಾತ, ಕ್ಯಾತನಮಕ್ಕಿ, ಕೆಮ್ಮಣ್ಣುಗುಂಡಿ, ಕಲ್ಲತ್ತಗಿರಿ, ಹೆಬ್ಬೆ ಜಲಪಾತ ಸೇರಿ ಎಲ್ಲಾ ತಾಣಗಳು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು.
ಎಲ್ಲಾ ಹೋಂಸ್ಟೇಗಳು, ರೆಸಾರ್ಟ್‌ಗಳು ಮತ್ತು ಹೋಟೆಲ್‌ಗಳು ಭರ್ತಿಯಾಗಿದ್ದವು. ವಾಸ್ತವ್ಯಕ್ಕೆ ಬುಕ್ ಮಾಡಿಕೊಳ್ಳದೆ ಬಂದ ಪ್ರವಾಸಿಗರ ಪರದಾಡಿದರು. ಮುಳ್ಳಯ್ಯನಗಿರಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಪ್ರವಾಸಿಗರು ಪರದಾಡಿದರು. ಪೊಲೀಸರು ಮತ್ತು ಪ್ರವಾಸಿ ಮಿತ್ರರು ಸಂಚಾರ ದಟ್ಟಣೆ ನಿಭಾಯಿಸಲು ಹೆಣಗಾಡಿದರು. ಮೂಡಿಗೆರೆ, ಕಳಸ, ಶೃಂಗೇರಿ ಭಾಗದಲ್ಲೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು.
ಪ್ರವಾಸಿಗರ ಲಗ್ಗೆ: ಮೂಡಿಗೆರೆ ತಾಲ್ಲೂಕಿನಾದ್ಯಂತ ಮಳೆ ಕಡಿಮೆಯಾದ ಬೆನ್ನಲ್ಲೇ ಭಾನುವಾರ ವಾರಾಂತ್ಯವಾಗಿದ್ದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಲಗ್ಗೆಯಿಟ್ಟಿದ್ದಾರೆ.
ಶನಿವಾರ ಬೆಳಿಗ್ಗೆಯಿಂದಲೇ ಬಹುತೇಕ ಹೋಂಸ್ಟೇ, ರೆಸಾರ್ಟ್‌ಗಳು ಪ್ರವಾಸಿಗರಿಂದ ತುಂಬಿ ಹೋಗಿದ್ದು, ದೇವರಮನೆ ಸೇರಿದಂತೆ ಬಹುತೇಕ ಪ್ರವಾಸಿ ತಾಣಗಳು ಪ್ರವಾಸಿಗರಿಂದ ಕಿಕ್ಕಿರಿದಿದ್ದವು. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಮುಂತಾಗಿ ವಿವಿಧ ಭಾಗಗಳ ಪ್ರವಾಸಿಗರು ತಾಲ್ಲೂಕಿಗೆ ಭೇಟಿ ನೀಡಿದ್ದು, ಕೆಲವರು ಬೈಕ್‌ಗಳಲ್ಲಿ ಬಂದಿದ್ದಾರೆ.
ಪ್ರವಾಸಿಗರು ಹೆಚ್ಚಾಗಿರುವುದರಿಂದ ಅಂಗಡಿ, ಹೋಟೆಲ್‌ಗಳಲ್ಲಿ ವ್ಯಾಪಾರ ಜೋರಾಗಿದ್ದು, ಮಳೆಯಿಂದ ಆರ್ಥಿಕ ಸಂಕಷ್ಟ ಎದುರಿಸಿದ್ದ ವರ್ತಕರಿಗೆ ಪ್ರವಾಸಿಗರ ಆಗಮನವು ಚೇತರಿಸಿಕೊಳ್ಳುವಂತೆ ಮಾಡಿದೆ. ತಾಲ್ಲೂಕಿನಲ್ಲಿ ಇಡೀ ದಿನ ಮೋಡಕವಿದ ವಾತಾವರಣವಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.