ADVERTISEMENT

ಮೂಡಿಗೆರೆ | ‘ಸರ್ಕಾರಿ ಶಾಲೆಗಳ ಉಳಿವಿಗೆ ಸಂಘಸಂಸ್ಥೆಗಳು ನೆರವಾಗಬೇಕು’

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 14:03 IST
Last Updated 22 ಜೂನ್ 2025, 14:03 IST
ಮೂಡಿಗೆರೆ ಪಟ್ಟಣದ ತಾಲ್ಲೂಕು ಪಂಚಾಯಿತಿಯ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಭಾಂಗಣದಲ್ಲಿ ಶನಿವಾರ ಕಸಾಪ ತಾಲ್ಲೂಕು ಘಟಕದ ವತಿಯಿಂದ ನಡೆದ  ಪ್ರತಿಭಾ ಪುರಸ್ಕಾರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು
ಮೂಡಿಗೆರೆ ಪಟ್ಟಣದ ತಾಲ್ಲೂಕು ಪಂಚಾಯಿತಿಯ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಭಾಂಗಣದಲ್ಲಿ ಶನಿವಾರ ಕಸಾಪ ತಾಲ್ಲೂಕು ಘಟಕದ ವತಿಯಿಂದ ನಡೆದ  ಪ್ರತಿಭಾ ಪುರಸ್ಕಾರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು   

ಮೂಡಿಗೆರೆ: ಸರ್ಕಾರಿ ಶಾಲೆಗಳ ಉಳಿವಿಗೆ ಸಂಘ-ಸಂಸ್ಥೆಗಳ ನೆರವು ಅಗತ್ಯ ಎಂದು ಚಿಕ್ಕಮಗಳೂರಿನ ಯುರೇಕಾ ಅಕಾಡೆಮಿ ಮುಖ್ಯಸ್ಥ ದೀಪಕ್‌ ದೊಡ್ಡಯ್ಯ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿಯ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಭಾಂಗಣದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರದಲ್ಲಿ ಅವರು ಮಾತನಾಡಿದರು.

ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ವಿದ್ಯಾರ್ಥಿಗಳ ಕೊರತೆ ಮುಂದಿಟ್ಟುಕೊಂಡು ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಲು ಮುಂದಾಗುತ್ತಿರುವುದು ಕಳವಳಕಾರಿ ಸಂಗತಿ. ಸಂಘ-ಸಂಸ್ಥೆಗಳು ಸರ್ಕಾರಿ ಶಾಲೆಗಳ ಉಳಿವಿಗೆ ನೆರವು ನೀಡಿದರೆ ಉತ್ತಮ ಶಾಲೆಗಳನ್ನು ನಿರ್ಮಿಸಬಹುದು ಎಂಬುದಕ್ಕೆ ಮೂಡಿಗೆರೆ ಸೇರಿದಂತೆ ಜಿಲ್ಲೆಯಲ್ಲಿ ಹಲವು ಶಾಲೆಗಳು ಮಾದರಿಯಾಗಿವೆ. ಸಮಾಜದ ಮುಖ್ಯಸ್ಥರದಲ್ಲಿರುವ ಪ್ರತಿಯೊಬ್ಬರೂ ತಾವು ಓದಿದ ಸರ್ಕಾರಿ ಶಾಲೆಗಳಿಗೆ ಕೊಡುಗೆ ನೀಡಬೇಕು ಎಂದರು.

ADVERTISEMENT

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಕೆ. ಲಕ್ಷ್ಮಣಗೌಡ ಮಾತನಾಡಿ, ಪ್ರತಿಭಾ ಪುರಸ್ಕಾರವು ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸುವುದು ಒಂದೆಡೆಯಾದರೆ, ಸಾಧನೆಗೈದ ವಿದ್ಯಾರ್ಥಿಗಳನ್ನು ಕಂಡು ಉಳಿದ ವಿದ್ಯಾರ್ಥಿಗಳು ಸಾಧನೆ ಮಾಡುವ ಹಾದಿ ಸೃಷ್ಟಿಸುವುದಾಗಿದೆ ಎಂದರು.

ಸಾಹಿತಿ ತಿಪ್ಪೆರುದ್ರಪ್ಪ ಸ್ವಾಮಿ ಉಪನ್ಯಾಸ ನೀಡಿದರು. ಕಸಾಪ ತಾಲ್ಲೂಕು ಘಟಕದ ಮಹಿಳಾ ಅಧ್ಯಕ್ಷೆ ಅನಿತಾ ಜಗದೀಪ್‌, ಹೋಬಳಿ ಘಟಕದ ಅಧ್ಯಕ್ಷ ಲೋಕೇಶ್ ಬೆಟ್ಟಗೆರೆ, ಕಸಾಪ ಜಿಲ್ಲಾ ಘಟಕದ ಸಂಚಾಲಕ ಶಾಂತಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನವೀನ್ ಕುಮಾರ್, ಪ್ರಕಾಶ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.