
ಮೂಡಿಗೆರೆ: ಬಣಕಲ್ ಗ್ರಾಮದಲ್ಲಿರುವ ಶ್ರೀಕಲ್ಲಾನಾಥೇಶ್ವರ ಸ್ವಾಮಿಯ ವಾರ್ಷಿಕ ಜಾತ್ರೆಯು ಬುಧವಾರ ಸಂಪನ್ನಗೊಂಡಿತು.
ನಾಲ್ಕು ದಿನಗಳ ಕಾಲ ನಡೆದ ವಾರ್ಷಿಕ ಜಾತ್ರೆ ಪ್ರಯುಕ್ತ ದೇವಾಲಯದಲ್ಲಿ ಹೋಮ–ಹವನಗಳನ್ನು ನಡೆಸಲಾಯಿತು. ರುದ್ರಾಭಿಷೇಕ, ನಿತ್ಯ ಪೂಜೆ, ಪುಣ್ಯಾಹವಾಚನ, ಗಣಪತಿ ಪೂಜೆ, ಅಂಕುರ ಪೂಜೆ, ಧ್ವಜಾರೋಹಣ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಮಂಗಳವಾರ ಸಂಜೆ ವಾರ್ಷಿಕ ರಥೋತ್ಸವವು ವಿಜೃಂಭಣೆಯಿಂದ ನೆರವೇರಿತು. ಬಣಕಲ್, ಕೂಡಹಳ್ಳಿ, ಕೊಟ್ಟಿಗೆಹಾರ, ತರುವೆ, ದೇವನಗೂಲ್, ಬಾಳೂರು, ಫಲ್ಗುಣಿ, ಚೇಗು, ಕೋಗಿಲೆ ಮುಂತಾದ ಗ್ರಾಮಗಳ ಗ್ರಾಮಸ್ಥರು ಶ್ರೀಕಲ್ಲನಾಥೇಶ್ವರ ಸ್ವಾಮಿಗೆ ಹಣ್ಣುಕಾಯಿ, ಬೆಳೆದಾನ್ಯ ಅರ್ಪಿಸಿದರು.
ಬುಧವಾರದ ಬೆಳಿಗ್ಗೆ ಅವಭೃತ ಸ್ನಾನ ತೀರ್ಥ, ಪ್ರಸಾದ ವಿನಿಯೋಗ ನಡೆದು ನಾಲ್ಕು ದಿನಗಳ ಆಚರಣೆಗೆ ತೆರೆ ಎಳೆಯಲಾಯಿತು. ದೇವಾಲಯ ಸಮಿತಿಯ ಅಧ್ಯಕ್ಷ ಬಿ.ಎಸ್. ದಿವ್ಯಪ್ರಸಾದ್, ಕಾರ್ಯದರ್ಶಿ ಬಿ.ಆರ್. ಅಭಿಲಾಷ್, ಗೌರವ ಕಾರ್ಯದರ್ಶಿ ಬಿ.ಸಿ. ಪ್ರವೀಣ್ ಹಾಗೂ ಸಮಿತಿಯ ಸರ್ವ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.