ADVERTISEMENT

ಮೂಡಿಗೆರೆ| ಒಂದೇ ಸ್ಥಳ; ಜಾನುವಾರು ಸಾವು

ಗುಂಡು ತಗುಲಿದಂತೆ ಗೋಚರ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 6:39 IST
Last Updated 9 ಫೆಬ್ರುವರಿ 2023, 6:39 IST
ಮೂಡಿಗೆರೆ ತಾಲ್ಲೂಕಿನ ಉಗ್ಗೇಹಳ್ಳಿ ಸಮೀಪ ಅನುಮಾನಸ್ಪದವಾಗಿ ಜಾನುವಾರು ಬುಧವಾರ ಸಾವಿಗೀಡಾಗಿರುವುದು.
ಮೂಡಿಗೆರೆ ತಾಲ್ಲೂಕಿನ ಉಗ್ಗೇಹಳ್ಳಿ ಸಮೀಪ ಅನುಮಾನಸ್ಪದವಾಗಿ ಜಾನುವಾರು ಬುಧವಾರ ಸಾವಿಗೀಡಾಗಿರುವುದು.   

ಮೂಡಿಗೆರೆ: ತಾಲ್ಲೂಕಿನ ಉಗ್ಗೇಹಳ್ಳಿ ಗ್ರಾಮದಲ್ಲಿ ಅನುಮಾನಸ್ಪದವಾಗಿ ಜಾನುವಾರುಗಳು ಸಾವಿಗೀಡಾಗುತ್ತಿದ್ದು, ತಾಲ್ಲೂಕು ಆಡಳಿತ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

‘15 ದಿನಗಳಿಂದ ಉಗ್ಗೇಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ನಾಲ್ಕಕ್ಕೂ ಅಧಿಕ ಜಾನುವಾರುಗಳು ಒಂದೇ ಸ್ಥಳದಲ್ಲಿ ಸಾವಿಗೀಡಾಗಿವೆ. ಮಂಗಳವಾರ ಜಾನುವಾರು ಸಾವಿಗೀಡಾದ ಸ್ಥಳದಲ್ಲಿ ಬುಧವಾರ ಮತ್ತೊಂದು ಜಾನುವಾರು ಮೃತಪಟ್ಟಿದೆ. ಸಾವಿಗೀಡಾದ ಜಾನುವಾರುಗಳ ಕೊರಳಿನ ಬಳಿ ಗಾಯದ ಗುರುತು ಪತ್ತೆಯಾಗಿದೆ. ಹಸುಗಳ ಸಾವಿಗೆ ಚಿರತೆ ಅಥವಾ ಹುಲಿ ದಾಳಿ ಕಾರಣವಲ್ಲ, ಈ ಭಾಗದಲ್ಲಿ ಹುಲಿ ಚಿರತೆಗಳು ಕಂಡುಬಂದಿಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿರುವ ಸಂಶಯ ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಪಶು ಇಲಾಖೆ ಅಧಿಕಾರಿಗಳು ಶವ ಪರೀಕ್ಷೆ ನಡೆಸಿ, ಕಾರಣ ಪತ್ತೆ ಮಾಡಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಘಟನೆ ಕುರಿತು ಗೊಣೀಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮಂಗಳವಾರ ಮೃತಪಟ್ಟಿರುವ ಜಾನುವಾರಿನ ಶವ ಪರೀಕ್ಷೆ ಮಾಡಿದಾಗ ನಾಡ ಕೋವಿಯ ಗುಂಡು ತಗುಲಿ ಬಲಿಯಾದಂತೆ ಗೋಚರವಾಗುತ್ತಿದೆ. ಹೆಚ್ಚಿನ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಫಲಿತಾಂಶ ಬಂದ ಮೇಲೆ ಸ್ಪಷ್ಟ ಮಾಹಿತಿ ಸಿಗಲಿದೆ’ ಎಂದು ಪಶು ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕ ಡಾ. ಮನು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.