ADVERTISEMENT

ಮೂಡಿಗೆರೆ | ‘ಸಾಹಿತ್ಯ ಕೃಷಿಗೆ ಅಧ್ಯಯನ, ಓದು ಅಗತ್ಯ’

ಮೂಡಿಗೆರೆ: ನವರಾತ್ರಿ ಪ್ರಯುಕ್ತ ಮಹಿಳಾ ಕವಿಗೋಷ್ಠಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 5:23 IST
Last Updated 24 ಸೆಪ್ಟೆಂಬರ್ 2025, 5:23 IST
ಮೂಡಿಗೆರೆ ನವರಾತ್ರಿ ಉತ್ಸವದಲ್ಲಿ ಏರ್ಪಡಿಸಿದ್ದ ಮಹಿಳಾ ಗೋಷ್ಠಿಯನ್ನು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್ ಉದ್ಘಾಟಿಸಿದರು
ಮೂಡಿಗೆರೆ ನವರಾತ್ರಿ ಉತ್ಸವದಲ್ಲಿ ಏರ್ಪಡಿಸಿದ್ದ ಮಹಿಳಾ ಗೋಷ್ಠಿಯನ್ನು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್ ಉದ್ಘಾಟಿಸಿದರು   

ಮೂಡಿಗೆರೆ: ಅಧ್ಯಯನಶೀಲರಾದಾಗ ಮಾತ್ರ ಕಥೆ, ಕವನ ಬರೆಯಲು ಸಾಧ್ಯವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಕಸಾಪ ಮಹಿಳಾ ಘಟಕದ ವತಿಯಿಂದ ಮಂಗಳವಾರ ನಡೆದ ನವರಾತ್ರಿ ಮಹಿಳಾ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮಲ್ಲಿ ಬರಹಗಾರರ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಜ್ಞಾನ ಸಂಪಾದನೆಗೆ ಕಾವ್ಯ ಕಮ್ಮಟ, ಕಥಾ ಕಮ್ಮಟ ಹಾಗೂ ವಿಚಾರ ಸಂಕೀರ್ಣ ಆಯೋಜಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕವನಗಳನ್ನು ಕ್ರೋಡೀಕರಿಸಿಕೊಂಡು ಸಹಕಾರ ತತ್ವದಡಿ ಜಿಲ್ಲೆಯ ಎಲ್ಲಾ ಲೇಖಕರ ಕೈಪಿಡಿ ತರಲು ಚಿಂತನೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಮಹಿಳಾ ಘಟಕ ಸ್ಥಾಪಿಸಿದ್ದರಿಂದ ಹತ್ತು ಹೆಜ್ಜೆ ಮುಂದೆ ಹೋಗಿದ್ದೇವೆ. ಇದಕ್ಕೆ ಭುನೇಶ್ವರಿ ಪುತ್ತಳಿ ನಿರ್ಮಾಣ, ಮಹಿಳಾ ಜಾನಪದ ಸಮ್ಮೇಳನ ನಡೆದಿರುವುದು ಸಾಕ್ಷಿಯಾಗಿದೆ. ಅಲ್ಲದೇ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಯುವ ಘಟಕ ಪ್ರಾರಂಭಿಸಿದ್ದರಿಂದ ಕ್ರಿಯಾಶೀಲತೆಯಿಂದ ಕನ್ನಡ ಕಟ್ಟುವ ಕೆಲಸವಾಗುತ್ತಿದ್ದು, ಜನವರಿಯಲ್ಲಿ ದೂರದರ್ಶನದ ಕವಿಗೋಷ್ಠಿ ನಡೆಸಲು ಚಿಂತಿಸಲಾಗಿದೆ ಎಂದು ಹೇಳಿದರು.

ADVERTISEMENT

ಸಾಂಸ್ಕೃತಿಕ ಚಿಂತಕ ಎಚ್.ಎಸ್. ಸತ್ಯನಾರಾಯಣ ಮಾತನಾಡಿ, ‘ಹಿಂದೆ ಈ ನಾಡಿನಲ್ಲಿ ದಲಿತ ಬಂಡಾಯ ಸಾಹಿತ್ಯ ನೆಲೆಯೂರಿತ್ತು. ಮಹಿಳೆಯರು ಕಲೆ ಪ್ರಕಾರಗಳ ಬಗ್ಗೆ ಅರಿತುಕೊಳ್ಳುವುದನ್ನು ಹಿಂದಿನಿಂದಲೂ ಸಮಾಜವು ವಿರೋಧಿಸುತ್ತಾ ಬಂದಿತ್ತು. ಇಂತಹ ಸ್ಥಿತಿಯಲ್ಲಿ 70ರ ದಶಕದಲ್ಲಿ ಪ್ರೊ. ಸಾ.ಸರ್ವಮಂಗಳ, ವೈದೇಹಿ, ಪ್ರತಿಭಾ ನಂದಕುಮಾರ್ ಸೇರಿದಂತೆ ಅನೇಕ ಮಹಿಳಾ ಕವಯತ್ರಿಗಳು ಕಥೆ, ಕವನ ಬರೆಯಲು ಪ್ರಾರಂಭಿಸಿದರು. ಕವಿತೆ ಬರೆಯಲು ದೊಡ್ಡ ರೂಪಕ ಬೇಕಾಗಿಲ್ಲ. ತನ್ನ ಧ್ವನಿಯನ್ನು ಸರಳವಾಗಿ ಬರೆಯಬಹುದೆಂದು ತೋರಿಸಿಕೊಟ್ಟರು. ಈ ಮೂಲಕ ಮಹಿಳಾ ಕವಿಗಳ ಸಂಖ್ಯೆ ಅಧಿಕಗೊಳ್ಳತೊಡಗಿತು. ಕವಿತೆ ಎಂಬುದು ಆತ್ಮದ ಸಂಗಾತಿ. ಅದು ಲೋಕಕ್ಕೆ ಸಾರಬೇಕೆಂದರೆ ಕವಿಗೋಷ್ಠಿಯಂತಹ ಕಾರ್ಯಕ್ರಮ ಹೆಚ್ಚಾಗಿ ನಡೆಯಬೇಕಿದೆ’ ಎಂದು ಹೇಳಿದರು.

ಬಳಿಕ ಮಹಿಳಾ ಕವಯತ್ರಿಯರು ಕವನ ವಾಚಿಸಿದರು. ಸಾಹಿತಿ ಎಸ್.ಎನ್. ಚಂದ್ರಕಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ ಮಂಚೇಗೌಡ ಮಾತನಾಡಿದರು.

ಕಸಾಪ ತಾಲ್ಲೂಕು ಘಠಜದ ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ, ಮಹಿಳಾ ಘಟಕದ ಅಧ್ಯಕ್ಷೆ ರೇಖಾ ರವಿರಾಜ್, ಅಶ್ವಿನಿ ಸಂತೋಷ್, ಕಲಾರಾಜಣ್ಣ, ಸುಚಿತ್ರ ಪ್ರಸನ್ನ, ಕಮಲಾಕ್ಷಿ, ಭಾರತಿ ರವೀಂದ್ರ, ವಿಶಾಲ ನಾಗರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.