ADVERTISEMENT

ಚಿಕ್ಕಮಗಳೂರು | ಜಾನಪದ ಸಮ್ಮೇಳನ: ಮೋಟಮ್ಮ ಸರ್ವಾಧ್ಯಕ್ಷರಾಗಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 5:49 IST
Last Updated 5 ಫೆಬ್ರುವರಿ 2026, 5:49 IST
ಮೂಡಿಗೆರೆಯ ಮೋಟಮ್ಮ ಅವರ ನಿವಾಸದಲ್ಲಿ ಬುಧವಾರ ಕಜಾಪ ಪದಾಧಿಕಾರಿಗಳು ಮೋಟಮ್ಮ ಅವರನ್ನು ಅಭಿನಂದಿಸಿದರು
ಮೂಡಿಗೆರೆಯ ಮೋಟಮ್ಮ ಅವರ ನಿವಾಸದಲ್ಲಿ ಬುಧವಾರ ಕಜಾಪ ಪದಾಧಿಕಾರಿಗಳು ಮೋಟಮ್ಮ ಅವರನ್ನು ಅಭಿನಂದಿಸಿದರು   

ಮೂಡಿಗೆರೆ: ಕರ್ನಾಟಕ ಜಾನಪದ ಪರಿಷತ್‌ನಿಂದ ಚಿಕ್ಕಮಗಳೂರಿನಲ್ಲಿ ಏಪ್ರಿಲ್‌ನಲ್ಲಿ ನಡೆಯಲಿರುವ ‘6ನೇ ಜಿಲ್ಲಾ ಜಾನಪದ ಸಮ್ಮೇಳನ’ದ ಸರ್ವಾಧ್ಯಕ್ಷರಾಗಿ ಕಾಂಗ್ರೆಸ್ ನಾಯಕಿ ಮೋಟಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮೂಡಿಗೆರೆಯಲ್ಲಿ ಬುಧವಾರ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಜೆ.ಪಿ. ಕೃಷ್ಣೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಷತ್ತಿನ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.

ಬಳಿಕ ಮಾತನಾಡಿದ ಕಜಾಪ ಜಿಲ್ಲಾ ಘಟಕದ ಅಧ್ಯಕ್ಷ‌ ಜಿ.ಬಿ. ಸುರೇಶ್, ‘3 ಬಾರಿ ಮೂಡಿಗೆರೆಯ ಶಾಸಕರಾಗಿ, ವಿಧಾನಪರಿಷತ್ ಸದಸ್ಯರಾಗಿ, ವಿರೋಧ ಪಕ್ಷದ ನಾಯಕಿಯಾಗಿ, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವುದರ ಜೊತೆಗೆ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿರುವ ಮೋಟಮ್ಮ ಅವರು ಸ್ವತಃ ಜಾನಪದ ಕಲಾವಿದೆ, ಗಾಯಕಿಯಾಗಿದ್ದಾರೆ. ಮೂಡಿಗೆರೆಯಲ್ಲಿ ಹಲವು ವರ್ಷಗಳಿಂದ ಸರಳ ಸಾಮೂಹಿಕ ವಿವಾಹ, ಜಾನಪದ ಜಾತ್ರೆಗಳನ್ನು ಪ್ರತಿವರ್ಷ ನಡೆಸುತ್ತಿದ್ದಾರೆ. ಅವರನ್ನು ಕಜಾಪವು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ’ ಎಂದರು.

ADVERTISEMENT

ಬಳಿಕ, ಮೋಟಮ್ಮ ಅವರ ನಿವಾಸಕ್ಕೆ ತೆರಳಿ ಅಭಿನಂದಿಸಲಾಯಿತು. ಅಭಿನಂದನೆ‌ ಸ್ವೀಕರಿಸಿ ಮಾತನಾಡಿದ ಮೋಟಮ್ಮ, ‘ನಮ್ಮದು ಶ್ರೀಮಂತ ಜಾನಪದದ ತವರೂರಾಗಿದೆ. ಜಾನಪದವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ತಂತ್ರಜ್ಞಾನವನ್ನು ಜಾನಪದದ ಉಳಿವಿಗೆ ಬಳಸಿಕೊಳ್ಳಬೇಕಿದೆ’ ಎಂದರು.

ಕರ್ನಾಟಕ ಜಾನಪದ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ. ಸುರೇಶ್, ಮೂಡಿಗೆರೆ ತಾಲ್ಲೂಕು ಘಟಕದ ಅಧ್ಯಕ್ಷ ಕುನ್ನಳ್ಳಿ ರವಿ, ಸಂಚಾಲಕ ರವಿ, ಗೌರವಾಧ್ಯಕ್ಷ ಸುಬ್ರಹ್ಮಣ್ಯ, ಕಸಾಪ  ಚಿಕ್ಕಮಗಳೂರು ತಾಲ್ಲೂಕು ಘಟಕದ ಅಧ್ಯಕ್ಷ ಮಾವಿನಕೆರೆ ದಯಾನಂದ್, ಪರಿಷತ್ತಿನ ಚಿಕ್ಕಮಗಳೂರು ತಾಲ್ಲೂಕು ಘಟಕದ ಅಧ್ಯಕ್ಷ ಸಚಿನ್ ಸಿಂಗ್, ಉಪಾಧ್ಯಕ್ಷ ಸಂದೀಪ್, ದೀಪಿಕ, ಚಂದ್ರೇಗೌಡ ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.