ADVERTISEMENT

ಅರಣ್ಯ ಕಾಯ್ದೆ ರದ್ದುಪಡಿಸದಿದ್ದರೆ ಹೋರಾಟ: ಎಂ.ಪಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 20 ಮೇ 2025, 13:46 IST
Last Updated 20 ಮೇ 2025, 13:46 IST
ಎಂ.ಪಿ.ಕುಮಾರಸ್ವಾಮಿ
ಎಂ.ಪಿ.ಕುಮಾರಸ್ವಾಮಿ   

ಚಿಕ್ಕಮಗಳೂರು: ಅರಣ್ಯ ಕಾಯ್ದೆಯ ಸೆಕ್ಷನ್ 4 ಮತ್ತು ಸೆಕ್ಷನ್ 17 ಮಲೆನಾಡು ಜನರ ನಿದ್ರೆಗೆಡಿಸಿವೆ. ರಾಜ್ಯ ಸರ್ಕಾರ ಈ ಸೆಕ್ಷನ್‌ಗಳನ್ನು ರದ್ದುಗೊಳಿಸಬೇಕು ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಆಗ್ರಹಿಸಿದರು.

‘ಅರಣ್ಯ ಕಾಯ್ದೆಗಳಿಂದ ಸಾಕಷ್ಟು ಕಂದಾಯ ಭೂಮಿ ಕಡಿಮೆಯಾಗುತ್ತಿದೆ. ಬಡವರಿಗೆ ನಿವೇಶನ ನೀಡಲು ಸಾಧ್ಯವಾಗುತ್ತಿಲ್ಲ. ಸೆಕ್ಷನ್ 4 ಅಡಿಯಲ್ಲಿ ಅರಣ್ಯ ವ್ಯವಸ್ಥಾಪನ ಅಧಿಕಾರಿ(ಎಫ್‌ಎಸ್‌ಒ) ರೈತರಿಗೆ ನೋಟಿಸ್ ಜಾರಿ ಮಾಡುತ್ತಿದ್ದಾರೆ. ಮನೆಗಳಿಗೆ ಆಧಾರ ಕೇಳುತ್ತಿದ್ದಾರೆ. ಮಲೆನಾಡಿನಲ್ಲಿ ಬಹುತೇಕ ಮನೆಗಳಿಗೆ ಆಧಾರವೇ ಇಲ್ಲವಾಗಿದ್ದು, ಎಲ್ಲಿಂದ ಒದಗಿಸುವುದು’ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಪ್ರಶ್ನಿಸಿದರು.

ಪರಿಭಾವಿತ ಅರಣ್ಯವನ್ನು ಮೀಸಲು ಅರಣ್ಯವಾಗಿ ಘೋಷಿಸದಂತೆ ಒತ್ತಡ ಹಾಕಲಾಗುತ್ತಿದೆ. ನಮೂನೆ 53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿದವರು ಅರಣ್ಯ ಕಾಯ್ದೆಯ ಕಾರಣಕ್ಕೆ ಹಕ್ಕುಪತ್ರ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು.

ADVERTISEMENT

ಸೆಕ್ಷನ್ 17 ಮತ್ತು ಸೆಕ್ಷನ್ 4 ರದ್ದುಪಡಿಸದಿದ್ದರೆ ಸರ್ಕಾರವೇ ಜನರನ್ನು ಬೀದಿಗೆ ತಳ್ಳಿದಂತೆ ಆಗಲಿದೆ. ಎರಡು ಕಾಯ್ದೆಗಳಿಂದ ಮಲೆನಾಡಿನ ಜನರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಸರ್ಕಾರ ಮಾಡಬೇಕು. ಈ ಎರಡು ಸೆಕ್ಷನ್ ರದ್ದುಪಡಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹುಣಸೆಮಕ್ಕಿ ಲಕ್ಷ್ಮಣ್, ಛಲವಾದಿ ರಘು, ರೈತ ಗಣೇಶ್‌ಮೂರ್ತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.