ADVERTISEMENT

ದಾವಣಗೆರೆ ತೆರಳುತ್ತಿದ್ದ ಕಾರ್ಮಿಕರಿಗೆ ಶಾಸಕ ಕುಮಾರಸ್ವಾಮಿ ಊಟೋಪಚಾರ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 11:13 IST
Last Updated 2 ಏಪ್ರಿಲ್ 2020, 11:13 IST
ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ವಾಸ್ತವ್ಯ ಹೂಡಿದ್ದ ದಾವಣಗೆರೆಯ ಕಾರ್ಮಿಕರೊಂದಿಗೆ ತಹಶೀಲ್ದಾರ್ ರಮೇಶ್ ಮಾತನಾಡಿದರು.
ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ವಾಸ್ತವ್ಯ ಹೂಡಿದ್ದ ದಾವಣಗೆರೆಯ ಕಾರ್ಮಿಕರೊಂದಿಗೆ ತಹಶೀಲ್ದಾರ್ ರಮೇಶ್ ಮಾತನಾಡಿದರು.   

ಮೂಡಿಗೆರೆ: ಅರೇಹಳ್ಳಿಯಿಂದ ದಾವಣಗೆರೆಗೆ ತೆರಳುತ್ತಿದ್ದ ಕೂಲಿಕಾರ್ಮಿಕರಿಗೆ ಪಟ್ಟಣದ ಬಾಲಕರ ಸರ್ಕಾರಿ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಒದಗಿಸಲಾಗಿದೆ.

ಬೇಲೂರು ತಾಲ್ಲೂಕಿನ ಅರೇಹಳ್ಳಿ ಸಮೀಪದ ಖಾಸಗಿ ಕಾಫಿ ಎಸ್ಟೇಟಿನಲ್ಲಿದ್ದ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲ್ಲೂಕಿನ ಎಚ್.ಎನ್. ತಾಂಡ್ಯದ 30ಕ್ಕೂ ಅಧಿಕ ಮಂದಿ ಕಾರ್ಮಿಕರು ಖಾಸಗಿ ವಾಹನದಲ್ಲಿ ಬುಧವಾರ ತಡರಾತ್ರಿ ತಮ್ಮೂರಿನತ್ತ ತೆರಳುತ್ತಿದ್ದರು. ಪಟ್ಟಣದ ಬಾಲಕರ ಸರ್ಕಾರಿ ಪರವಿಪೂರ್ವ ಕಾಲೇಜು ಬಳಿ ತೆರೆದಿರುವ ಚೆಕ್ ಪೋಸ್ಟಿನಲ್ಲಿ ಕಾರ್ಮಿಕರಿದ್ದ ವಾಹನವನ್ನು ಪೊಲೀಸರು ತಡೆದಿದ್ದಾರೆ. ಇದರಿಂದ ವಾಹನದಲ್ಲಿದ್ದವರನ್ನೆಲ್ಲಾ ಅಡ್ಯಂತಾಯ ರಂಗಮಂದಿರದ ಬಳಿ ಇಳಿಸಿ, ಬಾಡಿಗೆ ವಾಹನ ಚಾಲಕನು ಪರಾರಿಯಾಗಿದ್ದಾನೆ.

ಗುರುವಾರ ಮುಂಜಾನೆ ರಂಗಮಂದಿರದಲ್ಲಿ ಜನರು ಗುಂಪಾಗಿರುವುದನ್ನು ತಿಳಿದ ಸ್ಥಳೀಯ ಯುವಕರು ತಹಶೀಲ್ದಾರ್‌ಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ತಹಶೀಲ್ದಾರ್ ರಮೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್, ಎಲ್ಲಾ ಕಾರ್ಮಿಕರನ್ನು ವಿದ್ಯಾರ್ಥಿನಿಲಯಕ್ಕೆ ಕರೆದೊಯ್ದು ಆಶ್ರಯ ಒದಗಿಸಿದ್ದರು. ಕಾರ್ಮಿಕರೊಂದಿಗೆ ಸುಮಾರು ಎಂಟಕ್ಕೂ ಅಧಿಕ ಮಕ್ಕಳಿದ್ದು, ಉಪಾಹಾರಕ್ಕಾಗಿ ಪರದಾಡುತ್ತಿದ್ದರು.

ADVERTISEMENT

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಶಾಸಕ ಎಂ.ಪಿ. ಕುಮಾರಸ್ವಾಮಿ ತಮ್ಮ ಸ್ವಂತ ಖರ್ಚಿನಲ್ಲಿ ಎಲ್ಲಾ ಕಾರ್ಮಿಕರಿಗೂ ಊಟೋಪಚಾರದ ವ್ಯವಸ್ಥೆ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದರು.

‘ಕಾಳು ಮೆಣಸು ಕೊಯ್ಯಲು ಇದೆ ಎಂದು ಮೇಸ್ತ್ರಿ ಕರೆದುಕೊಂಡು ಬಂದಿದ್ದರು. ಆದರೆ, ಒಂದು ವಾರದಿಂದ ಕೆಲಸ ಇಲ್ಲ. ಊರಿಂದ ತಂದಿದ್ದ ರೇಷನ್ ಎಲ್ಲಾ ಮುಗಿದಿದ್ದು, ಮೇಸ್ತ್ರಿ ದುಡ್ಡು ಕೊಡದೇ ಊಟಕ್ಕೂ ದುಡ್ಡಿಲ್ಲದಂತಾಗಿತ್ತು. ಅದರಿಂದ ಊರಿಗೆ ವಾಪಸ್‌ ಹೊರಟಿದ್ವಿ. ಗೋಣಿಬೀಡು ಬಳಿ ಪೊಲೀಸರು ವಿಚಾರಿಸಿ ಕಳಿಸಿದರು. ಆದರೆ, ಇಲ್ಲಿ ಮಾತ್ರ ಮುಂದಕ್ಕೆ ಬಿಡಲೇ ಇಲ್ಲ. ಬಾಡಿಗೆ ವಾಹನಕ್ಕೆ ಹಣಕೊಟ್ಟಿದ್ವಿ ಅವರು ಹೇಳ್ದೆ, ಕೇಳ್ದೆ ನಮ್ಮುನ್ನ ಇಳಿಸಿ ಹೋದರು’ ಎಂದು ಗುಂಪಿನಲ್ಲಿದ ಮಂಜ ನಾಯ್ಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.