
ಎಂ.ಎಸ್. ನಿರಂಜನ್
ಚಿಕ್ಕಮಗಳೂರು: ‘ಪಕ್ಷದಿಂದ ನನ್ನನ್ನು ಉಚ್ಚಾಟನೆ ಮಾಡಿರುವುದು ಅವೈಜ್ಞಾನಿಕ. ಸಿ.ಟಿ. ರವಿ ಅವರು ನನಗೆ ಅನ್ಯಾಯ ಮಾಡಿದ್ದಾರೆ’ ಎಂದು ಕೇಂದ್ರ ಸಹಕಾರ ಬ್ಯಾಂಕ್‌ನ ಮಾಜಿ ನಿರ್ದೇಶಕ ಎಂ.ಎಸ್. ನಿರಂಜನ್ ಆರೋಪಿಸಿದರು.
‘1989ರಲ್ಲಿ ಬಿಜೆಪಿ ಪಕ್ಷದ ಮೂಲಕ ರಾಜಕೀಯ ಪ್ರವೇಶ ಮಾಡಿದ್ದೇನೆ. 3 ವರ್ಷ ಯುವ ಮೋರ್ಚಾ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. 2003–05ರ ಅವಧಿಯಲ್ಲಿ ಜಿಲ್ಲಾ ಸಮಿತಿ ಅಧ್ಯಕ್ಷನಾಗಿ, 2005ರಿಂದ 18ರವರೆಗೆ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷನಾಗಿ, 2018–26ರವರೆಗೆ ಜಿಲ್ಲಾ ಉಪಾಧ್ಯಕ್ಷನಾಗಿ ಪಕ್ಷ ಸಂಘಟಿಸಲು ತೊಡಗಿಸಿಕೊಂಡಿದ್ದೇನೆ. 2012ರಿಂದ ಮುಗುಳವಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷನಾಗಿದ್ದೇನೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘2025ರಲ್ಲಿ ನಾನು ಕೇಂದ್ರ ಸಹಕಾರ ಬ್ಯಾಂಕಿಗೆ ಸ್ಪರ್ಧಿಸುವ ಮುನ್ನ ಪಕ್ಷ ಹಾಗೂ ಸಿ.ಟಿ. ರವಿ ಅವರ ಒಪ್ಪಿಗೆ ಪಡೆದಿದ್ದೆ. ಕೃಷಿ ಪತ್ತಿನ ಸಹಕಾರ ಸಂಘಗಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳೇ ಹೆಚ್ಚು ಆಯ್ಕೆಯಾಗುವಂತೆ ನೋಡಿಕೊಂಡಿದ್ದೆ’ ಎಂದರು.
‘ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆಗೆ ಪಕ್ಷದ ಪ್ರಮುಖರ ಸಮಿತಿ ತೀರ್ಮಾನದ ನೆಪ ಹೇಳಿ ನನಗೆ ವಂಚಿಸಲಾಯಿತು. ಅದು ಕೂಡ ಜಾತಿ ಕಾರಣಕ್ಕೆ ತಿರಸ್ಕರಿಸಲಾಯಿತು’ ಎಂದು ಹೇಳಿದರು.
‘2021-22ರ ವಿಧಾನ ಪರಿಷತ್ ಚುನಾವಣೆಯಲ್ಲೂ ಇದೇ ರೀತಿ ಮಾಡಲಾಗಿತ್ತು. 1998ರಿಂದ ಈವರೆಗೆ ಸಿ.ಟಿ. ರವಿಯ ಬೆಂಬಲಕ್ಕೆ ನಿಂತು ಎಲ್ಲಾ ಚುನಾವಣೆಗಳಲ್ಲೂ ಗೆಲುವಿಗೆ ಸಹಕಾರ ನೀಡಿದ್ದೇನೆ. 4 ಬಾರಿ ಶಾಸಕ, 1 ಬಾರಿ ವಿಧಾನ ಪರಿಷತ್ ಸದಸ್ಯರಾದರೂ ಅಧಿಕಾರದ ಸ್ವಾರ್ಥ ಸಾಧನೆಗಾಗಿ ನನ್ನನ್ನು ಕಡೆಗಣಿಸಲಾಗಿದೆ. ನನ್ನ ಬೆನ್ನಿಗೆ ಚೂರಿ ಹಾಕುವ ಕೆಲಸ ನಡೆಯಿತು’ ಎಂದರು.
‘ಪಕ್ಷದಿಂದ ಉಚ್ಚಾಟನೆ ಮಾಡುವುದು ಹೊಸದಲ್ಲ. ಸಿ.ಟಿ. ರವಿ ಎದುರಿಗೆ ನಿಂತು ಪ್ರಶ್ನಿಸುವ ಯಾರನ್ನು ಅವರು ಸಹಿಸುವುದಿಲ್ಲ. ಮುಂದೆ ನನಗೆ ತೊಡಕಾಗಬಹುದು ಎಂಬ ದುರುದ್ದೇಶದಿಂದ ಅನೇಕರನ್ನು ತುಳಿದಿದ್ದಾರೆ. ಎಂ.ಪಿ. ಕುಮಾರಸ್ವಾಮಿ, ರೇಖಾ ಹುಲಿಯಪ್ಪಗೌಡ ಸೇರಿ ಅನೇಕರನ್ನು ಪಕ್ಷದಿಂದ ಹೊರ ಹಾಕಲಾಯಿತು’ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶೇಖರ್, ರಾಜಣ್ಣ, ದರ್ಶನ್, ಸುಬ್ಬಣ್ಣ, ತಮ್ಮೇಗೌಡ, ಶಿವನಂದ್, ರಾಕೇಶ್, ರಘುನಂದನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.