ADVERTISEMENT

‘ಸಂಚಾರ ನಿಯಮ ಕಡ್ಡಾಯವಾಗಿ ಪಾಲಿಸಿ’

ಮೂಡಿಗೆರೆ: ವಿವಿಧ ಇಲಾಖೆಗಳಿಂದ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 6:21 IST
Last Updated 2 ಅಕ್ಟೋಬರ್ 2022, 6:21 IST
ಮೂಡಿಗೆರೆ ಪೊಲೀಸ್ ಠಾಣೆ ಆವರಣದಲ್ಲಿ ಶನಿವಾರ ನಡೆದ ವಾಹನ ಚಾಲನೆಯ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಾಗರಾಜ್ ಮಾತನಾಡಿದರು. ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಎಂ.ಎಸ್ ಆದರ್ಶ, ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್‌ರಾಜ್ ಹಾಗೂ ಪೊಲೀಸ್ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
ಮೂಡಿಗೆರೆ ಪೊಲೀಸ್ ಠಾಣೆ ಆವರಣದಲ್ಲಿ ಶನಿವಾರ ನಡೆದ ವಾಹನ ಚಾಲನೆಯ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಾಗರಾಜ್ ಮಾತನಾಡಿದರು. ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಎಂ.ಎಸ್ ಆದರ್ಶ, ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್‌ರಾಜ್ ಹಾಗೂ ಪೊಲೀಸ್ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.   

ಮೂಡಿಗೆರೆ: ವಾಹನ ಸವಾರರು ತಪ್ಪದೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಹಶೀಲ್ದಾರ್ ನಾಗರಾಜ್ ತಿಳಿಸಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಪೊಲೀಸ್ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆದ ವಾಹನ ಚಾಲನೆಯ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಒಂದು ಕ್ಷಣದ ಅಪಘಾತವು ಇಡೀ ಕುಟುಂಬವು ಜೀವನ ಪೂರ್ತಿ ಸಂಕಷ್ಟ ಅನುಭವಿಸುವಂತೆ ಮಾಡುತ್ತದೆ. ಸಂಚಾರ ನಿಯಮಗಳನ್ನು ಪಾಲಿಸುವುದರಿಂದ ಅಪಘಾತಗಳನ್ನು ತಪ್ಪಿಸಬಹುದಾಗಿದ್ದು, ಜೀವರಕ್ಷಣೆ ಸಾಧ್ಯವಾಗುತ್ತದೆ. ವಾಹನ ಚಾಲನೆ ಮಾಡುವಾಗ ತನಗಾಗಿ ತನ್ನ ಕುಟುಂಬದವರು ಕಾಯುತ್ತಿರುತ್ತಾರೆ ಎಂಬುದನ್ನು ನೆನಪಿನಲ್ಲಿಡಬೇಕು. ಅವಸರದ ಚಾಲನೆಯು ಅಪಘಾತಕ್ಕೆ ಕಾರಣವಾಗುವುದರಿಂದ, ನಿಗದಿತ ಸಮಯಕ್ಕಿಂತ ಮೊದಲೇ ಹೊರಟು ಅಗತ್ಯ ಸಮಯಕ್ಕೆ ತಲುಪಬೇಕು’ ಎಂದರು.

ADVERTISEMENT

ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಎಂ.ಎಸ್ ಆದರ್ಶ ಮಾತನಾಡಿ, ‘ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಿದ್ದು, ಐಎಸ್ಐ ಗುರುತಿನ ಗುಣಮಟ್ಟದ ಹೆಲ್ಮೆಟ್‌ಗಳನ್ನು ಧರಿಸಬೇಕು. ವಾಹನ ಸವಾರರು ಕಡ್ಡಾಯವಾಗಿ ಸೀಟ್‌ಬೆಲ್ಟ್ ಧರಿಸಬೇಕು. ಸುಗಮ ಸಂಚಾರಕ್ಕಾಗಿ ರೂಪಿಸಿರುವ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಚಾಲನಾ ಪರವಾನಗಿ ಇಲ್ಲದೇ ವಾಹನ ಚಾಲನೆ ಮಾಡುವುದು, ಅಪ್ರಾಪ್ತರಿಗೆ ವಾಹನಗಳ ಚಾಲನೆಗೆ ಅವಕಾಶ ಕಲ್ಪಿಸುವುದು, ಅತೀ ವೇಗದ ಚಾಲನೆ ಮಾಡುವುದು ಅಪರಾಧ’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ರಾಜ್, ಪೊಲೀಸ್ ಸಿಬ್ಬಂದಿ, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.