ADVERTISEMENT

ಕಣ್ಮರೆಯಾಗಿದ್ದ 9 ವರ್ಷದ ಬಾಲಕಿ: 22 ವರ್ಷಗಳ ನಂತರ ತಾಯಿ ಮಡಿಲು ಸೇರಿದ ಪುತ್ರಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 2:57 IST
Last Updated 5 ಜನವರಿ 2022, 2:57 IST
ಮೂಡಿಗೆರೆಯ ಮುದ್ರೆಮನೆಯಿಂದ 22 ವರ್ಷಗಳ ಹಿಂದೆ ಕಣ್ಮರೆಯಾಗಿದ್ದ ಅಂಜಲಿ ಮಂಗಳವಾರ ತಮ್ಮ ತಾಯಿ ಚೈತ್ರಾ ಅವರ ಮಡಿಲು ಸೇರಿದರು. ಅಂಜಲಿ ಅವರ ಪತಿ ನೆಲ್ಲಮಣಿಸಾಜಿ, ಸಮಾಜ ಸೇವಕರಾದ ಫಿಶ್ ಮೋಣು, ಲೋಕವಳ್ಳಿ ರಮೇಶ್, ದಾವುದ್ ಇದ್ದಾರೆ.
ಮೂಡಿಗೆರೆಯ ಮುದ್ರೆಮನೆಯಿಂದ 22 ವರ್ಷಗಳ ಹಿಂದೆ ಕಣ್ಮರೆಯಾಗಿದ್ದ ಅಂಜಲಿ ಮಂಗಳವಾರ ತಮ್ಮ ತಾಯಿ ಚೈತ್ರಾ ಅವರ ಮಡಿಲು ಸೇರಿದರು. ಅಂಜಲಿ ಅವರ ಪತಿ ನೆಲ್ಲಮಣಿಸಾಜಿ, ಸಮಾಜ ಸೇವಕರಾದ ಫಿಶ್ ಮೋಣು, ಲೋಕವಳ್ಳಿ ರಮೇಶ್, ದಾವುದ್ ಇದ್ದಾರೆ.   

ಮೂಡಿಗೆರೆ: ತಾಲ್ಲೂಕಿನ ಮುದ್ರೆಮನೆ ಗ್ರಾಮದಿಂದ ಕಣ್ಮರೆಯಾಗಿದ್ದ ಬಾಲಕಿ ಯೊಬ್ಬಳು ಮಂಗಳವಾರ ದಿಢೀರ್‌ ತಾಯಿ ಎದುರು ಪ್ರತ್ಯಕ್ಷವಾಗುತ್ತಿದ್ದಂತೆ ನೆರೆದವರ ಕಣ್ಣುಗಳಲ್ಲಿ ಆನಂದ ಬಾಷ್ಪ ಹರಿಯಿತು.

ಇಪ್ಪತ್ತೆರೆಡು ವರ್ಷಗಳ ಹಿಂದೆ ಮುದ್ರೆಮನೆ ಗ್ರಾಮದ ಕಾಫಿ ತೋಟಕ್ಕೆ ಕೂಲಿ ಕೆಲಸಕ್ಕಾಗಿ ಬಂದಿದ್ದ ತಮಿಳುನಾಡಿನ ಕಾಳಿಮುತ್ತು ಹಾಗೂ ಚೈತ್ರಾ ದಂಪತಿಯ ಒಂಬತ್ತು ವರ್ಷದ ಪುತ್ರಿ ಅಂಜಲಿ ಎಂಬುವರು ಕಣ್ಮರೆಯಾಗಿದ್ದರು. ಬಳಿಕ ಕೇರಳದಲ್ಲಿ ಮನೆಕೆಲಸಕ್ಕೆ ಸೇರಿದ್ದ ಅಂಜಲಿ, ಹಲವಾರು ವರ್ಷ ಅಲ್ಲಿಯೇ ಕೆಲಸದಲ್ಲಿ ತೊಡಗಿದ್ದರು. ಮನೆಯ ಮಾಲೀಕರ ನೆರವಿನಲ್ಲಿ ಕೇರಳದ ನೆಲ್ಲಮಣಿಸಾಜಿ ಎಂಬುವವರೊಂದಿಗೆ ವಿವಾಹವಾಗಿದ್ದು, ಅವರಿಗೆ ಈಗ ಮೂರು ಮಕ್ಕಳಿದ್ದಾರೆ.

ಹಲವಾರು ವರ್ಷಗಳಿಂದ ತನ್ನ ತಂದೆ– ತಾಯಿಯನ್ನು ಕಾಣಬೇಕು ಎಂಬ ಹಂಬಲದಿಂದ ಅಂಜಲಿ ಹುಡುಕಾಟ ನಡೆಸುತ್ತಿದ್ದರು. ಪತಿ ನೆಲ್ಲಮಣಿಸಾಜಿ ಅವರೊಂದಿಗೆ ಹೆತ್ತವರನ್ನು ಹುಡುಕುವ ಕನಸನ್ನು ಹಂಚಿಕೊಂಡಿದ್ದು, ಮೂರು ವರ್ಷಗಳಿಂದ ಹುಡುಕಾಡುತ್ತಿದ್ದರು. ಕೇರಳದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ನೆಲ್ಲಮಣಿಸಾಜಿ, ತನ್ನ ಸ್ನೇಹಿತರೊಂದಿಗೆ ವಿಷಯ ಹಂಚಿಕೊಂಡಿದ್ದಾರೆ. ಈ ವಿಷಯವು ಮೂಡಿಗೆರೆಯ ಸಮಾಜ ಸೇವಕ ಫಿಶ್ ಮೋನು ಅವರ ಗಮನಕ್ಕೆ ಬಂದಿದೆ. ಒಂದೂವರೆ ತಿಂಗಳಿನಿಂದ ಹುಡುಕಾಟ ನಡೆಸಿದ ಫಿಶ್‌ ಮೋಣು ಮತ್ತು ಅವರ ತಂಡ, ಮುದ್ರೆಮನೆ, ಮುತ್ತಿಗೆಪುರ ಗ್ರಾಮಗಳಲ್ಲಿ ಶೋಧ ಮಾಡಿದೆ. ಮುದ್ರೆಮನೆಯಲ್ಲಿ ಹಲವಾರು ವರ್ಷಗಳಿಂದ ವಾಸವಿದ್ದ ತಮಿಳು ಕುಟುಂಬವೊಂದು ನಾಲ್ಕು ವರ್ಷಗಳ ಹಿಂದೆ ಲೋಕವಳ್ಳಿ ಬಳಿ ವಾಸವಿರುವುದಾಗಿ ಸ್ಥಳೀಯರು ತಿಳಿಸಿದ್ದು, ಅಲ್ಲಿ ವಿಚಾರಿಸಿದಾಗ ಚೈತ್ರಾ ಎಂಬ ಮಹಿಳೆ ಖಾಸಗಿ ಕಾಫಿ ತೋಟದಲ್ಲಿ ವಾಸವಿರುವುದು ಗೊತ್ತಾಗಿದೆ.

ADVERTISEMENT

ಕೂಡಲೇ ಚೈತ್ರಾ ಅವರ ಬಳಿ ಬಂದ ಸಮಾಜ ಸೇವಕರ ತಂಡ ಕುಟುಂಬದ ಹಿನ್ನೆಲೆ ವಿಚಾರಿಸಿದೆ. ತನಗೆ ಹನ್ನೊಂದು ಮಕ್ಕಳಿದ್ದು, ಅದರಲ್ಲಿ ಐವರು ಸಾವನ್ನಪ್ಪಿದ್ದಾರೆ. ಒಬ್ಬ ಮಗಳು ಬಾಲ್ಯದಲ್ಲಿಯೇ ಕಣ್ಮರೆಯಾಗಿದ್ದಾಳೆ. ನಾಲ್ಕು ವರ್ಷಗಳ ಹಿಂದೆ ಪತಿ ಕಾಳಿ ಮುತ್ತು ಕೂಡ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಚೈತ್ರಾ ಅವರ ವಿಡಿಯೊ ದಾಖಲಿಸಿಕೊಂಡ ಸಮಾಜ ಸೇವಕರು, ಅದನ್ನು ಅಂಜಲಿಗೆ ಕಳುಹಿಸಿದಾಗ ಆ ಮಹಿಳೆಯೇ ತನ್ನ ತಾಯಿಯೆಂದು ಗುರುತಿಸಿದ್ದಾರೆ. ಮಂಗಳವಾರ ಕೇರಳ
ದಿಂದ ಲೋಕವಳ್ಳಿಗೆ ಕುಟುಂಬದ ಜತೆ ಬಂದ ಅಂಜಲಿ, ತಾಯಿಯನ್ನು ಕಂಡು ಕಣ್ಣೀರಧಾರೆ ಸುರಿಸಿದರು.

ಇಪ್ಪತ್ತೆರೆಡು ವರ್ಷಗಳ ಬಳಿಕ ಪತ್ತೆಯಾದ ಮಗಳನ್ನು ಕಂಡು ತಾಯಿಯೂ ಆನಂದ ಬಾಷ್ಪ ಸುರಿಸಿದರು. ಹುಡುಕಾಟದಲ್ಲಿ ಲೋಕವಳ್ಳಿ ರಮೇಶ್, ದಾವೂದ್ ನೆರವಾಗಿದ್ದು, ತಾಯಿಯನ್ನು ಹುಡುಕಿಕೊಟ್ಟವರಿಗೆ ಅಂಜಲಿ ಕೃತಜ್ಞತೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.