ಮೂಡಿಗೆರೆ ತಾಲ್ಲೂಕಿನ ಕುಂದೂರು ಗ್ರಾಮದ ಕಾರ್ಲಗದ್ದೆಯಲ್ಲಿ ಗುರುವಾರ ಕಾಣಿಸಿಕೊಂಡ ಕಾಡಾನೆಗಳು
ಮೂಡಿಗೆರೆ: ತಾಲ್ಲೂಕಿನ ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಲಗದ್ದೆ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಹತ್ತು ಕಾಡಾನೆಗಳು ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.
ಗ್ರಾಮದ ನಾರ್ಬರ್ಟ್ ಸಾಲ್ದಾನ ಅವರ ತೋಟದಿಂದ ಸಾರಗೋಡು ಮೀಸಲು ಅರಣ್ಯದತ್ತ ಸಾಗಿದ ಕಾಡಾನೆ ಗುಂಪಿನಲ್ಲಿ ಮೂರು ಮರಿಗಳಿದ್ದು, ಅವು ಚಂಡಗೋಡು- ಸಾರಗೋಡು ರಸ್ತೆಯನ್ನು ದಾಟಿವೆ. ಕಾಡಾನೆಗಳು ರಸ್ತೆ ದಾಟುವ ವೇಳೆ ಇಬ್ಬರು ದ್ವಿಚಕ್ರ ವಾಹನ ಸವಾರರು ಇದೇ ರಸ್ತೆಯಲ್ಲಿ ಬಂದಿದ್ದು, ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಕಾಡಾನೆಗಳು ಕಾರ್ಲಗದ್ದೆ ಗ್ರಾಮದಲ್ಲಿ ಹಲವು ರೈತರ ಭತ್ತದ ಗದ್ದೆ, ಕಾಫಿ ತೋಟಗಳಲ್ಲಿ ಹಾನಿ ಮಾಡಿವೆ. ಇದರಿಂದ ಕಾರ್ಲಗದ್ದೆ, ಭೈರಿಗದ್ದೆ, ಕಣಗದ್ದೆ, ಕುಂದೂರು, ಚೌಡಿಗುಡಿ, ಚೊಟ್ಟೆಗದ್ದೆ ಗ್ರಾಮಗಳಲ್ಲಿ ಭಯದ ವಾತಾವರಣ ಉಂಟಾಗಿದೆ. ‘ತಾಲ್ಲೂಕಿನಲ್ಲಿ ನಡೆಯುತ್ತಿರುವ ಕಾಡಾನೆ ಹಾವಳಿಯನ್ನು ತಡೆಯಲು ಶಾಶ್ವತ ಪರಿಹಾರ ರೂಪಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.