
ಮೂಡಿಗೆರೆ: ಹೆಗ್ಗಡ್ಲು ಸರ್ಕಾರಿ ಶಾಲೆಯಲ್ಲಿ ಗುರುವಾರ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ನಂದಿಸಲು ಬಂದ ಕಾರ್ಮಿಕ ಅಸ್ವಸ್ಥನಾದ ಘಟನೆ ನಡೆದಿದೆ.
ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 33 ವಿದ್ಯಾರ್ಥಿಗಳು ಇದ್ದು, ಬೆಳಿಗ್ಗೆ ವಿದ್ಯಾರ್ಥಿಗಳಿಗೆ ನೀಡಲು ಅಡುಗೆ ಸಿಬ್ಬಂದಿ ಹಾಲನ್ನು ಗ್ಯಾಸ್ ಸ್ಟೌ ಮೇಲೆ ಇಟ್ಟಿದ್ದು, ಸ್ವಲ್ಪ ಸಮಯದಲ್ಲೇ ಅಡುಗೆ ಮನೆಯು ದಟ್ಟ ಹೊಗೆಯಿಂದ ಕೂಡಿದೆ. ಇದನ್ನು ಕಂಡ ಅಡುಗೆ ಸಿಬ್ಬಂದಿ ಹಾಗೂ ಶಿಕ್ಷಕರು, ಗೋಣಿ ಚೀಲವನ್ನು ನೀರಿನಲ್ಲಿ ಮುಳುಗಿಸಿ, ಅದನ್ನು ಗ್ಯಾಸ್ ಹಾಗೂ ಸ್ಟೌ ಮೇಲೆ ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಬಳಿಕ ಶಿಕ್ಷಕಿ ಅಲ್ಮಸ್ ಅವರು ಬೆಂಕಿ ನಂದಕ ಬಳಸಿ ಬೆಂಕಿ ನಂದಿಸಿದ್ದಾರೆ.
ಬೆಂಕಿ ಉರಿಯುತ್ತಿರುವ ವಿಷಯ ತಿಳಿದು, ಶಾಲೆಯ ಹಿಂಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಬೆಂಕಿ ನಂದಿಸಲು ಅಡುಗೆ ಮನೆಯೊಳಗೆ ಪ್ರವೇಶಿಸಿದ್ದು, ಹೊಗೆಯಿಂದ ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಅವರನ್ನು ಬಣಕಲ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಮಕ್ಕಳಿಗೆ ಯಾವುದೇ ಅಪಾಯ ಆಗಿಲ್ಲ. ಸುದ್ದಿ ತಿಳಿಯುತ್ತಿದ್ದಂತೆ ಪೋಷಕರು, ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ ಮಕ್ಕಳು ಸುರಕ್ಷಿತವಾಗಿರುವ ಬಗ್ಗೆ ಖಾತರಿ ಪಡಿಸಿಕೊಳ್ಳುತ್ತಿದ್ದರು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹೇಮಂತ್ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.