ಲೋಕೇಶ್ ಬೆಟ್ಟಗೆರೆ
ಮೂಡಿಗೆರೆ: ಸರ್ಕಾರ ನಡೆಸುತ್ತಿರುವ ಜಾತಿ ಗಣತಿ ಅವೈಜ್ಞಾನಿಕತೆಯಿಂದ ಕೂಡಿದೆ ಎಂದು ಪರಿಶಿಷ್ಟ ಜಾತಿ ಅಭಿವೃದ್ಧಿ ಸಮಿತಿ ಮುಖಂಡ ಲೋಕೇಶ್ ಬೆಟ್ಟಗೆರೆ ಆರೋಪಿಸಿದ್ದಾರೆ.
ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕಿದೆ. ಆದರೆ ಮಲೆನಾಡಿನಲ್ಲಿ ಕೆಲವು ಪ್ರದೇಶಗಳಲ್ಲಿ ನೆಟ‌್‌ವರ್ಕ್ ಸಮಸ್ಯೆಯಿದ್ದು ಆನ್‌ಲೈನ್ ಪ್ರಕ್ರಿಯೆ ಮಾಡಲು ಸಾಧ್ಯವಾಗುವುದಿಲ್ಲ. ಪ್ರತ್ಯೇಕ ಹಾಳೆಯಲ್ಲಿ ಮಾಹಿತಿ ಬರೆದು ನೆಟ್‌ವರ್ಕ್ ಇರುವ ಪ್ರದೇಶಕ್ಕೆ ತೆರಳಿ ಅಪ್‌ಲೋಡ್ ಮಾಡಲಾಗುತ್ತದೆ ಎಂದು ಹೇಳಿದರು.
ಈ ವೇಳೆ ಮಾಹಿತಿ ವ್ಯತ್ಯಾಸವಾಗುವ ಸಾಧ್ಯತೆಯಿದೆ. ಅದಲ್ಲದೆ ಕೆಲವು ಗಣತಿದಾರರು ಮನೆಗಳಿಗೆ ತೆರಳದೆ ಆಯಾ ಭಾಗಗಳ ಬಿಎಲ್‌ಒ, ಅಂಗನವಾಡಿ ಶಿಕ್ಷಕಿಯರಿಂದ ಅಥವಾ ಗ್ರಾಮದ ಮುಖಂಡರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡು ಕುಳಿತಲ್ಲಿಯೇ ಗಣತಿ ಮಾಡುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ. ಇದರಿಂದ ಬಿಎಲ್‌ಒ ಗಳಿಗೆ ಜಾತಿ ಮಾಹಿತಿ ಇರುವುದಿಲ್ಲ. ಇದ್ದರೂ ಒಳ ಪಂಗಡಗಳ ಬಗ್ಗೆ ಅರಿವು ಇರುವುದಿಲ್ಲ. ಇದರಿಂದ ಇಡೀ ಯೋಜನೆ ಬುಡಮೇಲಾದಂತಾಗುತ್ತದೆ ಎಂದರು.
ಸರ್ಕಾರ ಕಂದಾಯ ಇಲಾಖೆ, ಆಹಾರ ನಾಗರಿಕ ಸರಬರಾಜು ಇಲಾಖೆ ಮೂಲಕ ಗಣತಿ ನಡೆಸಿದರೆ ಹೆಚ್ಚು ಸ್ಪಷ್ಟ ಮಾಹಿತಿ ಲಭಿಸುತ್ತದೆ. ಜಾತಿ ಗಣತಿ ಹಣ ಪೋಲು ಮಾಡಲು ಇರುವ ಅವಕಾಶವಾಗದೆ, ಎಲ್ಲಾ ಒಳ ಪಂಗಡಗಳಿಗೂ ನ್ಯಾಯ ಒದಗಿಸುವ ಕಾರ್ಯವಾಗಬೇಕು ಎಂದು ಅವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.