ADVERTISEMENT

ಹೆಲಿಕಾಪ್ಟರ್ ದುರಂತದ ಉನ್ನತ ತನಿಖೆ: ಶೋಭಾ ಕರಂದ್ಲಾಜೆ

ಮೂಡಿಗೆರೆಯಲ್ಲಿ ಮತ ಚಲಾಯಿಸಿದ ಕೇಂದ್ರ ಸಚಿವೆ ಶೋಭಾ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 0:54 IST
Last Updated 11 ಡಿಸೆಂಬರ್ 2021, 0:54 IST
ಮೂಡಿಗೆರೆ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ತೆರೆಯಲಾಗಿದ್ದ ಮತಗಟ್ಟೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ ಚಲಾಯಿಸಿ ಹೊರಬಂದರು. ಶಾಸಕ ಎಂ.ಪಿ. ಕುಮಾರಸ್ವಾಮಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೆ.ಬಿ. ಧರ್ಮಪಾಲ್, ಉಪಾಧ್ಯಕ್ಷ ಕೆ.ಸುಧೀರ್, ಸದಸ್ಯರಾದ ಮನೋಜ್, ಮಂಜುನಾಥ ಪಟೇಲ್, ಸಂದರ್ಶ ಹ್ಯಾರಗುಡ್ಡೆ, ನಯನ ತಳವಾರ ಇದ್ದರು.
ಮೂಡಿಗೆರೆ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ತೆರೆಯಲಾಗಿದ್ದ ಮತಗಟ್ಟೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ ಚಲಾಯಿಸಿ ಹೊರಬಂದರು. ಶಾಸಕ ಎಂ.ಪಿ. ಕುಮಾರಸ್ವಾಮಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೆ.ಬಿ. ಧರ್ಮಪಾಲ್, ಉಪಾಧ್ಯಕ್ಷ ಕೆ.ಸುಧೀರ್, ಸದಸ್ಯರಾದ ಮನೋಜ್, ಮಂಜುನಾಥ ಪಟೇಲ್, ಸಂದರ್ಶ ಹ್ಯಾರಗುಡ್ಡೆ, ನಯನ ತಳವಾರ ಇದ್ದರು.   

ಮೂಡಿಗೆರೆ: ಸೇನಾ ಹೆಲಿಕಾಪ್ಟರ್‌ ದುರಂತದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಕೇಂದ್ರ ಸರ್ಕಾರ ಆದೇಶಿಸಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ವಿಧಾನ ಪರಿಷತ್‍ ಚುನಾವಣೆಗೆ ಪಟ್ಟಣ ಪಂಚಾಯಿತಿಯಲ್ಲಿ ತೆರೆಯ ಲಾಗಿದ್ದ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಬಳಿಕ ಅವರು ಮಾತನಾಡಿದರು.

‘ಹೆಲಿಕಾಪ್ಟರ್‌ ದುರಂತದ ಇಡೀ ಘಟನೆಯನ್ನು ಉನ್ನತ ಮಟ್ಟದ ತನಿಖೆಗೆ ಸೂಚಿಸಲಾಗಿದ್ದು, ತನಿಖೆಯ ಬಳಿಕ ಸತ್ಯಾಂಶ ಹೊರಬರಲಿದೆ. ಘಟನೆಯಲ್ಲಿ ಪೈಲಟ್‍ ಬದುಕುಳಿದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಚೇತರಿಕೆಯ ಬಳಿಕವೂ ಘಟನೆಯ ಮಾಹಿತಿ ಲಭ್ಯವಾಗಲಿದೆ’ ಎಂದರು.

ADVERTISEMENT

‘ಅಕಾಲಿಕ ಮಳೆಯಿಂದಾಗಿ ಉಂಟಾಗಿರುವ ಬೆಳೆ ಹಾನಿ ಸಮೀಕ್ಷೆ ಮಾಡುವಂತೆ ಎಲ್ಲಾ ರಾಜ್ಯಗಳಿಗೂ ಕೇಂದ್ರ ಸರ್ಕಾರ ಸೂಚಿಸಿದ್ದು, ಕೇಂದ್ರದಿಂದಲೂ ಸಮೀಕ್ಷೆಗೆ ತಂಡ ಬಂದಿದೆ. ಉಭಯ ತಂಡಗಳು ಜಂಟಿ ಸಮೀಕ್ಷೆ ನಡೆಸಲಿವೆ. ರೈತರಿಗೆ ಪರಿಹಾರ ನೀಡಲು ಈಗಾಗಲೇ ಕೇಂದ್ರದಿಂದ ₹ 681 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ಮೊದಲ ಹಂತದ ಪರಿಹಾರ ವಿತರಣೆ ಮಾಡಲಾಗುವುದು. ಶಾಲಾ ಮಕ್ಕಳಿಗೆ ಮೊಟ್ಟೆ ನೀಡುತ್ತಿರುವ ಬಗ್ಗೆ ಅಪಸ್ವರ ಬಂದಿರುವುದು ನ್ಯಾಯಯುತವಾಗಿದೆ. ಮೊಟ್ಟೆ ನೀಡುತ್ತಿರುವ ಬಗ್ಗೆ ರಾಜ್ಯ ಸರ್ಕಾರ ಪುನರ್ ಪರಿಶೀಲಿಸಬೇಕು. ಮೊಟ್ಟೆಯ ಬದಲು ಮಕ್ಕಳ ಪಾಲಕರ ಕೈಗೆ ಹಣ ನೀಡಿದರೆ ಅವರ ಆಹಾರವನ್ನು ಅವರೇ ನಿರ್ಧರಿಸುತ್ತಾರೆ. ಆಹಾರ ಪದ್ಧತಿಯನ್ನು ವಿರೋಧಿಸುವುದು ಕೂಡಾ ಸರಿಯಲ್ಲ’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ವಿಧಾನ ಪರಿಷತ್ 25 ಸ್ಥಾನದ ಪೈಕಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆಯಲಿದ್ದು, ಮೇಲ್ಮನೆಯಲ್ಲಿ ಬಹುಮತ ದೊರಕಲಿದೆ. ಉತ್ತರ ಪ್ರದೇಶದ ಚುನಾವಣೆಗೆ ಉಸ್ತುವಾರಿಯಾಗಿ ನೇಮಿಸಿರುವುದರಿಂದ ಅಲ್ಲಿಗೆ ತೆರಳಿದ್ದೆ. ಉಪ ಸಭಾಪತಿಯಾಗಿ ಎಂ.ಕೆ. ಪ್ರಾಣೇಶ್‍ ಅದೇ ಹುದ್ದೆಯಲ್ಲಿ ಮುಂದುವರಿಯಲು ಕೊಡುಗೆ ಇರಲೆಂದು ಉತ್ತರ ಪ್ರದೇಶದಿಂದ ಮತ ಚಲಾಯಿಸಲು ಬಂದಿದ್ದೇನೆ’ ಎಂದರು.

ಶಾಸಕ ಎಂ.ಪಿ.ಕುಮಾರಸ್ವಾಮಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೆ.ಬಿ.ಧರ್ಮಪಾಲ್, ಉಪಾಧ್ಯಕ್ಷ ಕೆ. ಸುಧೀರ್, ಸದಸ್ಯರಾದ ಮನೋಜ್, ಮಂಜುನಾಥ ಪಟೇಲ್, ಸಂದರ್ಶ ಹ್ಯಾರಗುಡ್ಡೆ, ನಯನ ತಳವಾರ, ಶಶಿ ಸನಾತನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.