ADVERTISEMENT

ಫೆ. 11ರಿಂದ 13ವರೆಗೆ ಮೂಡಿಗೆರೆ ಉತ್ಸವ

ಶಾಸಕ ಎಂ.ಪಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 5:22 IST
Last Updated 25 ಜನವರಿ 2023, 5:22 IST
ಮೂಡಿಗೆರೆಯಲ್ಲಿ ನಡೆದ ಮೂಡಿಗೆರೆ ಉತ್ಸವ-ದ ಪೂರ್ವಭಾವಿ ಸಭೆಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಜೆ.ಎಸ್ ರಘು ಮಾತನಾಡಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ.ಬಿ ಧರ್ಮಪಾಲ್ ಇದ್ದರು
ಮೂಡಿಗೆರೆಯಲ್ಲಿ ನಡೆದ ಮೂಡಿಗೆರೆ ಉತ್ಸವ-ದ ಪೂರ್ವಭಾವಿ ಸಭೆಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಜೆ.ಎಸ್ ರಘು ಮಾತನಾಡಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ.ಬಿ ಧರ್ಮಪಾಲ್ ಇದ್ದರು   

ಮೂಡಿಗೆರೆ: ಫೆ. 11ರಿಂದ 13ವರೆಗೆ ಪಟ್ಟಣದಲ್ಲಿ ಮೂಡಿಗೆರೆ ಉತ್ಸವ-2023 ಆಚರಿಸಲು ನಿರ್ಧರಿಸಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಶಾಸಕ ಎಂ.ಪಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.

ಸಮಿತಿಯ ಕಾರ್ಯಾಧ್ಯಕ್ಷ ಜೆ.ಎಸ್ ರಘು ಮಾತನಾಡಿ, ‘ಮೂಡಿಗೆರೆ ಉತ್ಸವದ ಬಗ್ಗೆ ಕೆಲವರಲ್ಲಿ ಗೊಂದಲ ಉಂಟಾಗಿದೆ. ಇದು ಸರ್ಕಾರದ ಕಾರ್ಯಕ್ರಮವಲ್ಲ. ಶಾಸಕ ಎಂ.ಪಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಹಾಗೂ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ ಪ್ರಾಣೇಶ್ ಅವರ ಗೌರವಧ್ಯಕ್ಷತೆಯಲ್ಲಿ ಮೂಡಿಗೆರೆ ಉತ್ಸವ ಆಚರಿಸಲು ಈಗಾಗಲೇ ಸಕಲ ಸಿದ್ಧತೆ ನಡೆದಿದೆ. ಇದರಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ.ಬಿ ಧರ್ಮಪಾಲ್, ಕಾಂಗ್ರೆಸ್ ಮುಖಂಡರಾದ ಮೋಟಮ್ಮ, ಜೆಡಿಎಸ್ ಮುಖಂಡರಾದ ಬಿ.ಬಿ ನಿಂಗಯ್ಯ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಂಜನ್ ಅಜಿತ್ ಕುಮಾರ್, ಚಂದನ್ ಗ್ರೂಪ್ ಮಾಲೀಕ ಕೆ. ಮಂಚೇಗೌಡ ಗೌರವ ಸಲಹೆಗಾರರಾಗಿದ್ದಾರೆ’ ಎಂದರು.

ADVERTISEMENT

ಶಾಸಕ ಎಂ.ಪಿ ಕುಮಾರಸ್ವಾಮಿ ಮಾತನಾಡಿ, ‘ಉತ್ಸವ ನಡೆಯುವ ಮೂರು ದಿನ ಜನರಿಗೆ ಪ್ರವಾಸಿ ತಾಣ ವೀಕ್ಷಿಸಲು ಹೆಲಿಕಾಪ್ಟರ್‌ ವ್ಯವಸ್ಥೆ ಕಲ್ಪಿಸಿದ್ದು, ನೋಂದಣಿ ಪ್ರಾರಂಭಿಸಲಾಗಿದೆ. ಫೆ. 11ರಂದು ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಾಂಸ್ಕೃತಿಕ ಮೆರವಣಿಗೆ ನಡೆಯುತ್ತದೆ. ಹೊಯ್ಸಳ ಕ್ರೀಡಾಂಗಣದಲ್ಲಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, 2ನೇ ದಿನ ಉಡುಪಿಯ ಭಾರ್ಗವ ತಂಡದಿಂದ ಸಾಂಸ್ಕೃತಿಕ ವೈಭವ, 3ನೇ ದಿನ ಕಾಂತಾರ ಚಲನ ಚಿತ್ರದ ಕಲಾವಿದರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿವೆ. ಆಹಾರ ಮೇಳ, ವಸ್ತುಪ್ರದರ್ಶನ, ಸಾಧಕರಿಗೆ ಸನ್ಮಾನ, ನಗರ ದೀಪಾಲಂಕಾರ, ಲೇಸರ್ ಲೈಟ್ ಪ್ರದರ್ಶನ ಏರ್ಪಡಿಸಲಾಗಿದೆ. ಮೂಡಿಗೆರೆ ಉತ್ಸವ ಯಶಸ್ವಿಯಾಗಿ ನಡೆಸಲು ಎಲ್ಲರೂ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ.ಬಿ ಧರ್ಮಪಾಲ್, ಉಪಾಧ್ಯಕ್ಷೆ ಕಮಲಾಕ್ಷಿ, ಸದಸ್ಯರಾದ ಸುಧೀರ್, ಪಿ.ಜಿ ಅನುಕುಮಾರ್, ಮನೋಜ್, ಆಶಾಮೋಹನ್, ಸಂದರ್ಶ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಂಜನ್ ಅಜಿತ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ ಸುರೇಂದ್ರ, ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಝಾಕೀರ್ ಹುಸೇನ್, ಕಸಾಪ ಅಧ್ಯಕ್ಷ ಶಾಂತಕುಮಾರ್, ಪತ್ರಕರ್ತರ ಸಂಘದ ಅಧ್ಯಕ್ಷ ಎ.ಆರ್ ಉದಯಶಂಕರ್, ಪ್ರಸನ್ನಗೌಡಹಳ್ಳಿ, ಟಿ. ಹರೀಶ್, ಅಯೂಬ್ ಹಾಜಿ, ಜಕರಿಯಾ ಝಾಕೀರ್, ಹೆಸಗಲ್ ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.