ಶೃಂಗೇರಿ: ಪಟ್ಟಣದಲ್ಲಿ ಸರ್ಕಾರದ ‘ನಮ್ಮ ಕ್ಲಿನಿಕ್’ ಆರಂಭಿಸುವಂತೆ ಸಾರ್ವಜನಿಕರು ಬೇಡಿಕೆ ಇರಿಸಿದ್ದಾರೆ.
ಗ್ರಾಮೀಣ ಮತ್ತು ಗುಡ್ಡಗಾಡು ಭಾಗದಿಂದ ಕೂಡಿರುವ ಶೃಂಗೇರಿ ತಾಲ್ಲೂಕಿನ ವಿದ್ಯಾರಣ್ಯಪುರದಲ್ಲಿ 3,318, ಮೆಣಸೆಯಲ್ಲಿ 3,264, ಕೆರೆಕಟ್ಟೆ ಗ್ರಾಮ ಪಂಚಾಯಿತಿಯಲ್ಲಿ 698, ತೆಕ್ಕೂರು, ಕೂತುಗೋಡು ಗ್ರಾಮ ಪಂಚಾಯಿತಿ ಸೇರಿದಂತೆ ಒಟ್ಟು 36 ಸಾವಿರ ಜನಸಂಖ್ಯೆ ಇದೆ. ಹೊಸದಾಗಿ 100 ಹಾಸಿಗೆಗಳ ಆಸ್ಪತ್ರೆ ಮಂಜೂರಾಗಿದ್ದು, ಕಾಮಗಾರಿಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಲಿದೆ. ಪಟ್ಟಣದಿಂದ ಸುಮಾರು 3 ಕಿ.ಮೀ ಇರುವ ಹೊಸ ಆಸ್ಪತ್ರೆಗೆ ರೋಗಿಗಳು ಆಟೊ ಅಥವಾ ಬಾಡಿಗೆ ವಾಹನದಲ್ಲಿ ತೆರಳಬೇಕಾಗಿದೆ. ಹೊಸ ಆಸ್ಪತ್ರೆ ಪಟ್ಟಣದ ಹೊರ ವಲಯದಲ್ಲಿ ಆರಂಭಗೊಳ್ಳಲಿದ್ದು, ತುರ್ತು ಚಿಕಿತ್ಸೆಗೆ ತೊಂದರೆ ಉಂಟಾಗಿದೆ ಎಂಬುದು ಸ್ಥಳೀಯರ ಅಳಲು.
ಸರ್ಕಾರದ ಆದೇಶದಂತೆ ಪಟ್ಟಣದಲ್ಲಿ ನಮ್ಮ ಕ್ಲಿನಿಕ್ ಆರಂಭಕ್ಕೆ ಜನಸಂಖ್ಯೆಯ ಕೊರತೆ ಎದುರಾಗಿದೆ. ಆದರೆ, ನಿತ್ಯ ಶೃಂಗೇರಿಯ ಶಾರದಾಂಬೆಯ ದರ್ಶನಕ್ಕೆ ಸಾವಿರಾರು ಜನ ಬರುತ್ತಾರೆ. ಪಟ್ಟಣದ ಭಾರತೀ ಬೀದಿಯಲ್ಲಿರುವ ಹಳೆಯ ಸರ್ಕಾರಿ ಆಸ್ಪತ್ರೆ ಕಟ್ಟಡದಲ್ಲಿ ನಮ್ಮ ಕ್ಲಿನಿಕ್ ಆರಂಭಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಸ್ಥಳೀಯರು.
ಸಂಚಾರಿ ಆರೋಗ್ಯ ಘಟಕವನ್ನು ನರಸಿಂಹರಾಜಪುರ ಮತ್ತು ಕೊಪ್ಪ ತಾಲ್ಲೂಕಿಗೆ ಮಂಜೂರು ಮಾಡಲಾಗಿದೆ. ಇಲ್ಲೂ ಶೃಂಗೇರಿ ತಾಲ್ಲೂಕನ್ನು ಕೈಬಿಡಲಾಗಿದ್ದು, ಗ್ರಾಮೀಣ ಜನರನ್ನು ನಿರ್ಲಕ್ಷಿಸಲಾಗಿದೆ ಎಂಬ ದೂರು ಕೇಳಿ ಬಂದಿದೆ.
ತಾಲ್ಲೂಕಿನ ಜನಸಂಖ್ಯೆ ಜೊತೆಗೆ ಇಲ್ಲಿಗೆ ನಿತ್ಯ ಭೇಟಿ ನೀಡುವ ಪ್ರವಾಸಿಗರನ್ನೂ ಸರ್ಕಾರ ಪರಿಗಣಿಸಿ ಪಟ್ಟಣದ ಭಾರತೀ ಬೀದಿಯಲ್ಲಿರುವ ಹಳೆಯ ಆಸ್ಪತ್ರೆ ಕಟ್ಟಡದಲ್ಲಿ ನಮ್ಮ ಕ್ಲಿನಿಕ್ ಆರಂಭಿಸಬೇಕು. ಶೃಂಗೇರಿ ತಾಲ್ಲೂಕಿನ ಹಾಲಂದೂರು, ಮೌಳಿ, ಕುಂಚೂರು, ಸೇರಿದಂತೆ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ಆಶಾ ಕಾರ್ಯಕರ್ತರ ಹುದ್ದೆಗಳು ಖಾಲಿ ಉಳಿದಿದ್ದು ಗರ್ಭಿಣಿಯರು, ಮಕ್ಕಳ ದಾಖಲಾತಿಗೆ ತೊಡಕಾಗಿದೆ. ಗ್ರಾಮೀಣ ಭಾಗದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಹುದ್ದೆಗಳೂ ಖಾಲಿ ಉಳಿದಿದೆ. ಅದನ್ನೂ ಸಚಿವರು ತಕ್ಷಣ ಭರ್ತಿ ಮಾಡಬೇಕು ಎಂದು ಮೆಣಸೆ ಗ್ರಾಮ ಪಂಚಾಯಿತಿ ಸದಸ್ಯ ತ್ರೀಮೂರ್ತಿ ಹೊಸ್ತೋಟ ಒತ್ತಾಯಿಸಿದ್ದಾರೆ.
ಈಗ ಶಂಕು ಸ್ಥಾಪನೆಗೊಳ್ಳುತ್ತಿರುವ 100 ಹಾಸಿಗೆಯ ಆಸ್ಪತ್ರೆ ಜಾಗ ಶೃಂಗೇರಿ ಪಟ್ಟಣದಿಂದ 2 ಕಿ.ಮೀ ದೂರದಲ್ಲಿದೆ. ಬಡವರು ಹೆಚ್ಚು ಹಣವನ್ನು ಆಟೊ ಬಾಡಿಗೆಗೆ ವ್ಯಯಿಸಬೇಕಾಗುತ್ತದೆ. ಸರ್ಕಾರದಿಂದಾಗುವ ನಮ್ಮ ಕ್ಲೀನಿಕ್ ಸೌಲಭ್ಯ ಕೊಪ್ಪ ಮತ್ತ ಎನ್.ಆರ್ ಪುರದಲ್ಲಿದೆ. ಪಟ್ಟಣ ಭಾರತೀ ಬೀದಿಯಲ್ಲಿರುವ ಹಳೆಯ ಆಸ್ಪತ್ರೆಯ ಖಾಲಿ ಜಾಗದಲ್ಲಿ ನಮ್ಮ ಕ್ಲೀನಿಕ್ ಸೌಲಭ್ಯ ಕಲ್ಪಿಸಿಕೊಟ್ಟರೆ ಬಡವರಿಗೆ ಅನುಕೂಲವಾಗುತ್ತದೆ ಎಂದು ದಲಿತ ಸಂಘಟನೆ ಮುಖಂಡ ಕೆ.ಎಂ ಗೋಪಾಲ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.