ADVERTISEMENT

ಕೊಪ್ಪದ ಅಂದ ಕಬಳಿಸುವ ತ್ಯಾಜ್ಯದ ರಾಶಿ

ಸಾರ್ವಜನಿಕರಿಂದ ಸ್ಥಳೀಯ ಆಡಳಿತಕ್ಕೆ ಹಿಡಿಶಾಪ, ಜಲಚರಗಳಿಗೆ ಅಪಾಯ, ಸಾಂಕ್ರಾಮಿಕ ರೋಗ ಭೀತಿ

ರವಿಕುಮಾರ್ ಶೆಟ್ಟಿಹಡ್ಲು
Published 17 ಫೆಬ್ರುವರಿ 2020, 5:35 IST
Last Updated 17 ಫೆಬ್ರುವರಿ 2020, 5:35 IST
ಕೊಪ್ಪದ ಮುಸುರೆ ಹಳ್ಳದಲ್ಲಿ ತ್ಯಾಜ್ಯ ಸುರಿದಿರುವುದು.
ಕೊಪ್ಪದ ಮುಸುರೆ ಹಳ್ಳದಲ್ಲಿ ತ್ಯಾಜ್ಯ ಸುರಿದಿರುವುದು.   

ಕೊಪ್ಪ: ಚಿಕ್ಕಮಗಳೂರು ಜಿಲ್ಲೆಯಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರ ಪ್ರದೇಶಗಳಲ್ಲಿ ಕೊಪ್ಪ ಪಟ್ಟಣ ಮುಂಚೂಣಿಯಲ್ಲಿದೆ. ದಿನಗಳು ಕಳೆದಂತೆಲ್ಲಾ ಪಟ್ಟಣ ಪ್ರದೇಶ ವಿಸ್ತಾರವಾಗುತ್ತಲೇ ಇದೆ. ಸುತ್ತ ಇರುವ ಗ್ರಾಮ ಪಂಚಾಯಿತಿಗಳೂ ಪಟ್ಟಣದ ಸ್ವರೂಪವನ್ನೇ ಪಡೆದುಕೊಂಡಿವೆ. ಪಟ್ಟಣ ಮತ್ತು ಸುತ್ತಲಿನ ಪ್ರದೇಶದಲ್ಲಿ ನಿತ್ಯ ಉತ್ಪತ್ತಿಯಾಗುವ ಘನ ತ್ಯಾಜ್ಯ ವಿಲೇವಾರಿ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಎಲ್ಲೆಂದರಲ್ಲಿ ಕಾಣಿಸುತ್ತಿರುವ ಕಸದ ರಾಶಿಗಳು ಪಟ್ಟಣದ ಅಂದವನ್ನು ಕಸಿಯುತ್ತಿದ್ದು, ಪರಿಹಾರ ಕಾಣದೇ ಅಧಿಕಾರಿಗಳು ಹೈರಾಣಾಗಿದ್ದಾರೆ.

ಪಟ್ಟಣ ಪಂಚಾಯಿತಿಗೆ ಸೇರಿದ ಇಲ್ಲಿನ ಕಸ ವಿಲೇವಾರಿ ಘಟಕದಲ್ಲಿ ಎರೆಹುಳು ಗೊಬ್ಬರ ತಯಾರಿ ಮಾಡುತ್ತಿದ್ದು, ಇದಕ್ಕೆ ನೀರು ಅತ್ಯಗತ್ಯ. ಸಮೀಪದ ಕೊಳವೆ ಬಾವಿಯಿಂದ ನೀರನ್ನು ಬಳಸುತ್ತಿತ್ತು. ವಿದ್ಯುತ್ ಸಮಸ್ಯೆಯಿಂದಾಗಿ ನೀರು ಸಿಗದೇ ತಿಂಗಳೇ ಕಳೆದವು. ಇಲ್ಲಿನ ಕಸವನ್ನು ವಿಲೇವಾರಿ ಮಾಡಲು ಸಾಧ್ಯವಾಗದೇ ಘಟಕದ ಆವರಣ ಕಸದಿಂದ ಭರ್ತಿಯಾಗುತ್ತಾ ಸಾಗಿದೆ. ಅಲ್ಲದೇ, ತ್ಯಾಜ್ಯ ವಿಲೇವಾರಿ ಘಟಕದ ಸಮೀಪ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕಸದ ರಾಶಿ ಕಣ್ಣಿಗೆ ರಾಚುತ್ತಿದೆ. ಸಾರ್ವಜನಿಕರು ಸ್ಥಳೀಯ ಆಡಳಿತಕ್ಕೆ ಹಿಡಿಶಾಪ ಹಾಕಿಕೊಂಡು ಓಡಾಡುತ್ತಿದ್ದಾರೆ.

ಕೊಪ್ಪ ಗ್ರಾಮಾಂತರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯ ವಿಲೇವಾರಿಗೆ ಸ್ಥಳಾವಕಾಶವೇ ಇಲ್ಲವಾಗಿದೆ. ಅರಣ್ಯ ಇಲಾಖೆಯ ಸೆಕ್ಷನ್ 4 ಇತ್ಯಾದಿಗಳ ಕಾರಣದಿಂದ ಕಂದಾಯ ಜಮೀನಿನ ಲಭ್ಯತೆಯ ಪ್ರಮಾಣ ಗಣನೀಯವಾಗಿ ಕುಸಿದಿದೆ. ಇದರಿಂದಾಗಿ ತ್ಯಾಜ್ಯ ವಿಲೇವಾರಿಗೆ ಜಮೀನು ಗುರುತಿಸುವುದೇ ಸಾಧ್ಯವಾಗಿಲ್ಲ. ದಿನಗಳು ಕಳೆದಂತೆ ಸಮಸ್ಯೆ ಬಿಗಡಾಯಿಸುತ್ತಿದ್ದು, ಸಂಗ್ರಹವಾಗುವ ತ್ಯಾಜ್ಯವನ್ನು ಎಲ್ಲಿ ವಿಲೇವಾರಿ ಮಾಡುವುದು ಎಂಬ ಪ್ರಶ್ನೆಗೆ ಉತ್ತರ ದೊರಕದೇ ಅಧಿಕಾರಿಗಳು ಕಂಗಾಲಾಗಿದ್ದಾರೆ.

ADVERTISEMENT

ಎಲ್ಲಿ ಹೋದರೂ ವಿರೋಧ: ಗ್ರಾಮಾಂತರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆಗಾಗಿ ಕೆಲವು ತಿಂಗಳಿಂದ ವಾಹನವೊಂದನ್ನು ಬಳಸಲಾಗುತ್ತಿತ್ತು. ಸಂಗ್ರಹಿಸಿದ ಕಸವನ್ನು ಅಮ್ಮಡಿಯಲ್ಲಿ ನಿರ್ಮಿಸಿದ ತ್ಯಾಜ್ಯ ವಿಲೇವಾರಿ ಗುಂಡಿಗೆ ಹಾಕಲಾಗುತ್ತಿತ್ತು. ಅಲ್ಲಿನ ಸ್ಥಳೀಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದಾಗಿ ಅಲ್ಲಿ ಕಸ ಹಾಕುವುದನ್ನು ನಿಲ್ಲಿಸಲಾಯಿತು.

ನಂತರದಲ್ಲಿ ಒಣ ಕಸವನ್ನು ಮಾತ್ರ ಸಂಗ್ರಹಿಸಿದ ಗ್ರಾಮ ಪಂಚಾಯಿತಿ, ಅಮ್ಮಡಿಯಲ್ಲಿ ಮುಚ್ಚಿದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಠಡಿಯೊಳಗೆ ಹಾಗೂ ಹುಲ್ಲುಮಕ್ಕಿಯಲ್ಲಿ ಗುಡ್ಡೆ ಹಾಕಿತು. ಇದಕ್ಕೂ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದ್ದರಿಂದ ಪಂಚಾಯಿತಿ ಪಕ್ಕದಲ್ಲೇ ಕಸದ ಗುಂಡಿಯನ್ನು ನಿರ್ಮಿಸಲಾಯಿತು. ಸಮೀಪದಲ್ಲೇ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಇರುವುದರಿಂದ ಜನರ ವಿರೋಧ ತೀವ್ರವಾಯಿತು. ವಿಲೇವಾರಿಗೆ ಜಾಗವೆ ಇಲ್ಲದಿರುವುದರಿಂದ ಹಲವು ದಿನಗಳಿಂದ ಘನ ತ್ಯಾಜ್ಯ ಸಂಗ್ರಹಣೆಯನ್ನೇ ಸ್ಥಗಿತಗೊಳಿಸಲಾಗಿದೆ.

ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ: ಇದೀಗ ಜನರು, ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದಾರೆ. ಎಲ್ಲಿ ನೋಡಿದರೂ ಕಸದ ರಾಶಿಯೇ ಕಣ್ಣಿಗೆ ಕಾಣುತ್ತದೆ. ಪಟ್ಟಣಕ್ಕೆ ಹೊಂದಿಕೊಂಡಿರುವ ಮುಸುರೆ ಹಳ್ಳದಲ್ಲಿ ಕಸದ ರಾಶಿ ಸುರಿಯಲಾಗಿದೆ. ಈ ಹಿಂದೆ ಹಳ‍್ಳದಲ್ಲಿ ಸುರಿದ ಕಸ ಕಳೆದ ಮಳೆಗಾಲದಲ್ಲಿ ಕೊಚ್ಚಿಕೊಂಡು ಹೋಗಿತ್ತು. ಮತ್ತೆ ಅದೇ ಜಾಗದಲ್ಲಿ ಜನರು ಕಸ ಎಸೆಯುತ್ತಿರುವುದರಿಂದ ಜಲಚರಗಳಿಗೆ ಅಪಾಯ ಎದುರಾಗಿದೆ. ಅಲ್ಲದೇ, ಹಳ‍್ಳದ ಪಕ್ಕದ ಗ್ರಾಮಗಳ ಜನರು ಇದೇ ನೀರನ್ನು ಕುಡಿಯಲು ಬಳಸುತ್ತಿರುವುದರಿಂದ ರೋಗದ ಭೀತಿ ಎದುರಿಸುತ್ತಿದ್ದಾರೆ.

ಕುಡಿದ ಮದ್ಯದ ಖಾಲಿ ಬಾಟಲಿಗಳನ್ನು, ಎಲೆಕ್ಟ್ರಾನಿಕ್ ವಸ್ತುಗಳನ್ನು, ಪ್ಲಾಸ್ಟಿಕ್ ಚೀಲಗಳನ್ನು ಎಸೆಯುತ್ತಿದ್ದಾರೆ. ಇಷ್ಟೇ ಅಲ್ಲದೇ, ಕೋಳಿ ತ್ಯಾಜ್ಯ, ಮೀನಿನ ತ್ಯಾಜ್ಯವನ್ನೂ ಹಲವರು ಪಟ್ಟಣ ಪಂಚಾಯಿತಿ ಕಸ ವಿಲೇವಾರಿ ಘಟಕದ ಬಳಿ ಹಾಗೂ ಮುಸುರೆ ಹಳ್ಳಕ್ಕೆ ಎಸೆಯುತ್ತಿದ್ದಾರೆ. ಕೆಲವರು ಕಸ ಸಂಗ್ರಹಣೆ ವಾಹನಕ್ಕೆ ಕಸವನ್ನು ಹಾಕದೇ ತಮ್ಮ ಸ್ವಂತ ವಾಹನಗಳಲ್ಲಿ ಅಥವಾ ವಾಯುವಿಹಾರದ ಸಂದರ್ಭ ಚೀಲದಲ್ಲಿ ಕೊಂಡೊಯ್ದು ಪಟ್ಟಣದ ಹೊರವಲಯದ ಕಾಡಿನ ಪ್ರದೇಶಲ್ಲಿ ಎಸೆಯುತ್ತಿದ್ದಾರೆ ಎಂಬುದು ಸಾರ್ವಜನಿಕರ ದೂರು.

ವಾತಾವರಣ ಕಲುಷಿತ

ಮೈಮನಗಳ ಆರೋಗ್ಯಕ್ಕೆ ಸ್ವಚ್ಛತೆಯೇ ಸಾಧನ. ಆದರೆ, ಆಧುನಿಕ ಸೌಕರ್ಯ ಸಾಧನಗಳಲ್ಲಿ ಪ್ಲಾಸ್ಟಿಕ್ ಮತ್ತು ರಾಸಾಯನಿಕ ವಸ್ತುಗಳ ತ್ಯಾಜ್ಯಗಳಿಂದಾಗಿ ವಾತಾವರಣ ಕಲುಷಿತಗೊಂಡಿದೆ. ತ್ಯಾಜ್ಯ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ. ವ್ಯಕ್ತಿಗತ ವಿವೇಚನೆಯಿಂದ ಇದಕ್ಕೆ ಪರಿಹಾರವಿದೆ. ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದು ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳ ಹೊಣೆಗಾರಿಕೆಯೂ ಹೌದು.

ಎಸ್.ಎನ್.ಚಂದ್ರಕಲಾ, ಹುಲ್ಲುಮಕ್ಕಿ, ಸಾಹಿತಿ
ಕ್ರಮ ಕೈಗೊಳ್ಳಬೇಕು

ಪಟ್ಟಣ ಸುತ್ತ‌ಮುತ್ತ ಕಸ ಎಸೆದು ಪರಿಸರವನ್ನು ಹಾಳು ಮಾಡಿದಂತಾಗಿದೆ. ಹಳ್ಳದಲ್ಲಿ ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಅರಿವು ಮೂಡಿಸುವ ಕೆಲಸ ಮಾಡುತ್ತಾರೆ. ಆದರೂ, ಸಾರ್ವಜನಿಕರಲ್ಲಿಯೂ ತಮ್ಮ ಸುತ್ತಮುತ್ತ ಪರಿಸರ ಸ್ವಚ್ಛವಾಗಿಟ್ಟುಕೊಳ‍್ಳಬೇಕು ಎಂಬ ಪರಿಜ್ಞಾನ ಅಗತ್ಯ.

ಶೇಖರ್, ಆಟೊ ಚಾಲಕ, ಕೊಪ್ಪ

ನಾಗರಿಕರೂ ಕೈ ಜೋಡಿಸಬೇಕು

ಪ್ಲಾಸ್ಟಿಕ್ ಮುಕ್ತ ಮಾಡಬೇಕು ಎಂಬ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅದಕ್ಕೆ ಸಾರ್ವಜನಿಕರಾದ ನಮ್ಮ ಜವಾಬ್ದಾರಿಯೂ, ಕರ್ತವ್ಯವೂ ಇದೆ. ಪ್ಲಾಸ್ಟಿಕ್ ಬಳಕೆ ಮಾಡುವವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ನಮ್ಮ ಗ್ರಾಮ, ನಮ್ಮ ಊರು ಎಂಬ ಕಾಳಜಿ ನಮಗೂ ಅಗತ್ಯ. ಕಸ ವಿಲೇವಾರಿ ಮಾಡುವುದರ ಕುರಿತು ಕೇವಲ ಅಧಿಕಾರಿಗಳನ್ನು ದೂರುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ.

ಮಹೇಶ್, ಅನಂತಕೃಪ ಹೋಟೆಲ್ ಮಾಲೀಕ, ಕೊಪ್ಪ

------

ಜಾಗದ ಕೊರತೆ ಇದೆ: ಪಿಡಿಒ

‘ಕಸ ಸಂಗ್ರಹಣೆ ಮಾಡುವ ವಾಹನ ಮನೆ ಸಮೀಪ ಹೋದಾಗ ಕಸ ವಿಂಗಡಿಸದೇ ನೀಡುತ್ತಾರೆ. ಕಸ ವಿಲೇವಾರಿ ಮಾಡಲು ಜಾಗದ ಕೊರತೆ ಎದುರಾಗಿದೆ. ಅರಣ್ಯ ಇಲಾಖೆಯವರು ಸೆಕ್ಷನ್ 4 ಎಂದು ಹೇಳಿ, ಯಾವುದೇ ಜಾಗವನ್ನೂ ಬಿಟ್ಟುಕೊಡಲು ಸಿದ್ಧರಿಲ್ಲ. ಅಮ್ಮಡಿ, ಹುಲ್ಲುಮಕ್ಕಿಯಲ್ಲಿ ಕಸ ಸಂಗ್ರಹಿಸಿ, ವಿಲೇವಾರಿ ಮಾಡಲು ಸ್ಥಳೀಯರು ವಿರೋಧಿಸಿದ್ದರಿಂದ ಅಲ್ಲಿಂದ ಕಸ ತೆರವುಗೊಳಿಸಲಾಗಿದೆ. ಪಂಚಾಯಿತಿ ಪಕ್ಕದಲ್ಲಿ ಕಸ ವಿಲೇವಾರಿ ಮಾಡಲು ನಿರ್ಮಿಸಿದ್ದ ಗುಂಡಿಗೆ ಜನರು ಆಕ್ಷೇಪಿಸಿದ್ದಾರೆ’ ಎಂದು ಕೊಪ್ಪ ಗ್ರಾಮಾಂತರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಿಲ್‍ಕುಮಾರ್ ಸಮಸ್ಯೆಯ ಆಳ, ಅಗಲವನ್ನು ಬಿಡಿಸಿಟ್ಟರು.

‘ಕಸ ವಿಲೇವಾರಿ ಘಟಕಕ್ಕೆ ಸದ್ಯಕ್ಕೆ ಕಸ ಹಾಕಲು ಅನುಮತಿ ನೀಡುವಂತೆ ಕೋರಿದ್ದೇವೆ. ಪಟ್ಟಣ ಪಂಚಾಯಿತಿ ಇದಕ್ಕೆ ಪ್ರತಿಕ್ರಿಯಿಸಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಠಾಣಾ ಜಾಗವಿದ್ದು, ಅದು ಒತ್ತುವರಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸದ್ಯಕ್ಕೆ ಜಾಗದ ಸರ್ವೆ ಮಾಡಲು ಇಲಾಖೆಗೆ ಅರ್ಜಿ ಸಲ್ಲಿಸಲಾಗಿದೆ. ಈ ಜಾಗ ಲಭ್ಯವಾದಲ್ಲಿ ಅದನ್ನು ಬಳಸಲು ಸಿಇಒ ಅವರಿಂದ ಅನುಮತಿ ಪಡೆಯಬೇಕು’ ಎಂದು ಹೇಳಿದರು.

-------

ವಿದ್ಯುತ್ ಸಮಸ್ಯೆ: ಮುಖ್ಯಾಧಿಕಾರಿ

‘ಕಸ ವಿಲೇವಾರಿ ಘಟಕದ ಪ್ರದೇಶದಲ್ಲಿ ನಾಲ್ಕು ಎಕರೆ ಜಮೀನು ಲಭ್ಯವಿದೆ. ಈಗಾಗಲೇ ಇರುವ ಕಟ್ಟಡದೊಂದಿಗೆ ಇದಕ್ಕೆ ಸಂಬಂಧಿಸಿದಂತೆ, ಇನ್ನೂ ಮೂರು ಕಟ್ಟಡ ನಿರ್ಮಿಸಲಾಗುತ್ತಿದೆ. ಆದ್ದರಿಂದ ಗ್ರಾಮಾಂತರ ಪಂಚಾಯಿತಿಗೆ ಕಸ ಹಾಕಲು ಜಾಗ ನೀಡಲು ಸಾಧ‍್ಯವಿಲ್ಲ. ಕಸ ವಿಲೇವಾರಿ ಘಟಕದಲ್ಲಿ ಗೊಬ್ಬರ ತಯಾರಿಕೆಗೆ ನೀರನ್ನು ಕೊಳವೆ ಬಾವಿಯಿಂದ ಬಳಸುತ್ತಿದ್ದೇವೆ. ವಿದ್ಯುತ್ ಸಂಪರ್ಕದ ಸಮಸ್ಯೆಯಿಂದಾಗಿ ನೀರು ಸಿಗುತ್ತಿಲ್ಲ. ಶೀಘ್ರ ಸಮಸ್ಯೆ ಬಗೆಹರಿಯಲಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಸವರಾಜ್ ಟಾಕಪ್ಪ ಶಿಗ್ಗಾಂವಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕಸ ವಿಲೇವಾರಿ ಘಟಕದ ಪಕ್ಕದಲ್ಲಿ ಕಸ ಎಸೆಯುವವರು ಯಾರು ಎಂದು ಗೊತ್ತಾಗುತ್ತಿಲ್ಲ. ದಾರಿ ಉದ್ದಕ್ಕೂ ಮೂ‍ರ್ನಾಲ್ಕು ಕಡೆಗಳಲ್ಲಿ ಕಸ ಸುರಿದಿದ್ದಾರೆ. ಕಸ ವಿಲೇವಾರಿ ಘಟಕದ ಯಂತ್ರದ ಮೋಟಾರು ಹಾಳಾಗಿತ್ತು. ಇದೀಗ ದುರಸ್ತಿ ಪಡಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.