ADVERTISEMENT

ಹೇಮಾವತಿ ನದಿಯಲ್ಲಿ ನಂದಿ ವಿಗ್ರಹ ಪತ್ತೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 13:19 IST
Last Updated 4 ಜುಲೈ 2022, 13:19 IST
ಮೂಡಿಗೆರೆ ತಾಲ್ಲೂಕಿನ ಬೆಟ್ಟದಮನೆ ಗ್ರಾಮದ ಹೇಮಾವತಿ ನದಿಯಲ್ಲಿ ಪತ್ತೆಯಾಗಿರುವ ಕಲ್ಲಿನ ನಂದಿ ವಿಗ್ರಹ
ಮೂಡಿಗೆರೆ ತಾಲ್ಲೂಕಿನ ಬೆಟ್ಟದಮನೆ ಗ್ರಾಮದ ಹೇಮಾವತಿ ನದಿಯಲ್ಲಿ ಪತ್ತೆಯಾಗಿರುವ ಕಲ್ಲಿನ ನಂದಿ ವಿಗ್ರಹ   

ಮೂಡಿಗೆರೆ: ತಾಲ್ಲೂಕಿನ ಬೆಟ್ಟದಮನೆ ಗ್ರಾಮದಲ್ಲಿ ಹರಿಯುವ ಹೇಮಾವತಿ ನದಿಯಲ್ಲಿ ಕಲ್ಲಿನ ನಂದಿ ವಿಗ್ರಹ ಪತ್ತೆಯಾಗಿದೆ.

ಮೂಡಿಗೆರೆಯಿಂದ ಸಕಲೇಶಪುರಕ್ಕೆ ತೆರಳುವ ಮಾರ್ಗದಲ್ಲಿರುವ ಬೆಟ್ಟದಮನೆ ಗ್ರಾಮದಲ್ಲಿ ಹೇಮಾವತಿ ನದಿ ಸೇತುವೆಯ ಬಳಿ ಅರ್ಧ ಮುಳುಗಿದ ಸ್ಥಿತಿಯಲ್ಲಿ ಕಲ್ಲಿನ ನಂದಿ ವಿಗ್ರಹ ಕಾಣಿಸಿಕೊಂಡಿದೆ. ವಿಗ್ರಹದ ಬಲ ಕಿವಿಯ ಭಾಗವು ಹಾನಿಗೊಳಗಾಗಿದ್ದು, ವಿಗ್ರಹದ ಮೇಲ್ಭಾಗದಲ್ಲಿ ಕೆತ್ತನೆಯಿದೆ.

ನದಿಯಲ್ಲಿ ನಂದಿ ವಿಗ್ರಹ ಕಾಣಿಸಿಕೊಂಡ ಸುದ್ದಿ ಹರಡಿದ ಬೆನ್ನಲ್ಲೇ, ಸುತ್ತಲಿನ ಗ್ರಾಮದ ಜನರು ಬಂದು ವಿಗ್ರಹವನ್ನು ವೀಕ್ಷಿಸಿದರು. ವಿಗ್ರಹ ಹಾನಿಯಾಗಿರುವುದರಿಂದ ನದಿಯಲ್ಲಿ ಹಾಕಿರಬಹುದು, ದೇವಾಯದ ವಿಗ್ರಹವನ್ನು ಎಸೆದಿರಬಹುದು ಹೀಗೆ ಹಲವು ಅಭಿಪ್ರಾಯಗಳು ವ್ಯಕ್ತವಾದವು.

ADVERTISEMENT

ಹೇಮಾವತಿ ನದಿ ಪಾತ್ರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದರೆ ವಿಗ್ರಹವು ಕೊಚ್ಚಿಕೊಂಡು ಹೋಗಲಿದೆ.

‘ಹೇಮಾವತಿ ನದಿಯಲ್ಲಿ ಕಲ್ಲಿನ ನಂದಿ ವಿಗ್ರಹ ಪತ್ತೆಯಾಗಿರುವ ಬಗ್ಗೆ ಮಾಹಿತಿ ಬಂದಿದೆ. ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿದ್ದೇನೆ. ಪರಿಶೀಲಿಸಿದ ಬಳಿಕ ಅದನ್ನು ನದಿಯಿಂದ ಹೊರತೆಗೆಯಲು ಕ್ರಮ ಕೈಗೊಳ್ಳಲಾಗುವುದು. ವಿಗ್ರಹದ ಬಗ್ಗೆ ಪುರಾತತ್ವ ಇಲಾಖೆಗೂ ಮಾಹಿತಿ ನೀಡಿ ಕ್ರಮವಹಿಸಲಾಗುವುದು’ ಎಂದು ತಹಶೀಲ್ದಾರ್ ನಾಗರಾಜ್ ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.