ADVERTISEMENT

ತರೀಕೆರೆ | ದೇಸಿ ಹಸು: ನಂದಿನಿ ಹೈನುಗಾರಿಕೆ ಯಶಸ್ಸು

ಗೀರ್ ತಳಿ ಸಾಕಾಣಿಕೆ ಮೂಲಕ ಹಾಲು, ತುಪ್ಪ, ಧೂಪ ತಯಾರಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 3:52 IST
Last Updated 13 ಜುಲೈ 2022, 3:52 IST
ಲಿಂಗದಹಳ್ಳಿ ಎಸ್ ನಂದಿನಿ ಸಾಕಿರುವ ಗೀರ್ ತಳಿಯ ಹಸುಗಳು.
ಲಿಂಗದಹಳ್ಳಿ ಎಸ್ ನಂದಿನಿ ಸಾಕಿರುವ ಗೀರ್ ತಳಿಯ ಹಸುಗಳು.   

ತರೀಕೆರೆ: ಕಾಮಧೇನು ಪೂಜಿಸಲು ಮಾತ್ರವಲ್ಲ, ಸಾಕಿಯೂ ಯಶಸ್ಸು ಪಡೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆಲಿಂಗದಹಳ್ಳಿ ಗ್ರಾಮದ ಎಸ್. ನಂದಿನಿ. ದೇಸಿ ಗೀರ್ ಹಸುವಿನ ಹೈನುಗಾರಿಕೆ ಮೂಲಕ ಸ್ವಾವಲಂಬನೆ ಸಾಧಿಸಿದ್ದಾರೆ.

ಬೆಂಗಳೂರಿನ ನಂದಿನಿ ಅವರು ಎಂಬಿಎ ಪದವೀಧರೆ. ರೈಲ್ವೆ ಇಲಾಖೆಯಲ್ಲಿನ ಕೈ ತುಂಬ ಸಂಬಳದ ನೌಕರಿಗೆ ವಿದಾಯ ಹೇಳಿ, ಆಯ್ದುಕೊಂಡಿದ್ದು ಹೈನುಗಾರಿಕೆ. ಅವರ ಬೆನ್ನೆಲುಬಾಗಿ ನಿಂತಿದ್ದು, ಪತಿ ಅಮರನಾಥ, ಅಪ್ಪ ಶೇಖರಪ್ಪ ಮತ್ತು ಅಮ್ಮ ಸುನಂದಾ.

ಇಲ್ಲಿನ 8 ಎಕರೆ ಜಮೀನಿನಲ್ಲಿ ಫಾರ್ಮ್‌ ಆರಂಭಿಸಿದ ಅವರು, ಭಾರತದ ದೇಸಿ ‘ಗೀರ್’ ತಳಿಯ 45 ರಾಸುಗಳನ್ನು ಸಾಕಿದ್ದಾರೆ. ಅವುಗಳಿಂದ ಹಾಲು, ಬೆಣ್ಣೆ, ತುಪ್ಪ, ಬೆರಣಿ, ಧೂಪವನ್ನು ತಯಾರಿಸುತ್ತಿದ್ದಾರೆ.

ADVERTISEMENT

‘ಗೀರ್ ಹಸುವಿನ ಹಾಲಿನಲ್ಲಿ ಅತಿ ಹೆಚ್ಚು ಪೋಷಕಾಂಶಗಳಿದ್ದು, ಬೇಡಿಕೆ ಇದೆ’ ಎನ್ನುವ ನಂದಿನಿ ಮತ್ತು ಅಮರನಾಥ, ಗ್ರಾಹಕರಿಗೂ ಉತ್ತಮ ಗುಣಮಟ್ಟದ ಹಾಲು ಪೊರೈಕೆ ಮಾಡುತ್ತಿದ್ದಾರೆ.

‘ನಾಲ್ಕು ವರ್ಷಗಳ ಹಿಂದೆ ಗುಜರಾತಿನ ನಾಸಿಕ್‌ನಿಂದ ದೇಸಿ ಗೀರ್ ತಳಿಯ 30 ಹಸುಗಳನ್ನು ಖರೀದಿಸಿ ತಂದಿದ್ದೆವು. ಅವುಗಳಿಗೆ ಕೊಟ್ಟಿಗೆ ನಿರ್ಮಿಸಿದೆವು. ಹಸುಗಳು ದಿನಕ್ಕೆ ತಲಾ 12 ರಿಂದ 14 ಲೀಟರ್ ಹಾಲು ನೀಡುತ್ತಿವೆ. ಹೈನುಗಾರಿಕೆ ಕೃಷಿಗೆ ಪೂರಕ. ಸ್ವಲ್ಪ ಶ್ರಮದಾಯಕವಾದರೂ, ಲಾಭದಾಯಕ’ ಎಂದು ನಂದಿನಿ ವಿವರಿಸಿದರು.

ದೇಶದಲ್ಲಿ ಮಾತ್ರವಲ್ಲ, ದುಬೈ, ಯುಎಸ್‌ಎ, ಕುವೈತ್, ಇಂಗ್ಲೆಂಡ್‌ಗೂ ಉತ್ಪನ್ನಗಳನ್ನು ರಪ್ತು ಮಾಡುತ್ತಿದ್ದಾರೆ. ‘ಬೆರಣಿ’ಯ ಧೂಪಕ್ಕೆ ಅಂತರರಾಷ್ಟೀಯ ಮಾರುಕಟ್ಟೆ ಕಲ್ಪಿಸಿಕೊಂಡಿದ್ದಾರೆ. ಹಸುವಿನ ಗಂಜಲದಿಂದಲು ‘ಗೋ ಅರ್ಕ’ ತಯಾರಿಸುವ ಯೋಜನೆ ಹಾಕಿಕೊಂಡಿದ್ದಾರೆ. ಹೇರ್ ಹರ್ಬಲ್, ಜೇನುತುಪ್ಪನ್ನು ಪರಿಚಯಿಸಿದ್ದಾರೆ. ಪೂರಕ ಉತ್ಪನ್ನಗಳ ವ್ಯವಹಾರ ಅವರ ಕೈ ಹಿಡಿದಿದೆ.

ಗೋ ಮೂತ್ರದಿಂದ ಜೀವಾಮೃತ ಮತ್ತು ಗೊಬ್ಬರದಿಂದ ತೆಂಗು, ಅಡಿಕೆ, ಕಾಫಿ, ಕಾಳು ಮೆಣಸು, ಬಾಳೆ, ಪಪಾಯಿ, ಸೇಬು, ಚಿಕ್ಕು, ತರಕಾರಿಯನ್ನು ಸಾವಯವ ವಿಧಾನ ಅನುಸರಿಸಿ ಬೆಳೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.