
ನರಸಿಂಹರಾಜಪುರ: ಮಂಗನ ಕಾಯಿಲೆ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ವಿನಯ್ ಹೇಳಿದರು.
ಆಡುವಳ್ಳಿ ಗ್ರಾಮ ಪಂಚಾಯಿತಿಯ ಆಡುವಳ್ಳಿಯಲ್ಲಿ 30 ವರ್ಷದ ಯುವಕನಿಗೆ ಮಂಗನ ಕಾಯಿಲೆ ದೃಢಪಟ್ಟ ಹಿನ್ನೆಲೆ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಬೇಸಿಗೆಯಲ್ಲಿ ಮಲೆನಾಡಿನಲ್ಲಿ ಮಂಗನ ಕಾಯಿಲೆಯು ಕಂಡುಬರುವ ಹಿನ್ನೆಲೆ ಸಾರ್ವಜನಿಕರು ಸೂಕ್ತ ಕ್ರಮಗಳನ್ನು ತೆಗೆದುಕೊಂಡು, ಕಾಯಿಲೆಯಿಂದ ರಕ್ಷಣೆ ಹೊಂದಬೇಕು. ಸೋಂಕಿತ ಉಣ್ಣೆಗಳ ಕಡಿತದಿಂದ ಮಂಗನ ಕಾಯಿಲೆಯು ಮನುಷ್ಯರಲ್ಲಿ ಕಂಡುಬರುತ್ತದೆ. ತೀವ್ರ ಜ್ವರ, ತಲೆನೋವು, ಮೈಕೈ ನೋವು, ವಾಂತಿ, ಕಣ್ಣು ಕೆಂಪಾಗುವ ಲಕ್ಷಣಗಳಿಂದ ಕಾಯಿಲೆ ಪ್ರಾರಂಭವಾಗಿ, ನಿರ್ಲಕ್ಷ್ಯ ವಹಿಸಿದರೆ ಮರಣ ಸಂಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಾರ್ವಜನಿಕರು ಈ ಮೇಲಿನ ಲಕ್ಷಣಗಳು ಕಂಡುಬಂದರೆ, ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ತಮ್ಮ ರಕ್ತಗಳನ್ನು ಪರೀಕ್ಷಿಸಿಕೊಳ್ಳಬೇಕು ಎಂದರು.
ಮುಂಜಾಗ್ರತಾ ಕ್ರಮವಾಗಿ ಅನಾವಶ್ಯಕವಾಗಿ ಕಾಡಿಗೆ ಹೋಗಬಾರದು. ಕಾಡಿಗೆ ಹೋಗಬೇಕಾದ ಸಂದರ್ಭ ಬಂದಲ್ಲಿ ಮೈತುಂಬಾ ಬಟ್ಟೆ ಧರಿಸಿ, ಉಣ್ಣೆ ನಿವಾರಣ ತೈಲವಾದ ಡೆಪಾ ತೈಲವನ್ನು ಹಚ್ಚಿಕೊಂಡು ಹೋಗಬೇಕು. ಕಾಡಿನಿಂದ ಬಂದ ನಂತರ ಬಿಸಿನೀರಿನಲ್ಲಿ ಸ್ನಾನಮಾಡಿ, ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆದು ಒಣಗಿಸಿ ಮತ್ತೆ ಉಪಯೋಗಿಸಬೇಕು. ಗ್ರಾಮದ ವ್ಯಾಪ್ತಿ ಅಥವಾ ಕಾಡಿನಲ್ಲಿ ಮಂಗ ಮರಣ ಹೊಂದಿದಲ್ಲಿ ಆರೋಗ್ಯ ಇಲಾಖೆಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಆಶಾ ಕಾರ್ಯಕರ್ತೆಯರಿಗೆ ಅಥವಾ ಗ್ರಾಮ ಪಂಚಾಯಿತಿಯ ಮಾಹಿತಿಗೆ ನೀಡಬೇಕು ಎಂದು ಹೇಳಿದರು.
ಆಡುವಳ್ಳಿ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಪರೀಕ್ಷೆಗಾಗಿ ಉಣ್ಣೆಗಳನ್ನು ಸಂಗ್ರಹಿಸಿ ಪ್ರಯೋಗ ಶಾಲೆಗೆ ಕಳುಹಿಸಲಾಗಿದೆ. ಗ್ರಾಮದ ವ್ಯಾಪ್ತಿಯ ಎಲ್ಲಾ ಮನೆಗಳಿಗೂ ಡೆಪಾತೈಲವನ್ನು, ಆರೋಗ್ಯ ಶಿಕ್ಷಣವನ್ನು ನೀಡಲಾಗಿದೆ. ಜ್ವರ ಸಮೀಕ್ಷೆಯನ್ನು ನಡೆಸಿ, ರಕ್ತ ಸಂಗ್ರಹಿಸಿ ಪ್ರಯೋಗ ಶಾಲೆಗೆ ಕಳುಹಿಸಲಾಗಿದೆ. ಶಾಲೆಗಳಲ್ಲಿ ಮತ್ತು ಗ್ರಾಮ ಪಂಚಾಯಿತಿಯಲ್ಲಿ ಆರೋಗ್ಯ ಅರಿವು ಕಾರ್ಯಕ್ರಮ ನಡೆಸಲಾಗಿದ್ದು, ಸ್ಥಳೀಯರಿಗೆ ಕರಪತ್ರಗಳನ್ನು ವಿತರಿಸಿ ಆರೋಗ್ಯ ಶಿಕ್ಷಣ ನೀಡಲಾಗಿದೆ. ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆಗೆ ಪ್ರತ್ಯೇಕ ವಾರ್ಡ್ ಪ್ರಾರಂಭಿಸಲಾಗಿದೆ. ಮಂಗನ ಕಾಯಿಲೆ ಬಗ್ಗೆ ಸಾರ್ವಜನಿಕರು ಭಯಭೀತರಾಗಬಾರದು, ಅಲ್ಲದೆ ನಿರ್ಲಕ್ಷ್ಯ ವಹಿಸಬಾರದು ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.