
ನರಸಿಂಹರಾಜಪುರ: ತಾಲ್ಲೂಕು ವ್ಯಾಪ್ತಿಯಲ್ಲಿ ಭದ್ರಾನದಿ, ತುಂಗಾನದಿ ಹಾಗೂ ಹಲವು ಹಳ್ಳಗಳು ಹರಿಯುತ್ತಿದ್ದರೂ ಪಟ್ಟಣದ ವ್ಯಾಪ್ತಿಯ ಜನರಿಗೆ ಕುಡಿಯುವ ನೀರಿಗೆ ಕೊಳವೆ ಬಾವಿಯೇ ಆಸರೆಯಾಗಿದ್ದು, ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆಯಿಲ್ಲವಾಗಿದೆ.
ಪಟ್ಟಣದ ವ್ಯಾಪ್ತಿಯಲ್ಲಿ 11 ವಾರ್ಡ್‌ಗಳಿದ್ದು 7,458 ಜನಸಂಖ್ಯೆಯಿದೆ. ಪಟ್ಟಣದ ವ್ಯಾಪ್ತಿಯಲ್ಲಿ 1,791 ಮನೆಗಳಿದ್ದು, 1,482 ಮನೆಗಳಿಗೆ ಕುಡಿಯುವ ನೀರಿನ ನಲ್ಲಿ ಸಂಪರ್ಕವಿದೆ. ಕೆಲವು ಮನೆಗಳಿಗೆ ಸ್ವಂತ ಕೊಳವೆ ಬಾವಿಯಿದೆ. ಕುಡಿಯುವ ನೀರು ಪೂರೈಸಲು ಪಟ್ಟಣ ಪಂಚಾಯಿತಿ ವತಿಯಿಂದ ಪಟ್ಟಣದ ವ್ಯಾಪ್ತಿಯಲ್ಲಿ 39 ಕೊಳವೆ ಬಾವಿಗಳನ್ನು ಕೊರೆಯಲಾಗಿದ್ದು, 5 ಓವರ್ ಹೆಡ್ ಟ್ಯಾಂಕ್‌ಗಳ ಮೂಲಕ ಪ್ರತಿನಿತ್ಯ 1ಎಂಎಲ್‌ಡಿ ನೀರು ಸರಬರಾಜಾಗುತ್ತದೆ. ನಲ್ಲಿ ಸಂಪರ್ಕವಿರುವ ಮನೆಗೆ ಪ್ರತಿನಿತ್ಯ 1ಗಂಟೆ ನೀರು ಪೂರೈಸಲಾಗುತ್ತಿದೆ.
ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ತಾಲ್ಲೂಕಿನ ಮೆಣಸೂರು ಗ್ರಾಮದ ಹೊಸ ಸೇತುವೆ ಬಳಿ ಕಬ್ಬಿನ ಹಳ್ಳಕ್ಕೆ ₹10 ಕೋಟಿ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸಲಾಗಿತ್ತು. ಆದರೆ, ಬ್ಯಾರೇಜ್‌ನಲ್ಲಿ ನಿರೀಕ್ಷಿತ ನೀರು ಶೇಖರಣೆಯಾಗದೆ ವಿಫಲವಾಗಿದ್ದರಿಂದ ಇದು ಇನ್ನೂ ಪಟ್ಟಣ ಪಂಚಾಯಿತಿಗೆ ಹಸ್ತಾಂತರಗೊಂಡಿಲ್ಲ. ಪ್ರಸ್ತುತ ಪಟ್ಟಣಕ್ಕೆ ತಾಲ್ಲೂಕಿನ ಮುತ್ತಿನಕೊಪ್ಪ ವ್ಯಾಪ್ತಿಯಲ್ಲಿರುವ ತುಂಗಾನದಿಯಿಂದ ನೀರು ಪೂರೈಸಲು ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ₹17.50 ಕೋಟಿ ಮಂಜೂರಾಗಿದ್ದು, ಪಟ್ಟಣದ ವ್ಯಾಪ್ತಿಯ 11 ವಾರ್ಡ್‌ಗಳ ನಿವಾಸಿಗಳಿಗೆ ನೀರು ಪೂರೈಕೆಗೆ 27 ಕಿ.ಮೀ ಕೊಳವೆ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದ್ದು ಕಾಮಗಾರಿ ಪ್ರಗತಿಯಲ್ಲಿದೆ.
ಕುಡಿಯುವ ನೀರಿಗೆ ಪಟ್ಟಣದ ಜನರು ಕೊಳವೆ ಬಾವಿಯನ್ನೇ ಅವಲಂಬಿಸಿದ್ದು, ಮಳೆ ಕಡಿಮೆಯಾದಾಗ ಮಾತ್ರ ಸಮಸ್ಯೆಯಾಗುತ್ತದೆ. ಹಾಗಾಗಿ ಹಿಂದೆ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಯಿಂದ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಯೋಜನೆ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಸರ್ಕಾರ ಅಮೃತ್ 2.0 ಯೋಜನೆಯಡಿಗೆ ತಾಲ್ಲೂಕಿನ ಮುತ್ತಿನಕೊಪ್ಪ ವ್ಯಾಪ್ತಿಯಲ್ಲಿ ಹರಿಯುವ ತುಂಗಾ ನದಿಯಿಂದ ಕುಡಿಯುವ ನೀರು ಪೂರೈಕೆಗೆ ಅನುಮೋದನೆ ನೀಡಿದೆ. ಈ ಯೋಜನೆ ಸಫಲವಾದಲ್ಲಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಲಭ್ಯವಾಗಲಿದೆ ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆಯಿಲ್ಲ: ಮುಖ್ಯಾಧಿಕಾರಿ
ಪಟ್ಟಣದ ವ್ಯಾಪ್ತಿಯಲ್ಲಿ 39 ಕೊಳವೆ ಬಾವಿಗಳ ಮೂಲಕ ಪ್ರತಿನಿತ್ಯ 1ಗಂಟೆ ನೀರು ಪೂರೈಸಲಾಗುತ್ತಿದ್ದು ಕುಡಿಯುವ ನೀರು ಸರಬರಾಜು ಮೋಟರ್ ಹಾಳಾದರೆ ದುರಸ್ತಿಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ₹4 ಲಕ್ಷ ವೆಚ್ಚದಲ್ಲಿ ಹೆಚ್ಚುವರಿ ಮೋಟರ್ ಖರೀದಿ ಮಾಡಿಟ್ಟುಕೊಳ್ಳಲಾಗಿದ್ದು ಯಾವುದೇ ಕಾರಣಕ್ಕೂ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ. ಪ್ರತಿ ತಿಂಗಳು ಚಿಕ್ಕಮಗಳೂರಿನ ಎಐಟಿ ಸಂಸ್ಥೆಯಿಂದ ನೀರಿನ ಗುಣಮಟ್ಟ ಪರೀಕ್ಷೆ ಮಾಡಿಸಲಾಗುತ್ತದೆ. ಅಮೃತ್ 2.0 ಯೋಜನೆ ಕಾಮಗಾರಿ ಪೂರ್ಣಗೊಂಡರೆ 24x7 ನೀರು ಪೂರೈಕೆಯಾಗುತ್ತದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ. ಮಂಜುನಾಥ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.