ADVERTISEMENT

ನರಸಿಂಹರಾಜಪುರ:ಕುಂಟುತ್ತ ಸಾಗಿದೆ ರೈತಸಂಪರ್ಕ ಕೇಂದ್ರದ ಕಾಮಗಾರಿ

ಅನುದಾನ ಬಿಡುಗಡೆಯಾಗಿದ್ದರೂ ಕಾಮಗಾರಿ ವಿಳಂಬ

ಕೆ.ವಿ.ನಾಗರಾಜ್
Published 25 ಅಕ್ಟೋಬರ್ 2025, 7:20 IST
Last Updated 25 ಅಕ್ಟೋಬರ್ 2025, 7:20 IST
ನರಸಿಂಹರಾಜಪುರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಸಮೀಪ ನಿರ್ಮಿಸಲಾಗುತ್ತಿದ್ದ ರೈತ ಸಂಪರ್ಕ ಕೇಂದ್ರದ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದೆ
ನರಸಿಂಹರಾಜಪುರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಸಮೀಪ ನಿರ್ಮಿಸಲಾಗುತ್ತಿದ್ದ ರೈತ ಸಂಪರ್ಕ ಕೇಂದ್ರದ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದೆ   

ರಸಿಂಹರಾಜಪುರ: ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಕಟ್ಟಡದ ಸಮೀಪ ನಿರ್ಮಿಸಲಾಗುತ್ತಿರುವ ರೈತ ಸಂಪರ್ಕ ಕೇಂದ್ರಕ್ಕೆ ಅನುದಾನ ಬಿಡುಗಡೆಯಾಗಿದ್ದರೂ ಕಾಮಗಾರಿ ಕುಂಟುತ್ತಾ ಸಾಗಿದೆ.

ರಾಜ್ಯ ಸರ್ಕಾರದ ಆಶಯದಂತೆ ಪ್ರತಿ ಹೋಬಳಿಗೆ ಒಂದರಂತೆ ರೈತಸಂಪರ್ಕ ಕೇಂದ್ರ ಇರಬೇಕೆಂಬ ಉದ್ದೇಶದಿಂದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಮೀಪದಲ್ಲಿನ ನಿವೇಶನದಲ್ಲಿ ಕೇಂದ್ರದ ಕಟ್ಟಡ ಕಾಮಗಾರಿ ಆರಂಭಿಸಲಾಗಿದೆ. ರೈತರಿಗೆ ಕೃಷಿ ಸಂಬಂಧಿತ ಚಟುವಟಿಕೆಯ ತರಬೇತಿ ನೀಡುವುದು, ಬಿತ್ತನೆ ಬೀಜಗಳ ವಿತರಣೆ, ಕೃಷಿ ಪರಿಕರಗಳ ವಿತರಣೆ, ಕೃಷಿಕ ಸಮಾಜದ ಸಭೆ, ಸಮಾರಂಭ ನಡೆಸುವುದು ರೈತ ಸಂಪರ್ಕ ಕೇಂದ್ರದ ಪ್ರಮುಖ ಕಾರ್ಯವಾಗಿದೆ.

ಈ ರೈತ ಸಂಪರ್ಕ ಕೇಂದ್ರದ ಕಟ್ಟಡ ಕಾಮಗಾರಿಗೆ ಮಾರ್ಚ್ 2024ರಲ್ಲಿ ಚಿಕ್ಕಮಗಳೂರಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. 2025ರ ಜನವರಿ 30ರಂದು ನರಸಿಂಹರಾಜಪುರದಲ್ಲಿ ಕಟ್ಟಡ ನಿರ್ಮಾಣಕ್ಕೆ ಶಾಸಕ ಟಿ.ಡಿ.ರಾಜೇಗೌಡ ಅವರು ಭೂಮಿ ಪೂಜೆ ನೆರವೇರಿಸಿದ್ದರು. ₹2ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕಟ್ಟಡ ಕಾಮಗಾರಿಯನ್ನು ಕೆಆರ್‌ಐಡಿಎಲ್ ನಿರ್ವಹಿಸುತ್ತಿದೆ.

ADVERTISEMENT

ಕಾಮಗಾರಿಗೆ ತಗುಲುವ ₹2ಕೋಟಿ ವೆಚ್ಚದಲ್ಲಿ ಸರ್ಕಾರ ₹1ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ಇದುವರೆಗೆ ಕಟ್ಟಡದ ತಳಪಾಯ, ಪಿಲ್ಲರ್ ನಿರ್ಮಿಸಲಾಗಿದೆ.

ಮಳೆಗಾಲವಾಗಿದ್ದರಿಂದ ಕಟ್ಟಡ ಗುತ್ತಿಗೆ ವಹಿಸಿಕೊಂಡವರು ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ. ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಕೆಆರ್‌ಐಡಿಎಲ್‌ಗೆ ಪತ್ರ ಬರೆಯಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಹೇಶ್ ತಿಳಿಸಿದರು.

ಕಟ್ಟಡ ಕಾಮಗಾರಿ ಕೈಗೊಳ್ಳಲು ಈ ವ್ಯಾಪ್ತಿಯಲ್ಲಿದ್ದ ವಿದ್ಯುತ್ ಮಾರ್ಗವನ್ನು ಬದಲಾಯಿಸಬೇಕಾಗಿದೆ. ಇದಕ್ಕೆ ಈಗಾಗಲೇ ಮೆಸ್ಕಾಂಗೆ ಅರ್ಜಿಸಲ್ಲಿಸಲಾಗಿದ್ದು, ವಿದ್ಯುತ್ ಮಾರ್ಗ ಬದಲಾದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಕೆಆರ್‌ಐಡಿಎಲ್‌ನ ಎಇಇ ಸಂತೋಷ್ ತಿಳಿಸಿದರು.

ವಿದ್ಯುತ್ ಮಾರ್ಗ ಬದಲಿಸಲು ಕಟ್ಟಡ ಪಕ್ಕದಲ್ಲಿರುವ ವ್ಯಕ್ತಿಗಳು ಆಕ್ಷೇಪ ವ್ಯಕ್ತ ಪಡಿಸಿದ್ದರು. ಹಾಗಾಗಿ ವಿದ್ಯುತ್ ಮಾರ್ಗ ಬದಲಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ಗುತ್ತಿಗೆದಾರರು ಹಣ ಪಾವತಿಸಿದ ಕೂಡಲೇ ಮಾರ್ಗ ಬದಲಿಸಲಾಗುವುದು ಎಂದು ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಗೌತಮ್ ತಿಳಿಸಿದರು.

ಕಟ್ಟಡ ಕಾಮಗಾರಿ ಕೈಗೊಳ್ಳಲು ಇರುವ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟ ಎಂಜಿನಿಯರ್‌ಗೆ ಸೂಚಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಿ ಕಟ್ಟಡ ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಪ್ರಜಾವಾಣಿಗೆ ತಿಳಿಸಿದರು.

ನರಸಿಂಹರಾಜಪುರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಸಮೀಪ ನಿರ್ಮಿಸಲಾಗುತ್ತಿದ್ದ ರೈತ ಸಂಪರ್ಕ ಕೇಂದ್ರದ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.