ADVERTISEMENT

ನರಸಿಂಹರಾಜಪುರ: ರಸ್ತೆ ವಿಸ್ತರಣೆಗೆ ₹25 ಕೋಟಿ ಬಿಡುಗಡೆ

ಹೊನ್ನೇಕೊಡಿಗೆ ಸೇತುವೆ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ: ಎಂ.ಶ್ರೀನಿವಾಸ್

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 8:44 IST
Last Updated 1 ಮಾರ್ಚ್ 2026, 8:44 IST

ನರಸಿಂಹರಾಜಪುರ: ಪಟ್ಟಣದ ರಸ್ತೆ ವಿಸ್ತರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ₹60 ಕೋಟಿ ಮಂಜೂರು ಮಾಡಿದ್ದು, ಇದರಲ್ಲಿ ₹25 ಕೋಟಿ ಬಿಡುಗಡೆಯಾಗಿದ್ದು ಉಪ ವಿಭಾಗಾಧಿಕಾರಿಗಳ ಖಾತೆಗೆ ಜಮಾ ಆಗಿದೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಶ್ರೀನಿವಾಸ್ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಥಮ ಹಂತದಲ್ಲಿ ಪ್ರವಾಸಿ ಮಂದಿರದಿಂದ ಪೊಲೀಸ್‌ ಠಾಣೆಯವರೆಗೆ ರಸ್ತೆ ವಿಸ್ತರಣೆಯಾಗಲಿದೆ. ಇದರಲ್ಲಿ 161 ಖಾತೆದಾರರ ಮನೆ, ಅಂಗಡಿ ಇದ್ದು, 161ರಲ್ಲಿ 150 ಜನರು ಸ್ವಯಂ ಒಪ್ಪಿಗೆ ಪತ್ರ ಹಾಗೂ ಎಲ್ಲ ದಾಖಲೆ ನೀಡಿದ್ದಾರೆ. ಅವರ ಖಾತೆಗಳಿಗೆ ಮುಂದಿನ 2-3 ದಿನಗಳಲ್ಲಿ ಪರಿಹಾರ ಹಣ ಜಮಾ ಮಾಡಲಾಗುವುದು. ಉಳಿದ 11 ಜನರು ಒಪ್ಪಿಗೆ ನೀಡದೆ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದರು.

ಜಯಪುರ, ಬಾಳೆಹೊನ್ನೂರು ಭಾಗದಲ್ಲಿ ರಸ್ತೆ ವಿಸ್ತರಣೆ ಮಾಡುವ ಸಂದರ್ಭದಲ್ಲಿ ಪರಿಹಾರ ನೀಡಿರಲಿಲ್ಲ. ತೀವ್ರ ಆಸಕ್ತಿ ವಹಿಸಿ, 2-3 ವರ್ಷ ಪ್ರಯತ್ನ ಪಟ್ಟು ಖಾತೆದಾರರಿಗೆ ಪರಿಹಾರ ನೀಡಲು ₹60 ಕೋಟಿ ಮಂಜೂರು ಮಾಡಿಸಿಕೊಂಡು ಬಂದಿದ್ದೇನೆ. ಆ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಪ್ರಶಾಂತಶೆಟ್ಟಿ ಸಹಕಾರ ನೀಡಿದ್ದರು ಎಂದು ನೆನಪಿಸಿಕೊಂಡರು.

ADVERTISEMENT

ಪಟ್ಟಣದ ಪ್ರವಾಸಿ ಮಂದಿರದಿಂದ ಪೊಲೀಸ್ ಠಾಣೆಯವರೆಗೆ ಮೊದಲ ಹಂತದ ರಸ್ತೆ ವಿಸ್ತರಣೆಯಾಗಲಿದ್ದು, ಎರಡನೇ ಹಂತದಲ್ಲಿ ಪಟ್ಟಣ ಪಂಚಾಯಿತಿ ಮುಂಭಾಗದಿಂದ ಸುಂಕದ ಕಟ್ಟೆಯವರೆಗೆ ರಸ್ತೆ ವಿಸ್ತರಣೆಯಾಗಲಿದೆ. 130 ವರ್ಷದ ನಂತರ ಪ್ರಥಮ ಬಾರಿಗೆ ರಸ್ತೆ ವಿಸ್ತರಣೆ ಮಾಡುತ್ತಿದ್ದೇವೆ. 1 ವರ್ಷದೊಳಗೆ ಕಾಮಗಾರಿ ಪೂರ್ಣವಾಗಲಿದ್ದು, ಜನರು ಸಹಕಾರ ನೀಡಬೇಕು. ಸರ್ಕಾರದ ಮಾನದಂಡದಂತೆ ಪರಿಹಾರ ನೀಡಲಾಗುವುದು. ಪ್ರತಿಯೊಬ್ಬ ಮನೆಯ ಖಾತೆದಾರರು ತಮ್ಮ ದಾಖಲೆಗಳನ್ನು ನೀಡಬೇಕು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಪಿ.ಆರ್. ಸದಾಶಿವ, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಶಾಂತ ಶೆಟ್ಟಿ, ಮಾಜಿ ಅಧ್ಯಕ್ಷೆ ಜುಬೇದ, ಮಾಜಿ ಸದಸ್ಯರಾದ ಮಹಮ್ಮದ್ ವಸೀಂ, ಸುನಿಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.