ADVERTISEMENT

ನರಸಿಂಹರಾಜಪುರ ಪಟ್ಟಣ ಪಂಚಾಯಿತಿ: ಅಧ್ಯಕ್ಷೆಯಾಗಿ ಜುಬೇದಾ ಆಯ್ಕೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2021, 5:46 IST
Last Updated 18 ಡಿಸೆಂಬರ್ 2021, 5:46 IST
ನರಸಿಂಹರಾಜಪುರ ಪಟ್ಟಣ ಪಂಚಾಯಿತಿಯ ಅಧ್ಯಕ್ಷೆಯಾಗಿ ಆಯ್ಕೆಯಾದ ಜುಬೇದಾ ಅವರನ್ನು ಪಟ್ಟಣ ಪಂಚಾಯಿತಿ ಸದಸ್ಯರು ಅಭಿನಂದಿಸಿದರು. ಉಪಾಧ್ಯಕ್ಷ ಮುಕುಂದ, ಸದಸ್ಯರಾದ ಸುರಯ್ಯಬಾನು, ಕುಮಾರಸ್ವಾಮಿ, ಪ್ರಶಾಂತ್ ಶೆಟ್ಟಿ, ಉಮಾ, ಮುನಾವರ್ ಪಾಷ ಇದ್ದರು
ನರಸಿಂಹರಾಜಪುರ ಪಟ್ಟಣ ಪಂಚಾಯಿತಿಯ ಅಧ್ಯಕ್ಷೆಯಾಗಿ ಆಯ್ಕೆಯಾದ ಜುಬೇದಾ ಅವರನ್ನು ಪಟ್ಟಣ ಪಂಚಾಯಿತಿ ಸದಸ್ಯರು ಅಭಿನಂದಿಸಿದರು. ಉಪಾಧ್ಯಕ್ಷ ಮುಕುಂದ, ಸದಸ್ಯರಾದ ಸುರಯ್ಯಬಾನು, ಕುಮಾರಸ್ವಾಮಿ, ಪ್ರಶಾಂತ್ ಶೆಟ್ಟಿ, ಉಮಾ, ಮುನಾವರ್ ಪಾಷ ಇದ್ದರು   

ನರಸಿಂಹರಾಜಪುರ: ಇಲ್ಲಿನ ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷೆಯಾಗಿ 1ನೇ ವಾರ್ಡಿನ ಸದಸ್ಯೆ ಜುಬೇದಾ ಅವಿರೋಧವಾಗಿ ಆಯ್ಕೆಯಾದರು.

1 ವರ್ಷದಿಂದ ಪಟ್ಟಣ ಪಂಚಾಯಿತಿ ಅಧ್ಯಕ್ಷೆಯಾಗಿದ್ದ ಸುರಯ್ಯಬಾನು ಈಚೆಗೆ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಶುಕ್ರವಾರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು.

ಪಟ್ಟಣ ಪಂಚಾಯಿತಿಯ 11 ಸ್ಥಾನಗಳಲ್ಲಿ ಕಾಂಗ್ರೆಸ್ 9, ಬಿಜೆಪಿ 2 ಸದಸ್ಯರಿದ್ದಾರೆ. ಜುಬೇದಾ ಮಾತ್ರ ಅಧ್ಯಕ್ಷ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿದರು. ಹೀಗಾಗಿ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ತಹಶೀಲ್ದಾರ್ ಸಿ.ಜಿ.ಗೀತಾ ಘೋಷಿಸಿದರು.

ADVERTISEMENT

ಸಹಾಯಕ ಚುನಾವಣಾಧಿಕಾರಿ ಮಹಮ್ಮದ್‍ ಇಫ್ತಿಕಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ ಇದ್ದರು.

ಅಭಿನಂದನಾ ಸಮಾರಂಭ: ನಂತರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಇ.ಸಿ.ಜೋಯಿ ಮಾತನಾಡಿ, ‘ಜುಬೇದಾ ಅವರಿಗೆ ಜವಾಬ್ದಾರಿ ಹೆಚ್ಚಾಗಿದೆ. ಪ್ರಾಮಾಣಿಕತೆಯಿಂದ ಅಧ್ಯಕ್ಷ ಸ್ಥಾನವನ್ನು ನಿರ್ವಹಿಸಿ ಎಲ್ಲಾ ಸದಸ್ಯರು ಹಾಗೂ ಅಧಿಕಾರಿಗಳ ಸಹಕಾರ ಪಡೆದು, ಮಾದರಿ ಪಟ್ಟಣವನ್ನಾಗಿ ರೂಪಿಸಲು ಶ್ರಮಿಸಬೇಕು’ ಎಂದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಮುಕುಂದ ಮಾತನಾಡಿ, ‘ಪಟ್ಟಣ ಪಂಚಾಯಿತಿಯಲ್ಲಿ ಪ್ರಥಮ ಅವಧಿಯಲ್ಲಿ ಸುರಯ್ಯಬಾನು ಅಧ್ಯಕ್ಷೆಯಾಗಿ ಉತ್ತಮ ಕೆಲಸ ಮಾಡಿದ್ದಾರೆ. 1 ವರ್ಷದ ಅವಧಿಯಲ್ಲಿ ಕೋವಿಡ್‌ನಿಂದ ಆದಾಯ ಕಡಿಮೆಯಾಗಿತ್ತು. ಸರ್ಕಾರದಿಂದ ಅನುದಾನ ಬರಲಿಲ್ಲ. ಜನರಿಗೆ ಆಶ್ವಾಸನೆ ನೀಡಿದಂತೆ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಿಕೊಡಲು ಸಾಧ್ಯವಾಗಲಿಲ್ಲ. ಮುಂದೆ ಜುಬೇದಾ ಅವರ ಅಧ್ಯಕ್ಷತೆಯಲ್ಲಿ ಜನಪರ ಆಡಳಿತ ನೀಡುತ್ತೇವೆ’ ಎಂದು ಭರವಸೆ ನೀಡಿದರು.

ಪಟ್ಟಣ ಪಂಚಾಯಿತಿ ಸದಸ್ಯ ಪ್ರಶಾಂತ್ ಶೆಟ್ಟಿ ಮಾತನಾಡಿದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುರಯ್ಯಬಾನು, ಸದಸ್ಯರಾದ ಕುಮಾರಸ್ವಾಮಿ, ಸೈಯದ್ ವಸೀಂ, ಮುನಾವರ್ ಪಾಷ, ಉಮಾ, ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎಂ.ನಟರಾಜ್, ಮುಖಂಡರಾದ ಕೆ.ಎಂ.ಸುಂದರೇಶ್, ಎಚ್.ಬಿ.ರಘುವೀರ್, ಎಸ್.ಡಿ.ರಾಜೇಂದ್ರ, ಎಲ್.ಮಹೇಶ್, ಎನ್.ಪಿ.ರವಿ, ಎನ್.ಪಿ.ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.